ಬಜೆಟ್-‌ ಭಾಷೆ, ಭಾಷಣಗಳ ದಾಟಿ

Most read

ಬಿಜೆಪಿಯೇತರ ಸರಕಾರಗಳನ್ನು ನಿಯಂತ್ರಿಸುವ ಪ್ರವೃತ್ತಿಯ ಜೊತೆಗೆ ದಕ್ಷಿಣದ ರಾಜ್ಯಗಳ ಕುರಿತು ಅನಾದರ ಪ್ರವೃತ್ತಿ ಬೆಳೆಯುತ್ತಿದೆ. ಸಂಪನ್ಮೂಲ ಹಂಚಿಕೆಯನ್ನು ಗಮನಿಸಿದರೆ ದಕ್ಷಿಣದ ಐದು ರಾಜ್ಯಗಳಿಗೆ ಹಂಚಿದ ಸಂಪನ್ಮೂಲ ಉತ್ತರದ ಬಿಹಾರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಕ್ಕೆ ನೀಡಿದ ಕೊಡುಗೆಯ ಶೇಕಡಾ 36.5% ಮಾತ್ರ –  ಡಾ.ಉದಯ ಕುಮಾರ ಇರ್ವತ್ತೂರು

ಮೊನ್ನೆ ಶನಿವಾರ, ಫೆಬ್ರವರಿ ಮೊದಲ ದಿನ ಕೇಂದ್ರ ಸರಕಾರದ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಇವರಿಂದ 2025-26ನೇ ಸಾಲಿನ ವಾರ್ಷಿಕ ಆಯವ್ಯಯ ಮಂಡನೆಯಾಗಿದೆ. ನಮ್ಮಲ್ಲಿರುವ ಮತ್ತು ಬರುವ ಆದಾಯವನ್ನು ಯಾವ ರೀತಿ ನಮ್ಮ ಇಂದಿನ ಮತ್ತು ಮುಂದಿನ ಅವಶ್ಯಕತೆಗಳನ್ನು ಗಮನದಲ್ಲಿ ಇರಿಸಿಕೊಂಡು ವಿನಿಯೋಗಿಸಬೇಕು, ಬಹುದು ಮತ್ತು ನಾಡು, ನುಡಿ ಹಾಗೂ ಮುಂದಿನ ಜನಾಂಗದ ಹಿತದೃಷ್ಟಿಯಿಂದ ಯಾವ ರೀತಿ ವಿನಿಯೋಗಿಸಬಹುದು ಎನ್ನುವ ವಿವರಗಳಿರುವ ಪಟ್ಟಿ ಈ ಬಜೆಟ್. ಪ್ರತೀ ವರ್ಷ ಮಂಡನೆಯಾಗುವ ಆಯವ್ಯಯ ಪಟ್ಟಿಯನ್ನು ವಿಮರ್ಶಾತ್ಮಕವಾಗಿ ನೋಡಬೇಕಾದುದು ನಮ್ಮ ಧರ್ಮ ಮತ್ತು ವೃತ್ತಿಪರ ಕರ್ಮ. ಆದರೆ ವಾಸ್ತವಿಕವಾಗಿ ಈ ಕೆಲಸ ಆಗುತ್ತಿದೆಯೇ?

