ಕಾರ್ಪೋರೇಟ್‌ ಸ್ನೇಹಿ – ಜನವಿರೋಧಿ ಬಜೆಟ್‌ 2025

Most read

ಮೋದಿ 3.0 ಆಳ್ವಿಕೆಯಲ್ಲಿ ಭಾರತ ಸಂಪೂರ್ಣ ಮಾರುಕಟ್ಟೆ ಆರ್ಥಿಕತೆಯಲ್ಲಿ ವಿಲೀನವಾಗಲಿದೆ. ತಳಸಮಾಜದ ಬಹುಸಂಖ್ಯಾತರಿಗೆ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿಯೇ ಉಳಿಯುತ್ತದೆ. ಈ ಸಮಾಜದ ಕಾಳಜಿ ಮತ್ತು ಅವಶ್ಯಕತೆಗಳನ್ನು ಉದ್ದೇಶಿಸುವಂತಹ ಯಾವುದೇ ಪ್ರಸ್ತಾವನೆಯನ್ನು 2025-26ರ ಬಜೆಟ್‌ ಮುಂದಿಡುವುದಿಲ್ಲ. ದೇಶದ ರೈತರು, ಕಾರ್ಮಿಕರು, ಅವಕಾಶ ವಂಚಿತರು, ಮಹಿಳೆಯರು ಹಾಗೂ ಬಡಜನತೆ ಮತ್ತದೇ ನಿರೀಕ್ಷೆಯಲ್ಲಿ ಕಾಲ ದೂಡಬೇಕಿದೆ –ನಾ ದಿವಾಕರ, ಚಿಂತಕರು.

ನವ ಉದಾರವಾದಿ ಮಾರುಕಟ್ಟೆ ಆರ್ಥಿಕತೆಯ ಸಿದ್ಧಮಾದರಿಯಿಂದ ಕಿಂಚಿತ್ತೂ ಅತ್ತಿತ್ತ ಸರಿಯದೆ ಭಾರತದ 2025ರ ವಾರ್ಷಿಕ ಬಜೆಟ್ ಜನರ ಮುಂದಿದೆ. ಸಾಮಾನ್ಯವಾಗಿ ವಾರ್ಷಿಕ ಬಜೆಟ್‌ ಮೂರು ನೆಲೆಗಳಲ್ಲಿ ಕುತೂಹಲ-ಆತಂಕ ಮತ್ತು ನಿರೀಕ್ಷೆಗಳನ್ನು ಸೃಷ್ಟಿಸಿರುತ್ತದೆ. ಮೊದಲನೆಯದು ಕಾರ್ಪೋರೇಟ್‌ ಔದ್ಯಮಿಕ ಮಾರುಕಟ್ಟೆ, ಎರಡನೆಯದು ಸರ್ಕಾರಗಳ ಚಾಲಕ ಶಕ್ತಿಯಾಗಿರುವ ಮೇಲ್ಪದರ ಸಮಾಜ ಮತ್ತು ಮಧ್ಯಮವರ್ಗಗಳು, ಮೂರನೆಯದು ತಳಸಮಾಜದಲ್ಲಿ ನಾಳೆಗಳತ್ತ ನೋಡುತ್ತಲೇ ವರ್ತಮಾನವನ್ನು ಕಳೆಯುವ ದುಡಿಯುವ ಬಡಜನತೆ. ‌

ಈ ಮೂರರಲ್ಲಿ ಮೊದಲನೆ ವರ್ಗ ಮಾರುಕಟ್ಟೆ ಬಜೆಟ್‌ ಮಂಡನೆಯಾದ ಕೂಡಲೇ ತೀಕ್ಷ್ಣ ಪ್ರತಿಕ್ರಿಯೆ ನೀಡುವುದು ಒಂದು ಪರಂಪರೆ. ಷೇರು ಮಾರುಕಟ್ಟೆಯ ವ್ಯತ್ಯಯಗಳು, ಕುತೂಹಲಕಾರಿ ಅಂಶವೆಂದರೆ 2025ರ ಬಜೆಟ್‌ನಂತರ ಭಾರತದ ಇಡೀ ಮಾರುಕಟ್ಟೆ ಅಂಗಳ ಸದ್ದು ಮಾಡದೆ ಮೌನವಾಗಿದೆ. ವಿತ್ತಸಚಿವರು ಮಂಡಿಸಿರುವ ಈ ಬಜೆಟ್‌ ಕಳೆದ ಹತ್ತು ವರ್ಷಗಳಿಂದ ಭಾರತವನ್ನು ಗಂಭೀರವಾಗಿ ಕಾಡುತ್ತಿರುವ ನಿರುದ್ಯೋಗ, ಆದಾಯ ತಾರತಮ್ಯ, ಆರ್ಥಿಕ ಅಸಮಾನತೆ ಮತ್ತು ಉದ್ಯೋಗಾವಕಾಶಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಯಾವುದೇ ಭರವಸೆಯನ್ನು ಮೂಡಿಸುವುದಿಲ್ಲ.

