ಬಾಗಪ್ಪ ಹರಿಜನ ಕೊಲೆ ಆರೋಪಿಗಳ ಬಂಧನ

Most read

ವಿಜಯಪುರ: ಭೀಮಾತೀರದ ಚಂದಪ್ಪ ಹರಿಜನ ಸಹಚರ ಕುಖ್ಯಾತ ರೌಡಿ ಬಾಗಪ್ಪ ಹರಿಜನ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ. ಗಾಂಧಿಚೌಕ ಪೊಲೀಸ್‌ ಠಾಣೆ ಪೊಲೀಸರು ಕೊಲೆ ನಡೆದ ಕೇವಲ 24 ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.  ಪ್ರಕಾಶ್​ ಅಲಿಯಾಸ್​ ಪಿಂಟ್ಯಾ ಅಗರಖೇಡ್ (25),  ರಾಹುಲ್ ತಳಕೇರಿ (20), ಗದಿಗೆಪ್ಪ ಅಲಿಯಾಸ್ ಮಣಿಕಂಠ ದನಕೊಪ್ಪ (27) ಮತ್ತು ಸುದೀಪ್ ಕಾಂಬಳೆ (23) ಬಂಧಿತ ಆರೋಪಿಗಳು.

ಇವರೆಲ್ಲರೂ ಪರಸ್ಪರ ಸ್ನೇಹಿತರು ಮತ್ತು ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಮಣಿಕಂಠ ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ ನಿವಾಸಿ ಎಂದು ತಿಳಿದುಬಂದಿದೆ. ಆರೋಫಿಗಳಿಂದ ಕೃತ್ಯಕ್ಕೆ ಬಳಸಿದ ಆಯುಧಗಳು, ಆಟೋ ಮತ್ತು ಬೈಕ್ ಅನ್ನು ವಶಕ್ಕೆ ಮಡೆಯಲಾಗಿದೆ. ಪಿಸ್ತೂಲ್ ಬಳಸಿ ಗುಂಡು ಹಾರಿಸಿ, ಮಚ್ಚು ಹಾಗೂ ಜಂಬೆಯಿಂದ ಹೊಡೆದು ಹತ್ಯೆ ಮಾಡಿದ್ದಾರೆ ಎಂದು ಜಿಲ್ಲಾ ಎಸ್‌ ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ವಕೀಲ ಹತ್ಯೆಗೆ ಪ್ರತೀಕಾರವಾಗಿ ಬಾಗಪ್ಪನ ಕೊಲೆ ನಡೆದಿದೆ.  ಆಸ್ತಿ‌‌ ವಿಚಾರ ಮತ್ತು ಕಮೀಷನ್‌ ಹಂಚಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ವಕೀಲ ರವಿಯನ್ನು ಬಾಗಪ್ಪ ಕೊಲೆ ಮಾಡಿಸಿದ್ದ. ರವಿ ಸಹೋದರ ಪ್ರಕಾಶ್‌ ಇದೀಗ ಬಾಗಪ್ಪನನ್ನೇ ಮುಗಿಸಿದ್ದಾನೆ.

ಫೆಬ್ರವರಿ 11 ರಾತ್ರಿ 9:45ರ ಸುಮಾರಿಗೆ ವಿಜಯಪುರದ ಮದೀನಾ ನಗರದಲ್ಲಿ ಬಾಗಪ್ಪ ಹರಿಜನನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಆಟೋದಲ್ಲಿ ಬಂದ ಆರೋಪಿಗಳು  ಊಟ ಮಾಡಿ ವಾಕ್ ಮಾಡುತ್ತಿದ್ದ ಬಾಗಪ್ಪನನ್ನು ಮಾರಕಾಸ್ತ್ರಗಳಿಂದ ಬಾಗಪ್ಪನ ತಲೆ, ಕೈಗೆ ಹಲ್ಲೆಗೈದು, ಎಡಗೈ ಮತ್ತು ಮುಂಗೈ ಕತ್ತರಿಸಿ ಮತ್ತು ಗುಂಡು ಹಾರಿಸಿ ಸಂಬಂಧಿಕರ ಎದುರೇ ಹತ್ಯೆಗೈದಿದ್ದರು.

More articles

Latest article