ಒಂದು ವರ್ಷದ ಬಜೆಟ್‍ನಿಂದ ನಾಡನ್ನು ಸುಭಿಕ್ಷಗೊಳಿಸಲು ಆಗುವುದಿಲ್ಲ. ಇದೊಂದು ನಿರಂತರವಾಗಿ ನಡೆಯಬೇಕಿರುವ ಸುದೀರ್ಘ ಪ್ರಕ್ರಿಯೆ. ನೂರಾರು ಹೆಜ್ಜೆಗಳು ಸೇರಿ ಪಯಣವಾಗುವ ರೀತಿಯಲ್ಲಿ, ಇಡೀ ವ್ಯವಸ್ಥೆಯೊಳಗಿನ ಆರ್ಥಿಕ ಚಟುವಟಿಕೆಗಳ ವೇಗ, ದಿಕ್ಕು, ದೆಸೆಗಳನ್ನು ನಿರಂತರ ನಿಯಂತ್ರಿಸುತ್ತಾ, ನಿರ್ದೇಶಿಸುತ್ತಾ ಈ ಕೆಲಸವನ್ನು ಕೇವಲ ಕೇಂದ್ರ ಹಾಗೂ ರಾಜ್ಯದ ಸರಕಾರಗಳು ಮಾತ್ರವಲ್ಲದೆ, ಎಲ್ಲ ಜನಪ್ರತಿನಿಧಿಗಳು ಉತ್ಪಾದನೆ ಮತ್ತು ಉಪಭೋಗ ನಿರತರು ಸಾಮೂಹಿಕವಾಗಿ ಸಂಘಟಿತವಾದ ರೀತಿಯಲ್ಲಿ ಇದನ್ನು ನಡೆಸುತ್ತಿರಬೇಕು. ಆದರೆ ಇಂತಹ ವಿವೇಕವನ್ನು ಯಾವಾಗಲೋ ಕಳಕೊಂಡವರ ನಡುವೆ ವಾರ್ಷಿಕ ಆಯವ್ಯಯದ ಕುರಿತಂತೆ ನಡೆಯುವ ಚರ್ಚೆಯಿಂದ ನಮ್ಮ ವಿಮರ್ಶೆಗೆ ಒಂದು ತಾರ್ಕಿಕ ಅಂತ್ಯ ಸಿಗುವುದು ಸಾಧ್ಯವೇ ಇಲ್ಲ. ಈ ಒಂದು ಕಾರಣದಿಂದಾಗಿ ವಾರ್ಷಿಕ ಆಯವ್ಯಯದ ಕುರಿತು ನನ್ನ ಆಲೋಚನೆಗೆ ಸಿಕ್ಕುವ ಮತ್ತು ದಕ್ಕುವ ಒಂದಷ್ಟು ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಕೆಲಸವನ್ನು ಮಾಡಬೇಕೆಂದಿದ್ದೇನೆ.

ಈ ದಿಸೆಯಲ್ಲಿ ಮೊದಲ ಹಂತದಲ್ಲಿ ಈಗಾಗಲೇ ಆಡಳಿತ ಮತ್ತು ವಿರೋಧ ಪಕ್ಷಗಳು ಬಜೆಟ್‍ನ ಬಗ್ಗೆ ನೀಡಿರುವ ಪ್ರತಿಕ್ರಿಯೆಯನ್ನು ಗಮನಿಸಿ ಅದರ ಕುರಿತಾದ ಅಭಿಪ್ರಾಯ ವ್ಯಕ್ತಪಡಿಸುವುದು. ಆ ನಂತರದಲ್ಲಿ ವಾರ್ಷಿಕ ಆಯವ್ಯಯವನ್ನು ನಾವು ಬದುಕುವ ಕಾಲಘಟ್ಟದ ವಾಸ್ತವ ಹೇಗೆಲ್ಲಾ ಹಿಡಿದಿಟ್ಟು ನಮ್ಮದೇ ಸಂಪನ್ಮೂಲವನ್ನು ಯಾವೆಲ್ಲ ಮುಲಾಜುಗಳಿಗೆ ಒಳಗಾಗಿ ವಿನಿಯೋಗಿಸುವ ಅನಿವಾರ್ಯತೆಯನ್ನು ಸೃಷ್ಟಿಸಿಬಿಟ್ಟಿದೆ ಎನ್ನುವುದನ್ನು ವಿವರಿಸುವುದು. ಅಂತಿಮವಾಗಿ ನಮ್ಮನ್ನು ಆಳುವವರು ಹೇಳುತ್ತಿರುವ ಮತ್ತು ಹೇಳದೇ ಇರುವ ವಿಷಯಗಳ ಸುತ್ತ ಸೃಷ್ಟಿಯಾಗಿರುವ ಅಲ್ಲದೇ ನಮ್ಮನ್ನು ಕಾಡುವ ಸಿಕ್ಕುಗಳಿಂದ ಮುಕ್ತರಾಗುವ ಮಾರ್ಗಗಳು ಯಾವುದಿವೆ ಎನ್ನುವ ಕುರಿತ ವಿವರಗಳನ್ನು ನಿಮ್ಮೆದುರು ಮಂಡಿಸುವುದು.

