ಬೆಂಗಳೂರು : ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವಂತೆ ತಾಯಿ ಗದರಿಸಿದ್ದಕ್ಕೆ 15 ವರ್ಷದ ಬಾಲಕಿಯೊಬ್ಬಳು ಅಪಾರ್ಟ್ ಮೆಂಟ್ ನ 20ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಪೂರ್ವ ಭಾಗದ ಕಾಡುಗೋಡಿಯಲ್ಲಿ ನಡೆದಿದೆ. ಈಕೆ ವೈಟ್ ಫೀಲ್ಡ್ ನ ಖಾಸಗಿ ಶಾಲೆಯಲ್ಲಿ ಸಿಬಿಎಸ್ ಇ ಪಠ್ಯದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ. ಮೃತ ಬಾಲಕಿಯನ್ನು 15 ವರ್ಷದ ಅವಂತಿಕಾ ಚೌರಾಸಿಯಾ ಎಂದು ಗುರುತಿಸಲಾಗಿದೆ. ಈಕೆಯ ತಂದೆ ಸಾಫ್ಟ್ ವೇರ್ ಇಂಜಿನಿಯರ್ ಉದ್ಯೋಗದಲ್ಲಿದ್ದಾರೆ.
ಅವಂತಿಕಾ ಪರೀಕ್ಷೆ ಫೆ.15ರಿಂದ ಆರಂಭವಾಗುತ್ತಿದ್ದು ಮೊಬೈಲ್ ನಲ್ಲಿ ಹೆಚ್ಚು ಸಮಯ ಕಳೆಯದಂತೆ ಅವಂತಿಕಾ ತಾಯಿ ಬುದ್ದಿ ಹೇಳಿದ್ದಾರೆ. ನಂತರ ತಾಯಿ ಮನೆಯಲ್ಲಿ ಇರುವಾಗಲೇ ಅವಂತಿಕಾ 20ನೇ ಮಹಡಿಗೆ ಹೋಗಿ ಕೆಳಗೆ ಹಾರಿದ್ದಾಳೆ. ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಈ ದುರಂತ ಕಾಡುಗೋಡಿಯ ಅಸೆಟ್ಜ್ ಮಾರ್ಕ್ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ನಲ್ಲಿ ಬುಧವಾರ ಬೆಳಗ್ಗೆ 11,.30ರ ವೇಳೆಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರೀಕ್ಷೆ ಹತ್ತಿರ ಬರುತ್ತಿದ್ದ ಕಾರಣ ಓದಿಕೊಳ್ಳುವಂತೆ ತಾಯಿ ಗದರಿಸಿದ್ದಾರೆ. ಇದರಿಂದ ಕೋಪಗೊಂಡ ಬಾಲಕಿ ತಮ್ಮ ಅಪಾರ್ಟ್ ಮೆಂಟ್ ನ 20ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಕಾಡುಗೋಡಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇವರು ಮಧ್ಯಪ್ರದೇಶ ಮೂಲದವರು ಎಂದು ತಿಳಿದು ಬಂದಿದೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.