ಐದು ವರ್ಷಗಳಲ್ಲಿ ಇಂಟರ್ನ್‌ಶಿಪ್‌ ಮೂಲಕ 4.1 ಕೋಟಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮಹತ್ವಾಕಾಂಕ್ಷೆಯ ಯೋಜನೆಗಾಗಿ 2 ಲಕ್ಷ ಕೋಟಿ ರೂಗಳ ಪೂರ್ಣಾವಧಿ ಮೊತ್ತವನ್ನು ನಿಗದಿಪಡಿಸಲಾಗಿತ್ತು. ಕಳೆದ ಒಂದು ವರ್ಷದಲ್ಲಿ ಈ ಯೋಜನೆ ಎಷ್ಟು ಫಲಪ್ರದವಾಗಿದೆ ಅಥವಾ ಈ ಹಣಕಾಸು ವರ್ಷದಲ್ಲಿನ ನಿರೀಕ್ಷೆಗಳೇನು ? ಅದರೆ ಇಡೀ ಬಜೆಟ್‌ ಭಾಷಣದಲ್ಲಿ ಈ ಯೋಜನೆಯ ಪ್ರಸ್ತಾಪವೇ ಇಲ್ಲದಿರುವುದು ಅಚ್ಚರಿ ಮೂಡಿಸುತ್ತದೆ.

ಕಾರ್ಮಿಕ ಹಿತಾಸಕ್ತಿಯ ನೆಲೆಯಲ್ಲಿ

2024ರ ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (PLFS) ಹೇಳಿರುವಂತೆ 2023-24ರಲ್ಲಿ 15-29 ವಯೋಮಾನದ ಯುವಸಮೂಹದ ನಿರುದ್ಯೋಗ ಪ್ರಮಾಣ ಶೇಕಡಾ 10.2ರಷ್ಟಿತ್ತು. ಪದವೀಧರರ ಪೈಕಿ ಇದು ಶೇಕಡಾ 13ರಷ್ಟಿತ್ತು.  ಕೋವಿಡ್ ನಂತರದ ಅವಧಿಯಲ್ಲಿ ವೇತನಾಧಾರಿತ ಉದ್ಯೋಗಿಗಳ ಪ್ರಮಾಣ ಸತತವಾಗಿ ಕುಸಿಯುತ್ತಿದ್ದು ಕೃಷಿ ಮತ್ತು ಅನೌಪಚಾರಿಕ ವಲಯದ ಉದ್ಯೋಗಿಗಳು ಹೆಚ್ಚಾಗಿರುವುದನ್ನು ಈ ಸಮೀಕ್ಷೆ ಬಿಂಬಿಸುತ್ತದೆ. ಇತ್ತೀಚೆಗೆ ವಿತ್ತಸಚಿವಾಲಯ ಬಿಡುಗಡೆ ಮಾಡಿದ ಆರ್ಥಿಕ ಸಮೀಕ್ಷೆಯ ಅನುಸಾರ, ಭಾರತದಲ್ಲಿ ಸ್ವಯಂ ಉದ್ಯೋಗಿ ಪುರುಷರ ಆದಾಯ  2017-18ರಲ್ಲಿ 9,454 ರೂ.‌ ಗಳಿದ್ದುದು 2023-24ರ ವೇಳೆಗೆ 8,591 ರೂ. ಗಳಿಗೆ ಕುಸಿದಿದೆ.  ಮಾಸಿಕ/ನಿಯತಕಾಲಿಕ ವೇತನ ಪಡೆಯುವ ಪುರುಷರ ವರಮಾನ ಇದೇ ಅವಧಿಯಲ್ಲಿ ಸರಾಸರಿ 12,665 ರೂ.ಗಳಿಂದ 11,858 ರೂ.ಗಳಿಗೆ ಕುಸಿದಿದೆ.

