ಕೊಂಡಗಾಂವ್: ಛತ್ತೀಸಗಢದ ಕೊಂಡಗಾಂವ್ ಜಿಲ್ಲೆಯಲ್ಲಿ ಕಲುಷಿತ ಆಹಾರ ಸೇವಿಸಿ 9 ವರ್ಷದ ಬಾಲಕಿ ಮೃತಪಟ್ಟಿದ್ದು, 15 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮರ್ದಪಾಲ್ ಪ್ರದೇಶದ ಹಂಗ್ವಾ ಗ್ರಾಮದಲ್ಲಿ ನಡೆದ ಕುಟುಂಬದ ಸಮಾರಂಭದಲ್ಲಿ ಚಿಕನ್ ಮತ್ತು ಪನೀರ್ನಿಂದ ತಯಾರಿಸಲಾಗಿದ್ದ ಆಹಾರವನ್ನು ಸೇವಿಸಿದ ಬಳಿಕ ಹಲವು ಜನರಲ್ಲಿ ವಾಂತಿ, ಭೇದಿ ಸಮಸ್ಯೆಗಳು ಕಾಣಿಸಿಕೊಂಡಿವೆ. ತಕ್ಷಣ ಗ್ರಾಮಕ್ಕೆ ಆರೋಗ್ಯ ತಂಡವನ್ನು ಕಳುಹಿಸಲಾಗಿದೆ. ಅಸ್ವಸ್ಥರನ್ನು ಕೊಂಡಗಾಂವ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಬಾಲಕಿ ಮೃತಪಟ್ಟಿದ್ದಾಳೆ. ಇತರ 15 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೊಂಡಗಾಂವ್ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಆರ್.ಕೆ. ಸಿಂಗ್ ತಿಳಿಸಿದ್ದಾರೆ.
ಕಲುಷಿತ ಆಹಾರ ಸೇವನೆಯಿಂದ ಹೀಗಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸಮಾರಂಭ ನಡೆದ ಮನೆಯಿಂದ ಪನೀರ್ ಮತ್ತು ಚಿಕನ್ ಆಹಾರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಗ್ರಾಮಸ್ಥರನ್ನು ಪರೀಕ್ಷಿಸಲು ಆರೋಗ್ಯ ಶಿಬಿರವನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಘಟನೆ ಕುರಿತು ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಗೆ ದಾಖಲಾದವರು ಆರೋಗ್ಯ ಸ್ಥಿತಿಯನ್ನು ತಿಳಿದುಕೊಳ್ಳಲು ಸಚಿವ ಕೇದಾರ್ ಕಶ್ಯಪ್ ಅವರು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಚಿಕಿತ್ಸೆಗೆ ಉತ್ತಮ ವ್ಯವಸ್ಥೆಗಳನ್ನು ಮಾಡುವಂತೆ ಅಧಿಕಾರಿಗಳು ಮತ್ತು ವೈದ್ಯರಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.