ಆಡಳಿತ ಪಕ್ಷದ ಸದಸ್ಯರು ಈ ವರ್ಷದ ಆಯವ್ಯಯದಲ್ಲಿ ಮಧ್ಯಮ ವರ್ಗಕ್ಕೆ ನೀಡಲಾದ ಕೊಡುಗೆಗ ಳ ಕುರಿತು, ರಕ್ಷಣಾ ವೆಚ್ಚ ಕಡಿತ  ಗೊಳಿಸಿರುವ, ಆಮದು ಸುಂಕ, ಕೃಷಿ ವಲಯದ ಕೆಲವೊಂದು ಬೆಳವಣಿಗೆಗೆ ನೀಡಲಾಗುತ್ತಿರುವ ಅನುದಾನದ ಕುರಿತಂತೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಾ ಇದೊಂದು ವಿಕಸಿತ ಭಾರತದ ಕನಸನ್ನು ನನಸು ಮಾಡುವ ಆಯವ್ಯಯ ಪತ್ರವೆಂದು ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಈ ಅಭಿಪ್ರಾಯವನ್ನು ಕಳೆದ ಹಲವಾರು ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿ ಪರಾಮರ್ಶಿಸಿದರೆ ಇದರ ಸತ್ಯಾಸತ್ಯತೆಯ ಬಗ್ಗೆ ಇನ್ನಷ್ಟು ನಿಖರತೆ ಗೋಚರವಾಗಬಹುದು. ಅಲ್ಲದೆ ಬದಲಾಗುತ್ತಿರುವ ಜಾಗತಿಕ ಆರ್ಥಿಕತೆಯ ಹಿನ್ನಲೆಯಲ್ಲಿ ಕೂಡಾ ವಾರ್ಷಿಕ ಆಯವ್ಯಯದಲ್ಲಿ ಪ್ರಸ್ತಾಪಿತ ವಿಷಯಗಳನ್ನು ಒರಗೆ ಹಚ್ಚಬೇಕಾದೀತು. ಉದಾಹರಣೆಗೆ ಅಮೇರಿಕದ ನೂತನ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಭಾರತ ಆಮದು ಸುಂಕವನ್ನು ಇಳಿಸದಿದ್ದರೆ ಪ್ರತೀಕಾರದ ಕ್ರಮದ ಬಗ್ಗೆ, ರಕ್ಷಣಾ ಸಾಮಾಗ್ರಿಗಳ ಆಮದು ಹೆಚ್ಚಿಸುವ ಬಗ್ಗೆ ನೀಡಲಾದ ಹೇಳಿಕೆಗಳನ್ನು ಇಟ್ಟುಕೊಂಡು ನಮ್ಮ ಆಯವ್ಯಯವನ್ನು ನೋಡಿದರೆ ಬೇರೆಯೇ ಹೊಳಹು ದೊರಕಬಹುದು. ಅರ್ಥ ಸಚಿವರೇ ಹೇಳಿದಂತೆ ಮತ್ತು ಆರ್ಥಿಕ ಸಮೀಕ್ಷೆಗಳೂ ಸೂಚಿಸಿದಂತೆ, ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಉತ್ತೇಜಿಸುವ ಮೂಲಕ ಹಣದ ಚಲಾವಣೆಗೆ ಚುರುಕು ಮುಟ್ಟಿಸಿ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡುವ ಕ್ರಮಕ್ಕೆ ಈ ವರ್ಷದ ಬಜೆಟ್‌ನಲ್ಲಿ ಪ್ರಾಶಸ್ತ್ಯ ನೀಡಲಾಗಿದೆ. ಆದಾಯ ತೆರಿಗೆಯ ಮಿತಿಯಲ್ಲಿ ಏರಿಕೆ, ಗ್ರಾಹಕರಿಗೆ ದೊರಕಬಹುದಾದ ಸರಕಾರದ ವೆಚ್ಚಗಳ ಏರಿಕೆ ಇದೆಲ್ಲವೂ ಈ ನಿಟ್ಟಿನಲ್ಲಿ ತೆಗೆದುಕೊಳ್ಳಲಾದ ಕ್ರಮಗಳು. ಇಂತಹ ಸಂದರ್ಭದಲ್ಲಿ ಬರುವ ಚುನಾವಣೆಯನ್ನು ಗಮನದಲ್ಲಿರಿಸಿ ಬಿಹಾರದ ಜನರನ್ನು ಖುಷಿಪಡಿಸುವ ಪ್ರಯತ್ನವನ್ನೂ ವಿತ್ತ ಸಚಿವರು ಮಾಡಿದ್ದಾರೆ. ಚುನಾವಣೆಯನ್ನು ಕೇಂದ್ರೀಕರಿಸಿ ಯೋಜನೆ ರೂಪಿಸುವ ಕೆಲಸ. ಇದು ಮೊದಲನೆಯದೂ ಅಲ್ಲ ಕೊನೆಯದೂ ಆಗಿರಲಾರದು. ಆದರೆ ನಾವು ಇಂತಹ ಜನಪ್ರಿಯ ಯೋಜನೆಗಳು ಜನರ ಬದುಕಿನಲ್ಲಿ ತರಬಹುದಾದ ಧನಾತ್ಮಕ ಪರಿಣಾಮ ಮತ್ತು ದೇಶದ ಆರ್ಥಿಕ ಆರೋಗ್ಯದ ಮೇಲೆ ಉಂಟು ಮಾಡಬಹುದಾದ ಋಣಾತ್ಮಕ ಅಂಶಗಳನ್ನು ವಿಶ್ಲೇಷಿಸಬೇಕಾಗಿದೆ.