ತತ್ಪರಿಣಾಮವಾಗಿ ಉದ್ಯೋಗ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯ ಉದ್ಯೋಗಾಕಾಂಕ್ಷಿಗಳು ಪ್ರವೇಶಿಸುತ್ತಿದ್ದು ತೀವ್ರ ಹಣದುಬ್ಬರದ ಕಾರಣ ಕಾರ್ಮಿಕರ ನೈಜ ವೇತನ ಕ್ಷೀಣಿಸುತ್ತಿದೆ. ಅಷ್ಟೇ ಅಲ್ಲದೆ ಬಹುಸಂಖ್ಯೆಯ ಕಾರ್ಮಿಕರ ಜೀವನೋಪಾಯವೂ ದುಸ್ಥಿತಿ ತಲುಪಿದೆ.  ಈ ಸಂಕೀರ್ಣ ಪರಿಸ್ಥಿತಿಯನ್ನು ಸುಧಾರಿಸುವ ಯಾವುದೇ ಲಕ್ಷಣಗಳನ್ನು ಪ್ರಸಕ್ತ ಬಜೆಟ್‌ನಲ್ಲಿ ಗುರುತಿಸಲಾಗುವುದಿಲ್ಲ. ತಳಸಮಾಜದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಿ, ಜೀವನೋಪಾಯವನ್ನು ಸುಗಮಗೊಳಿಸಲು ನೆರವಾಗುವ ಕೃಷಿ ಮತ್ತು ನಗರಾಭಿವೃದ್ಧಿ, ಆಹಾರ ಸಬ್ಸಿಡಿ, ಪ್ರಾಥಮಿಕ ಶಿಕ್ಷಣ, ಕೃಷಿ, ಸಾರಿಗೆ, ಇಂಧನ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಅನುದಾನವನ್ನು ಕಡಿಮೆ ಮಾಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅತಿ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ಯೋಗ ಖಾತರಿ ಯೋಜನೆಯ (MNREGA) ಅನುದಾನವನ್ನು ಹೆಚ್ಚಿಸದೆ, ಯಥಾಸ್ಥಿತಿಯಲ್ಲಿರಿಸಲಾಗಿದೆ. ಇದು ಈಗಾಗಲೇ ದುರ್ಭರ ಬದುಕು ಸಾಗಿಸುತ್ತಿರುವವರನ್ನು ಮತ್ತಷ್ಟು ವಂಚಿಸುವ ಮಾದರಿ.

ಬಜೆಟ್‌ ಬಗ್ಗೆ ಕುತೂಹಲ ಇರುವ ಮತ್ತೊಂದು ವರ್ಗ ಮೇಲ್ಪದರ (ಗಣ್ಯ) ಸಮಾಜ ಮತ್ತು ಮಧ್ಯಮ ವರ್ಗಗಳು. ವಿಶೇಷವಾಗಿ ಹೆಚ್ಚಿನ ಆದಾಯ ಇರುವ ನೌಕರರು ಮತ್ತು ವೃತ್ತಿಪರರು. ಈ ವರ್ಗದ ಮನತಣಿಸುವುದು ಯಾವುದೇ ಸರ್ಕಾರದ ಪ್ರಥಮ ಆದ್ಯತೆಯಾಗಿರುತ್ತದೆ. ಏಕೆಂದರೆ ಈ ಸುಶಿಕ್ಷಿತ-ಹಿತವಲಯದ-ವೈಟ್‌ ಕಾಲರ್‌ ವರ್ಗವೇ ಸಾರ್ವಜನಿಕ ಅಭಿಪ್ರಾಯಗಳನ್ನು ಉತ್ಪಾದಿಸುತ್ತವೆ. ಈ ವರ್ಗವನ್ನು ಖುಷಿ ಪಡಿಸಲು ವಿತ್ತಸಚಿವರು ಆದಾಯ ತೆರಿಗೆ ಮಿತಿಯನ್ನು 7 ಲಕ್ಷ ರೂಗಳಿಂದ 12 ಲಕ್ಷ ರೂ.ಗಳಿಗೆ ಏರಿಸಿದ್ದಾರೆ.  ಉಳಿದಂತೆ ಈಗಾಗಲೇ ತಮ್ಮ ಆದಾಯದಲ್ಲಿ ಕುಸಿತ ಎದುರಿಸುತ್ತಿರುವ ಅಪಾರ ಜನಸ್ತೋಮಕ್ಕೆ ಬಜೆಟ್‌ನಿಂದ ಯಾವುದೇ ಉಪಯೋಗವಾಗಿಲ್ಲ. ಉದ್ಯೋಗ ಖಾತರಿ ಯೋಜನೆಯಡಿ (MNREGA) ಸರಾಸರಿ ದಿನಗೂಲಿ ಪ್ರಮಾಣವು 2019-20ರಲ್ಲಿ 200.71ರಷ್ಟಿದ್ದುದು 2024-25ರಲ್ಲಿ 252.31 ರೂಗಳಿಗೆ ಹೆಚ್ಚಳವಾಗಿದೆ. ಈ ದೃಷ್ಟಿಯಿಂದ ನರೇಗಾ ಯೋಜನೆಯ ಅನುದಾನವನ್ನು ಹೆಚ್ಚಿಸಿದ್ದರೆ, ಗ್ರಾಮೀಣ ಮಟ್ಟದಲ್ಲಿ ಗ್ರಾಹಕ ಬೇಡಿಕೆಯನ್ನು ಹೆಚ್ಚಿಸಬಹುದಾಗಿತ್ತು.

ನಿರ್ಲಕ್ಷಿತ ವಲಯಗಳ ಕಡೆಗಣನೆ

ಭಾರತದ ಆರ್ಥಿಕ ದುಸ್ಥಿತಿಯ ಮೂಲ ಕಾರಣವನ್ನು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ನಿರ್ಲಕ್ಷ್ಯದಲ್ಲಿ ಕಾಣಲಾಗುತ್ತದೆ. ಆದರೆ ಈ ಸಲವೂ ಎರಡೂ ಕ್ಷೇತ್ರಗಳನ್ನು ನಿರ್ಲಕ್ಷಿಸಲಾಗಿದೆ.. 2025ರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಜಿಡಿಪಿಯ ಶೇಕಡಾ 0.5, ಬಜೆಟ್‌ನ ಶೇಕಡಾ 2.53ರಷ್ಟು ಮೀಸಲಿಡಲಾಗಿದೆ. ಇದು ಸಮಗ್ರ ಉತ್ತಮ ಗುಣಮಟ್ಟದ ಶಿಕ್ಷಣದ ಅಭಿವೃದ್ಧಿಗೆ ಬಹುದೊಡ್ಡ ತಡೆಯಾಗಲಿದೆ. ಪೋಷಣ್‌ ಯೋಜನೆಗೆ ( ಮಧ್ಯಾಹ್ನದ ಬಿಸಿಯೂಟ) ಕೇವಲ 33.31 ಕೋಟಿ ರೂ (ಶೇಕಡಾ 0.2) ಹೆಚ್ಚು ಮಾಡಲಾಗಿದೆ.  ಶಾಲಾ ಶಿಕ್ಷಣಕ್ಕೆ 5,564 ಕೋಟಿ ರೂ ಹೆಚ್ಚಿನ ಅನುದಾನ ನೀಡಿರುವುದು ಸ್ವಾಗತಾರ್ಹ.

2025-26ರ ಆರ್ಥಿಕ ಸಮೀಕ್ಷೆಯಲ್ಲಿ ಕಾರ್ಮಿಕ ಪಡೆಯ ಭಾಗವಹಿಸುವಿಕೆಯ ಅನುಪಾತ (LFPR) ಮತ್ತು ದುಡಿಮೆಗಾರರ ಜನಸಂಖ್ಯೆಯ ಅನುಪಾತ (WPR) ಹೆಚ್ಚಾಗಿರುವುದರಿಂದ ನಿರುದ್ಯೋಗ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಆದರೆ ಅಂಕಿಅಂಶಗಳು ಬೇರೆಯದೇ ಕತೆ ಹೇಳುತ್ತವೆ.  2017-18ರಲ್ಲಿ ಅತಿಹೆಚ್ಚು ನಿರುದ್ಯೋಗವನ್ನು ದಾಖಲಿಸಿದ ಭಾರತದ ಅರ್ಥಿಕತೆಯಲ್ಲಿ ಆರ್ಥಿಕ ಹಿಂಜರಿತದ ಕಾರಣ 2017-20ರ ನಡುವೆ 8 ಕೋಟಿ ಶ್ರಮಿಕರು ಕೃಷಿಗೆ ಮರಳಿದ್ದರು. ಹಾಗಾಗಿ LFPR ಮತ್ತು WPR ಅನುಪಾತದಲ್ಲಿ ಹೆಚ್ಚಳವಾಗಿರಲು ಕಾರಣ, ಕೃಷಿಗೆ ಮರಳಿದ ನಾಲ್ಕು ಕೋಟಿ ಮಹಿಳಾ ಶ್ರಮಿಕರು. ಈ ಮಹಿಳೆಯರ ವೇತನರಹಿತ ಕೌಟುಂಬಿಕ ದುಡಿಮೆಯನ್ನೂ ಉದ್ಯೋಗ ಎಂದೇ ಸರ್ಕಾರ ಪರಿಗಣಿಸುತ್ತದೆ.

ಈ ಸಮಸ್ಯೆಯನ್ನು ನೀಗಿಸಲು ಕೇಂದ್ರ ಬಜೆಟ್‌ನಲ್ಲಿ ಮೂರು ಯೋಜನೆಗಳಿಗೆ ಒತ್ತು ನೀಡಲಾಗಿದೆ. ಪ್ರತಿವರ್ಷ 60 ರಿಂದ 70 ಲಕ್ಷ ಹೊಸ ಉದ್ಯೋಗಾಕಾಂಕ್ಷಿ ಶ್ರಮಿಕರ ಹೆಚ್ಚಳವನ್ನು ಕಾಣುವ, ಶೇಕಡಾ 46ರಷ್ಟು ಶ್ರಮಿಕರು ಕೃಷಿಯನ್ನೇ ಅವಲಂಬಿಸಿರುವ, ಶಿಕ್ಷಣ-ಉದ್ಯೋಗ-ತರಬೇತಿ ವಲಯದಿಂದ ಹೊರಗೆ ಹತ್ತು ಕೋಟಿ ಯುವ ಸಮೂಹ ಇರುವ ಭಾರತದಲ್ಲಿ ಸರ್ಕಾರದ ಈ ಮೂರು ಯೋಜನೆಗಳು ಯಾವುದೇ ರೀತಿಯಲ್ಲೂ ಪ್ರೋತ್ಸಾಹದಾಯಕವಾಗಿ ಕಾಣುವುದಿಲ್ಲ.

ವಿಕಸಿತ ಭಾರತದ ಉನ್ನತ ಧ್ಯೇಯದೊಂದಿಗೆ ಮಂಡಿಸಲಾಗಿರುವ ವಾರ್ಷಿಕ ಬಜೆಟ್‌ ಶೂನ್ಯ ಬಡತನ,  ಸಮಗ್ರ ಆರೋಗ್ಯ ಕಾಳಜಿ, ಉಪಯುಕ್ತ ಉದ್ಯೋಗ, ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರ ಒಳಗೊಳ್ಳುವಿಕೆ ಮತ್ತು ರೈತ ಸಮುದಾಯದ ಯೋಗಕ್ಷೇಮ ಈ ಆದರ್ಶಗಳನ್ನು ಹೊತ್ತು ಬಂದಿದೆ. ಆದರೆ ಈ ಆಶಯಗಳಿಗೆ ಪೂರಕವಾಗಿ ಬಜೆಟ್‌ನಲ್ಲಿ ಸಮರ್ಪಕವಾಗಿ ಹಣಕಾಸು ಅನುದಾನವನ್ನು ಒದಗಿಸದೆ ಇರುವುದು ಇವೆಲ್ಲವನ್ನೂ ಘೋಷಣೆಗಳನ್ನಾಗಿ ಉಳಿಸಿಬಿಡುತ್ತದೆ. ಕೃಷಿ ಸಂಬಂಧಿತ ಚಟುವಟಿಕೆಗಳು ಮತ್ತು ವ್ಯವಸಾಯ, ಆಹಾರ ಸಬ್ಸಿಡಿ ಮತ್ತು ಗ್ರಾಮೀಣಾಭಿವೃದ್ಧಿಗೆ ಬಜೆಟ್‌ನಲ್ಲಿ ಮೀಸಲಿಟ್ಟಿರುವ ನಿಧಿಯ ಪ್ರಮಾಣವನ್ನು ತಗ್ಗಿಸಲಾಗಿದೆ.  ರೈತರ ಬಹುಕಾಲದ ಬೇಡಿಕೆಯಾಗಿರುವ ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಬಜೆಟ್‌ನಲ್ಲಿ ಏನೂ ಹೇಳಲಾಗಿಲ್ಲ.

ಕಾರ್ಪೋರೇಟಿಕರಣದ ಹಾದಿಯಲ್ಲಿ

ಕಳೆದ ಹತ್ತು ವರ್ಷಗಳ ಬಿಜೆಪಿ ಆಳ್ವಿಕೆಯ ಮೂಲ ಮಂತ್ರವೇ ಆಗಿರುವ ಔದ್ಯಮಿಕ ಕಾರ್ಪೋರೇಟೀಕರಣಕ್ಕೆ ಮುಂದಿನ ಐದು ವರ್ಷಗಳಲ್ಲಿ ಮತ್ತಷ್ಟು ಉತ್ತೇಜನ ನೀಡಲಾಗುವುದು ಎಂದು ವಿತ್ತ ಸಚಿವರು ಖಚಿತ ಪಡಿಸಿದ್ದಾರೆ. ವಿಮಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಪ್ರಮಾಣವನ್ನು ಶೇಕಡಾ 74 ರಿಂದ ಶೇಕಡಾ 100ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಈ ಬಜೆಟ್‌ನಲ್ಲಿ ಮಾಡಲಾಗಿದೆ. ಇದಲ್ಲದೆ ಮುಂದಿನ ಐದು ವರ್ಷಗಳಲ್ಲಿ ಸಾರ್ವಜನಿಕ ಉದ್ದಿಮೆಗಳನ್ನು ಕಾರ್ಪೋರೇಟ್‌ಗಳಿಗೆ ಹರಾಜು/ಮಾರಾಟ ಮಾಡುವ ಮೂಲಕ 10 ಲಕ್ಷ ಕೋಟಿ ರೂ ಆದಾಯ ಗಳಿಸುವ ಆಶಯವನ್ನೂ ವಿತ್ತ ಸಚಿವರು ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳಬೇಕಾದರೆ ಮೋದಿ 3.0 ಆಳ್ವಿಕೆಯಲ್ಲಿ ಭಾರತ ಸಂಪೂರ್ಣ ಮಾರುಕಟ್ಟೆ ಆರ್ಥಿಕತೆಯಲ್ಲಿ ವಿಲೀನವಾಗಲಿದೆ. ತಳಸಮಾಜದ ಬಹುಸಂಖ್ಯಾತರಿಗೆ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿಯೇ ಉಳಿಯುತ್ತದೆ. ಈ ಸಮಾಜದ ಕಾಳಜಿ ಮತ್ತು ಅವಶ್ಯಕತೆಗಳನ್ನು ಉದ್ದೇಶಿಸುವಂತಹ ಯಾವುದೇ ಪ್ರಸ್ತಾವನೆಯನ್ನು 2025-26ರ ಬಜೆಟ್‌ ಮುಂದಿಡುವುದಿಲ್ಲ. ದೇಶದ ರೈತರು, ಕಾರ್ಮಿಕರು, ಅವಕಾಶವಂಚಿತರು, ಮಹಿಳೆಯರು ಹಾಗೂ ಬಡಜನತೆ ಮತ್ತದೇ ನಿರೀಕ್ಷೆಯಲ್ಲಿ ಕಾಲದೂಡಬೇಕಿದೆ. ಇದು ಕೇವಲ ಮೋದಿ 3.0 ಅಥವಾ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಗುರಿ ಅಲ್ಲ. ಬದಲಾಗುತ್ತಿರುವ ಭಾರತ ವಿಕಸಿತ ಭಾರತವಾಗುವತ್ತ ಸಾಗುತ್ತಿರುವ ಹಾದಿಯಲ್ಲಿ ಇದು ನಿಶ್ಚಿತ ಪ್ರಕ್ರಿಯೆಯಾಗಿದೆ. ಮುಖ್ಯವಾಹಿನಿಯ ಎಲ್ಲ ಬೂರ್ಷ್ವಾ ಪಕ್ಷಗಳೂ ಇದೇ ನೀತಿಯನ್ನು ಅನುಮೋದಿಸುತ್ತವೆ.

ಈ ಬೆಳವಣಿಗೆಗಳ ಬಗ್ಗೆ ಜನಸಾಮಾನ್ಯರನ್ನು, ಶ್ರಮಜೀವಿಗಳನ್ನು ಜಾಗೃತಗೊಳಿಸುವ ಜವಾಬ್ದಾರಿ ಎಡಪಕ್ಷಗಳು ಮತ್ತಿತರ ಪ್ರಗತಿಪರ ಸಂಘಟನೆಗಳ ಮೇಲಿದೆ.

ನಾ. ದಿವಾಕರ

ಚಿಂತಕರು

ಇದನ್ನೂ ಓದಿ- ಬಜೆಟ್-‌ ಭಾಷೆ, ಭಾಷಣಗಳ ದಾಟಿ

More articles

Latest article