ಈ ವರ್ಷದಿಂದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ಕಡ್ಡಾಯ: ತಾಂತ್ರಿಕ ಶಿಕ್ಷಣ ಇಲಾಖೆ ಆದೇಶ

Most read

ಬೆಂಗಳೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ (2025-26) 6 ನೇ ಸೆಮಿಸ್ಟರ್‌ನಲ್ಲಿರುವ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಕಡ್ಡಾಯಗೊಳಿಸಲು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಸಿ-25 ಪಠ್ಯಕ್ರಮದಲ್ಲಿ, ಯಾವುದಾದರೂ ಒಂದು ಉದ್ಯಮದಲ್ಲಿ 13 ವಾರಗಳ ಇಂಟರ್ನ್‌ಶಿಪ್ ಅಥವಾ ಪ್ರಾಜೆಕ್ಟ್ ವೊಂದನ್ನು ಪೂರೈಸುವುದು ಕಡ್ಡಾಯವಾಗಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ಪ್ರಸ್ತುತ ಪಠ್ಯಕ್ರಮದಲ್ಲಿ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಐಚ್ಛಿಕವಾಗಿದೆ. ಆದರೆ, ಇದೀಗ 6 ನೇ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಕಡ್ಡಾಯಗೊಳಿಸಲಾಗಿದೆ. ಕಡ್ಡಾಯ ಇಂಟರ್ನ್‌ಶಿಪ್ ವಿದ್ಯಾರ್ಥಿಗಳನ್ನು ಕೆಲಸಕ್ಕೆ ಅಣಿಗೊಳಿಸುತ್ತದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ನಾವು ಕೈಗಾರಿಕೆಗಳೊಂದಿಗೆ ಸಮಾಲೋಚಿಸಿ ಸಿ -25 ಪಠ್ಯಕ್ರಮವನ್ನು ರೂಪಿಸಿದ್ದೇವೆ. ಈ ವಿಚಾರಕ್ಕೆ ಸಂಬಂಧಿಸಿದ ಸಮಾಲೋಚನೆಯ ಸಮಯದಲ್ಲಿ, ಉದ್ಯಮ ವಲಯದ ಪ್ರತಿನಿಧಿಗಳು ಪ್ರಾಯೋಗಿಕ ಅನುಭವದ ಅಗತ್ಯದ ಬಗ್ಗೆ ಹೇಳಿದ್ದರು. ಆದ್ದರಿಂದ, ಇಂಟರ್ನ್‌ಶಿಪ್ ಕಡ್ಡಾಯಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಲಾಖೆಯು ಸಿ-25 ಪಠ್ಯಕ್ರಮದ ಕರಡನ್ನು ಬಿಡುಗಡೆ ಮಾಡಿದ್ದು ಶಿಕ್ಷಣ ಮತ್ತು ಉದ್ಯಮ ವಲಯದ ಪ್ರತಿಕ್ರಿಯೆಗಳನ್ನು ಆಹ್ವಾನಿಸಿದೆ.

ಕರ್ನಾಟಕದಲ್ಲಿ ಸದ್ಯ 43 ಅನುದಾನಿತ ಮತ್ತು 150 ಖಾಸಗಿ ಹಾಗೂ 107 ಸರ್ಕಾರಿ ಪಾಲಿಟೆಕ್ನಿಕ್‌ಗಳಿವೆ. ಈ ಕಾಲೇಜುಗಳಲ್ಲಿ ಒಟ್ಟು 50,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರವು ಸಿ-20 ಪಠ್ಯಕ್ರಮವನ್ನು ಪರಿಚಯಿಸಿತ್ತು. ಮೆಕ್ಯಾನಿಕಲ್ ಮತ್ತು ಸಿವಿಲ್ ಸೇರಿದಂತೆ ಕೆಲವು ಪ್ರಮುಖ ವಿಷಯಗಳನ್ನು ತೆಗೆದುಹಾಕಿದ್ದಕ್ಕಾಗಿ ಟೀಕೆಗೆ ಗುರಿಯಾಗಿತ್ತು. ಸಿ-25 ಪಠ್ಯಕ್ರಮವು ಸಂವಹನ ಕೌಶಲ್ಯ, ಕೋಡಿಂಗ್ ಮತ್ತು ವೆಬ್ ಮತ್ತು ಅಪ್ಲಿಕೇಶನ್ ವಿನ್ಯಾಸದ ಮೇಲೆ ಕೇಂದ್ರೀಕರಿಸುತ್ತದೆ. ಪರಿಸರ ವಿಜ್ಞಾನ ಮತ್ತು ಸಂವಿಧಾನವು ಕೋರ್ಸ್‌ನ ಮೊದಲ ವರ್ಷದಲ್ಲಿ ಕಡ್ಡಾಯ ವಿಷಯಗಳಾಗಿವೆ.

More articles

Latest article