ಕರ್ನಾಟಕದ ಮುಖ್ಯಮಂತ್ರಿಗಳು ಮತ್ತು ಸಚಿವರ ಪ್ರತಿಕ್ರಿಯೆಯನ್ನು ಗಮನಿಸಿದರೆ, ಕೇಂದ್ರ ಸರಕಾರ ಅನುಸರಿಸುತ್ತಿರುವ ತಾರತಮ್ಯ ನೀತಿಯ ಕುರಿತ ಅಸಮಾಧಾನ ಮತ್ತೆ ಎದ್ದು ಕಾಣುತ್ತಿದೆ. ಶಿಕ್ಷಣ, ಆರೋಗ್ಯ ಸಂಸ್ಥೆಗಳಾಗಲಿ, ಜಿಎಸ್‍ಟಿ ಸಂಬಂಧಿತ ಲೋಪಗಳ ಸರಿಪಡಿಸುವಿಕೆಯಾಗಲಿ, ಬರ, ನೆರೆ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದ ಅಭಿವೃದ್ಧಿಯ ಕುರಿತು ನೀಡಲಾದ ಯಾವ ಸಂಗತಿಗಳೂ ಬಜೆಟ್‍ನಲ್ಲಿ ಕಂಡು ಬರುತ್ತಿಲ್ಲ. ಬೆಂಗಳೂರಿನ ಅಭಿವೃದ್ಧಿಗಾಗಿ ವಿಶೇಷ ಅನುದಾನವಾಗಲಿ, ಕಳಸಾ ಬಂಡೂರಿ ಯೋಜನೆಯ ಅನುಷ್ಠಾನವಾಗಲಿ, ರೈಲ್ವೆಯ ವಿಸ್ತರಣೆಯಾಗಲಿ, ಉತ್ತರ ಕರ್ನಾಟಕದಲ್ಲಿ ಸ್ಥಾಪಿಸಬೇಕಿದ್ದ ರಾಷ್ಟ್ರೀಯ ಮಟ್ಟದ ಪರಿಹಾರ ಸಂಬಂಧಿತ ಅನುದಾನವಾಗಲಿ, ಕೇಂದ್ರ ಸರಕಾರ ನಿರೀಕ್ಷಿತ ಸ್ಪಂದನೆಯನ್ನು ನೀಡಿಲ್ಲ ಎನ್ನುವುದು ಸುಳ್ಳೇನಲ್ಲ. ಸಂಪನ್ಮೂಲ ಕ್ರೋಢೀಕರಣಕ್ಕೆ ಸರ್ ಚಾರ್ಜ್‍ನಂತಹ (ಅಂದರೆ ರಾಜ್ಯದೊಂದಿಗೆ ಹಂಚಿಕೊಳ್ಳುವ ಅಗತ್ಯವಿಲ್ಲದ ವರಮಾನದ ಮೂಲ) ಸಂಪೂರ್ಣ ಕೇಂದ್ರ ಸರಕಾರವೇ ಇಟ್ಟುಕೊಳ್ಳಬಹುದಾದಂತಹ ಆದಾಯದ ಮೂಲವನ್ನು ಹೆಚ್ಚು ಮಾಡಿಕೊಳ್ಳುತ್ತಿದೆ. ಕಳೆದ ಹತ್ತು ವರ್ಷಗಳ ಕೇಂದ್ರ ಸರಕಾರದ ನಡೆಯನ್ನು ಗಮನಿಸಿದರೆ, ರಾಜ್ಯಗಳ ಅಧಿಕಾರ, ಆದಾಯದ ಮೂಲಗಳನ್ನು ನಿಧಾನವಾಗಿ ಕಬಳಿಸುತ್ತಾ ಬರುತ್ತಿರುವುದನ್ನು ಕಾಣಬಹುದು. ಈ ಕಾರಣದಿಂದ ಬಿಜೆಪಿಯೇತರ ಸರಕಾರಗಳನ್ನು ನಿಯಂತ್ರಿಸುವ ಪ್ರವೃತ್ತಿಯ ಜೊತೆಗೆ ದಕ್ಷಿಣದ ರಾಜ್ಯಗಳ ಕುರಿತು ಅನಾದರ ಪ್ರವೃತ್ತಿಯೂ ಬೆಳೆಯುತ್ತಿದೆ. ಸಂಪನ್ಮೂಲ ಹಂಚಿಕೆಯನ್ನು ಗಮನಿಸಿದರೆ ದಕ್ಷಿಣದ ಐದು ರಾಜ್ಯಗಳಿಗೆ ಹಂಚಿದ ಸಂಪನ್ಮೂಲ ಉತ್ತರದ ಬಿಹಾರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಕ್ಕೆ ನೀಡಿದ ಕೊಡುಗೆಯ ಶೇಕಡಾ 36.5% ಮಾತ್ರ. ಮುಂದಿನ ದಿನಗಳಲ್ಲಿ ಪಾರ್ಲಿಮೆಂಟ್ ಕ್ಷೇತ್ರಗಳ ಮರುವಿಂಗಡಣೆಯಾದಲ್ಲಿ ಈ ರೀತಿಯ ತಾರತಮ್ಯ ನೀತಿಗೆ ಪ್ರಜಾಪ್ರಭುತ್ವದ ಅಧಿಕೃತ ಮುದ್ರೆ ಬೀಳುವುದರಲ್ಲಿ ಸಂಶಯವೇ ಇಲ್ಲ. ಸಂಪನ್ಮೂಲ ಹಂಚಿಕೆಯಲ್ಲಿ ತೆರಿಗೆ ವಿಧಿಸುವಲ್ಲಿ ಚುನಾವಣೆಯಲ್ಲಿ ಪ್ರಯೋಜನವಾಗಬಲ್ಲ ನಾಣ್ಯಗಳೇ ಚಲಾವಣೆಯಲ್ಲಿರುವ ನೀತಿಯನ್ನು ಆಡಳಿತಾರೂಢ ಪಕ್ಷಗಳು ಅನುಸರಿಸುತ್ತಿರುವುದು, ದೇಶದ ಒಟ್ಟಾರೆ ಹಿತದೃಷ್ಟಿಯಿಂದ ಅಪೇಕ್ಷಣೀಯವಲ್ಲ.

ದೇಶದ ಸಂಪನ್ಮೂಲ ಹಂಚಿಕೆ ಮತ್ತು ಅಭಿವೃದ್ಧಿಯ ವೇಗವನ್ನು ನಿರ್ದೇಶಿಸಬೇಕಾದದ್ದು ಜನಹಿತವೇ ಹೊರತು ಅಧಿಕಾರಸ್ಥರ ಮರ್ಜಿಯಲ್ಲ. ಆದರೆ ಜನಹಿತದ ಪ್ರಶ್ನೆಗಿಂತ ಪ್ರಸ್ತುತ ಪರಿಸ್ಥಿತಿಯಲ್ಲಿ ಅಧಿಕಾರಸ್ಥರ, ಬಂಡವಾಳದ ಶಕ್ತಿಯೇ ನಿರ್ಣಾಯಕವಾಗುತ್ತಿದೆ. ಊರೊಳಗೆ ಊಳಿಗಮಾನ್ಯ ವ್ಯವಸ್ಥೆಯಲ್ಲಿ ಈ ಹಿಂದೆ ಪಾಳೇಗಾರರು ಆಡಳಿತ ನಡೆಸುತ್ತಿರುವ ರೀತಿಗೆ ಜಗತ್ತು ಮತ್ತೆ ಹೊರಳುತ್ತಿರುವಂತೆ ಭಾಸವಾಗುತ್ತಿದೆ. ಅಮೇರಿಕದಲ್ಲಿ ಟ್ರಂಪ್ ಆಡುತ್ತಿರುವ ಮಾತು, ಅನುಸರಿಸುತ್ತಿರುವ ನೀತಿ ಕೇವಲ ಅಮೇರಿಕದ ಅಧಿಕಾರದ ಕೇಂದ್ರದ್ದು ಮಾತ್ರವಲ್ಲ ಇದು ವಿಶ್ವದಾದ್ಯಂತ ಅಧಿಕಾರದ’ ಕೇಂದ್ರವನ್ನು ಆಕ್ರಮಿಸಿದ ಬಹುಪಾಲು ಎಲ್ಲರ ಮಾತುಗಳು ಕೂಡಾ. ವಿಶ್ವದ ಆರ್ಥಿಕ ವಿನ್ಯಾಸವನ್ನು ನಿಯಂತ್ರಿಸುತ್ತಿರುವ ಬಂಡವಾಳ, ಈ ಹಿಂದೆ ವ್ಯಕ್ತಿ ಸ್ವಾತಂತ್ರ್ಯದ ಭಾಷೆ, ಸಂಸ್ಕೃತಿಯನ್ನು ದುಡಿಸಿಕೊಂಡು ತನಗೆ ಸೂಕ್ತವೆನಿಸುವ ರಾಜಕೀಯ ಅಧಿಕಾರವನ್ನು ಪರೋಕ್ಷವಾಗಿ ಗಳಿಸಿದ್ದರೆ; ಸದ್ಯದ ಪರಿಸ್ಥಿತಿಯಲ್ಲಿ ಜಾತಿ, ಧರ್ಮ, ಭಾಷೆ, ಸಂಸ್ಕೃತಿಯ ಹೆಸರಿನ ಬೆದರು ಬೊಂಬೆಗಳನ್ನು ನಿಲ್ಲಿಸಿ ತನಗೆ ಅನುಕೂಲಕರವಾದ ವಾತಾವರಣವನ್ನು ನಿರ್ಮಿಸಿಕೊಳ್ಳುತ್ತಿದೆ. ಹಾಗಾಗಿ ಯಾವುದೇ ಸರಕಾರವಿರಲಿ ಜನರ ಸಹಭಾಗಿತ್ವವಿರುವ ಅಂದರೆ ಭಾಗವಹಿಸುವಿಕೆಗೆ ಸಾಧ್ಯವಿರುವ ಆಡಳಿತ ವ್ಯವಸ್ಥೆ, ಉತ್ಪಾದನಾ ವ್ಯವಸ್ಥೆಯ ಬದಲಿಗೆ, ಕೇಂದ್ರೀಕೃತ ಉತ್ಪಾದನಾ ವ್ಯವಸ್ಥೆ ಮತ್ತು ಆಡಳಿತ ವ್ಯವಸ್ಥೆಯ ಕಡೆಗೆ ನಡೆಯುತ್ತಿದೆ. ಜನರ ಹೊಟ್ಟೆಗೆ ಬೇಕಾದಷ್ಟು ತುಪ್ಪವಿರದಿದ್ದರೇನಂತೆ ಮೂಗಿಗೆ ಹಚ್ಚಿಬಿಡುವಷ್ಟು ಇದ್ದರೆ ಸಾಕಲ್ಲ?

