ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮೈಸೂರು ನಗರಾಭಿವೃಧಿ ಪ್ರಾಧಿಕಾರ (ಮುಡಾ) 14 ನಿವೇಶನಗಳನ್ನು ಹಂಚಿರುವ ಪ್ರಕರಣ ಕುರಿತ ತನಿಖೆಗೆ ರಚಿಸಲಾಗಿದ್ದ ಲೋಕಾಯುಕ್ತ ತನಿಖಾ ತಂಡ ಅಂತಿಮ ವರದಿಯನ್ನು ಸಲ್ಲಿಸಲು
ಕಾಲಾವಕಾಶ ಕೋರಿದೆ. ಲೋಕಾಯುಕ್ತ ಪರವಾಗಿ ಹಾಜರಾದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಅಂತಿಮ ವರದಿ ಸಲ್ಲಿಸಲು ಅಲ್ಪಾವಧಿಯ ಸಮಯಾವಕಾಶ ಕೇಳಿದರು. ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗಜಾನನ ಭಟ್ ಅವರು ಸರ್ಕಾರದ ಪರ ವಕೀಲರು ಮಾಡಿದ ಮನವಿಯನ್ನು ಪುರಸ್ಕರಿಸಿ ಮುಂದಿನ ವಿಚಾರಣೆಯನ್ನು ಇದೇ ತಿಂಗಳ 24ಕ್ಕೆ ಮುಂದೂಡಿದರು.
ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಸೂಚನೆಯಂತೆ ಮೈಸೂರು ಲೋಕಾಯುಕ್ತ ಎಸ್ ಪಿ ಉದೇಶ್ ಅವರು ಐದು ದಿನಗಳ ಹಿಂದೆಯೇ ಲೋಕಾಯುಕ್ತ ಎಡಿಜಿಪಿ ಸುಬ್ರಹ್ಮಣೇಶ್ವರ ರಾವ್ ಅವರಿಗೆ ತನಿಖಾ ವರದಿಯನ್ನು ಸಲ್ಲಿಸಿದ್ದಾರೆ. ವರದಿಯನ್ನು
ಲೋಕಾಯುಕ್ತ ಎಡಿಜಿಪಿ ಸುಬ್ರಹ್ಮಣೇಶ್ವರ ರಾವ್ ಮತ್ತು ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಲೋಕಾಯುಕ್ತ ವರದಿಯಲ್ಲಿ ಏನಿದೆ?
ಹಗರಣದ ಅಮೂಲಾಗ್ರ ತನಿಖೆ ನಡೆಸಿರುವ ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್ ಮತ್ತು ಅವರ ತಂಡ ವರದಿಯನ್ನು ಲೋಕಾಯುಕ್ತ ಐಜಿಪಿ ಅವರಿಗೆ ತನಿಖೆಯ ಅಂತಿಮ ವರದಿಯನ್ನು ಸಲ್ಲಿಸಿದೆ. ಬಲ್ಲ ಮೂಲಗಳ ಪ್ರಕಾರ 550 ಪುಟಗಳ ವರದಿ ಸಲ್ಲಿಕೆ ಮಾಡಲಾಗಿದೆ.
ಕೆಲವು ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿರುವುದು, 14 ಸೈಟ್ ಗಳನ್ನು ಹಂಚಿಕೆ ಮಾಡಿರುವುದು ಮೊದಲಾದ ಅಂಶಗಳನ್ನು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. ದೇವರಾಜು ಅವರಿಗೆ ಜಮೀನು ಬಂದ ಹಿನ್ನೆಲೆ, ಡಿನೋಟಿಫಿಕೇಷನ್ ಮತ್ತು ಭೂ ಪರಿವರ್ತನೆ ಹೇಗೆ ಆಯಿತು, ಪಾರ್ವತಿ ಅವರಿಗೆ ನಿವೇಶನ ಹಂಚಿಕೆ, ನಂತರ ನಿವೇಶನಗಳನು ಹಿಂತಿರುಗಿಸಿರುವ ಬಗ್ಗೆ ಮತ್ತು ನಂತರದ ಬೆಳವಣಿಗೆಗಳನ್ನು ಕುರಿತು ತನಿಖೆ ನಡೆಸಲಾಗಿದೆ.
ಲೋಕಾಯುಕ್ತದ ಕಾನೂನು ಕೋಶ ಪರಿಶೀಲನೆ ಮಾಡಲಿದೆ. ನಂತರ ಪ್ರಕರಣ ಚಾರ್ಜ್ ಶೀಟ್ ಗೆ ಯೋಗ್ಯವೋ ಅಥವಾ ಬಿ ರಿಪೋರ್ಟ್ಗೆ ಅರ್ಹವೋ ಎಂಬುದನ್ನು ಕುರಿತು ನಿರ್ಧರಿಸಲಿದೆ. ಫೆ.7ರಂದು ಹೈಕೋರ್ಟ್ ಈ ಪ್ರಕರಣ ಕುರಿತು ಸಿಬಿಐ ತನಿಖೆಗೆ ವಹಿಸಬೇಕೆಂದು ಕೋರಿ
ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅರ್ಜಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು.