ದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರೆಯುತ್ತಿದ್ದು, ಆರಂಭಿಕ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಆಡಳಿತಾರೂಢ ಎಎಪಿ 2ನೇ ಸ್ಥಾನಕ್ಕೆ ಕುಸಿದಿದೆ. ಈಗಿನ ಅಂಕಿ ಅಂಶಗಳ ಪ್ರಕಾರ, 70 ವಿಧಾನಸಭಾ ಕ್ಷೇತ್ರಗಳ ಪೈಕಿ ಸುಮಾರು 45ರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಆಡಳಿತರೂಢ ಎಎಪಿ ಸುಮಾರು 25 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ. ಈ ಹಿಂದಿನ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿದ್ದ ಕಾಂಗ್ರೆಸ್ ಈ ಬಾರಿಯೂ ಶೂನ್ಯ ಸಾಧನೆ ಮಾಡಿದೆ. 27 ವರ್ಷಗಳ ನಂತರ ಬಿಜೆಪಿ ಅಧಿಕಾರಕ್ಕೆ ಮರಳುತ್ತಿದೆ.
ಈಗಿನ ಮಾಹಿತಿಗಳ ಪ್ರಕಾರ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ 7ನೇ ಸುತ್ತಿನ ನಂತರ ಮತ್ತೆ ಹಿನ್ನೆಡೆ ಅನುಭವಿಸುತ್ತಿದ್ದಾರೆ. ಮುಖ್ಯಮಂತ್ರಿ ಆತಿಶಿ, ಮನೀಷ್ ಸಿಸೋಡಿಯಾ ಹಿನ್ನೆಡೆ ಅನುಭವಿಸುತ್ತಿದ್ದಾರೆ. ಕಾಂಗ್ರೆಸ್ ಮುಖಂಡ ಸಂದೀಪ್ ದೀಕ್ಷಿತ್ ಸೋಲನುಭವಿಸಿದ್ದಾರೆ. ಇವರು ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಪುತ್ರ. ಆಮ್ ಆದ್ಮಿ ಪಕ್ಷದ ಸೋಲಿಗೆ ಕಾರಣ ಎಂದು ಬಿಜೆಪಿ ವ್ಯಾಖ್ಯಾನಿಸಿದೆ.
ಫೆಬ್ರವರಿ ಐದರಂದು 70 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಶೇ.60 ರಷ್ಟು ಮಾತ್ರ ಮತದಾನವಾಗಿತ್ತು. ಕಳೆದ ವರ್ಷ ಶೇ. 62 ರಷ್ಟು ಮತದಾನವಾಗಿತ್ತು. ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ತೀವ್ರ ಪೈಪೋಟಿ ನಡೆಸಿದ್ದವು. ಎಎಪಿ ಅಧಿಕಾರಕ್ಕೆ ಬಂದ 2013ರಿಂದಲೂ ಎಕ್ಸಿಟ್ ಪೋಲ್ ಸರ್ವೇಗಳು ಸುಳ್ಳಾಗುತ್ತಾ ಬಂದಿದ್ದವು. 2020ರಲ್ಲಿ ನಡೆದ ಚುನಾವಣೆಯಲ್ಲಿ ಎಎಪಿ ೫೪ ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ನುಡಿದಿದ್ದರೆ ಎಎಪಿ 62 ಸ್ಥಾನಗಳನ್ನು ಗೆದ್ದಿತ್ತು. 2015 ರಲ್ಲಿ 67 ಸ್ಥಾನಗಳಲ್ಲಿ ದಾಖಲೆಯ ಗೆಲುವು ಸಾಧಿಸಿತ್ತು.