ಇಂತಹ ಆರ್ಥಿಕ ವಿನ್ಯಾಸವನ್ನು ಬದಲಿಸಲು ಜನರ ಆಶಯ, ಸಮಸ್ಯೆಗಳ ಬಗ್ಗೆ ಮಾತನಾಡುವ ಸಂಪ್ರದಾಯ, ಭಾಷೆ, ಜಾತಿ, ಧರ್ಮದ ವಿಸ್ಮೃತಿಗೆ ಒಳಗಾದ ಜನರು ಹೃದಯಕ್ಕಿಂತ ಮೆದುಳಿಗೆ ಹೆಚ್ಚು ಕೆಲಸ ನೀಡುವ ಪ್ರಯತ್ನ ಮಾಡಿದರೆ ಮಾತ್ರ ಏನಾದರೂ ಆಗಬಹುದು. ಬಲಪಂಥೀಯರ ‘ವಾದ’ವೆನ್ನುವ ಯುಕ್ತಿಗೆ ಜನ ಸಂವಾದ ಸಂಸ್ಕೃತಿಯನ್ನು ಬಲಪಡಿಸಿದರಷ್ಟೆ ಸಾಕು. ಇಲ್ಲವಾದಲ್ಲಿ ಮುಂಜಾವಿನ ಕೋಳಿ ಕೂಗುವ ತನಕ ಕಾಯಬೇಕಷ್ಟೇ?.

ಡಾ. ಉದಯ ಕುಮಾರ್‌ ಇರ್ವತ್ತೂರು

ವಿಶ್ರಾಂತ ಪ್ರಾಂಶುಪಾಲರು

ಇದನ್ನೂ ಓದಿ- ಕರ್ನಾಟಕಕ್ಕೆ ಬಜೆಟ್‌ನಲ್ಲಿ ಅನ್ಯಾಯ; ಸಿಎಂ ಸಿದ್ದರಾಮಯ್ಯ  ಆಕ್ರೋಶ

More articles

Latest article