ಬೆಂಗಳೂರು: ಕೇಂದ್ರ ಸರಕಾರದ ಬಜೆಟ್ ತೀರಾ ನಿರಾಶಾದಾಯಕವಾಗಿದೆ. ಮಧ್ಯಮ ವರ್ಗದ ಆದಾಯ ತೆರಿಗೆದಾರರಿಗೆ ಭಾರೀ ಲಾಭ ತಂದುಕೊಡುವಂತೆ ಕಣ್ಣೊರೆಸುವ ತಂತ್ರಗಳನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಜಿಡಿಪಿ ಬೆಳವಣಿಗೆ ಹೆಚ್ಚಿಸುವಂತಹ ಯಾವ ಅಂಶವೂ ಬಜೆಟ್ಟಿನಲ್ಲಿ ಇಲ್ಲದಿರುವುದು ಕಳವಳಕಾರಿ ಅಂಶವಾಗಿದೆ. ಬಂಡವಾಳ ವೆಚ್ಚದಲ್ಲಿ ಗಣನೀಯ ಏರಿಕೆ ಮಾಡದೆ ಇರುವುದು ಚಿಂತಿಸುವಂತಹ ವಿಷಯವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಕೇಂದ್ರ ಸರಕಾರವು ಶನಿವಾರ ಮಂಡಿಸಿದ ಬಜೆಟ್ ಬಗ್ಗೆ ಮಾತನಾಡಿರುವ ಅವರು, ಮುಖ್ಯವಾಗಿ ಮಧ್ಯಮ ವರ್ಗದ ಆದಾಯ ತೆರಿಗೆದಾರರಿಗೆ ನಿರಾಳತೆ ತಂದುಕೊಡುತ್ತಿರುವಂತೆ ಈ ಬಜೆಟ್ ಭಾಸವಾಗುತ್ತಿದೆ. ಆದರೆ, ವಾಸ್ತವದಲ್ಲಿ ಹಾಗಿಲ್ಲ. 12 ಲಕ್ಷ ರೂಪಾಯಿ ವರೆಗೆ ತೆರಿಗೆ ವಿನಾಯಿತಿ ಅಂದಿದ್ದಾರೆ. ಆದರೆ ಅದಕ್ಕಿಂತ ಒಂದು ರೂಪಾಯಿ ಹೆಚ್ಚಿನ ಆದಾಯ ಬಂದರೂ ಈ ವಿನಾಯಿತಿ ಸಿಗುವುದಿಲ್ಲ. ಬದಲಿಗೆ ಶೇ.20ಕ್ಕೂ ಹೆಚ್ಚು ತೆರಿಗೆ ವಿಧಿಸುತ್ತಾರೆ. ಇದರ ಬದಲು ತೆರಿಗೆದಾರರಿಗೆ ನೇರವಾಗಿ ಮತ್ತು ಸುಲಭವಾಗಿ ಪ್ರಯೋಜನ ಸಿಗುವಂತೆ ನೋಡಿಕೊಳ್ಳಬೇಕಾಗಿತ್ತು. ಸಮಾಜದ ಈ ನಿರೀಕ್ಷೆಗೆ ಸ್ಪಂದಿಸಲು ನರೇಂದ್ರ ಮೋದಿ ಸರಕಾರ ವಿಫಲವಾಗಿದೆ. ಇದರ ಬಿಸಿ ಮುಂದಿನ ದಿನಗಳಲ್ಲಿ ಜನರಿಗೆ ಗೊತ್ತಾಗಲಿದೆ ಎಂದಿದ್ದಾರೆ.
ಬಂಡವಾಳ ವೆಚ್ಚವನ್ನು ಬಹುಮಟ್ಟಿಗೆ ಯಥಾಸ್ಥಿತಿಯಲ್ಲೇ ಉಳಿಸಿಕೊಂಡಿರುವುದು ಆರ್ಥಿಕ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಇದರಿಂದ ಅಭಿವೃದ್ಧಿಯ ವೇಗ ಕುಂಠಿತವಾಗುತ್ತದೆ. ನೆರೆಯ ಚೀನಾ ಒಡ್ಡುತ್ತಿರುವ ಸ್ಪರ್ಧೆಯನ್ನು ಎದುರಿಸಬೇಕೆಂದರೆ ನಮ್ಮಲ್ಲಿ ಬಂಡವಾಳ ವೆಚ್ಚವನ್ನು ಹೆಚ್ಚಿಸುವ ಕ್ರಮ ಬೇಕಾಗಿತ್ತು. ಆದರೆ ಬಜೆಟ್ಟಿನಲ್ಲಿ ಆ ಪ್ರಸ್ತಾಪವೇ ಇಲ್ಲದಿರುವುದು ದುರದೃಷ್ಟಕರ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಕೈಗಾರಿಕಾ ಬೆಳವಣಿಗೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವ ಅವಶ್ಯಕತೆ ಇತ್ತು. ಅದರಲ್ಲೂ ದೇಶದ ಐಟಿ, ಬಿಟಿ, ಸ್ಟಾರ್ಟಪ್ ರಾಜಧಾನಿಯಾಗಿರುವ ಕರ್ನಾಟಕಕ್ಕೆ ಮೋದಿ ಸರಕಾರ ನಿರ್ದಿಷ್ಟವಾಗಿ ಯಾವ ಉಪಯುಕ್ತ ಉಪಕ್ರಮವನ್ನೂ ಘೋಷಿಸಿಲ್ಲ. ದೇಶದ ಒಟ್ಟಾರೆ ರಫ್ತು ವಹಿವಾಟಿನಲ್ಲಿ ರಾಜ್ಯದ ಪಾಲು ಅಧಿಕವಾಗಿದೆ. ಆದ್ದರಿಂದ ನಮಗೆ ಏನನ್ನಾದರೂ ಹೆಚ್ಚಿನದನ್ನು ಕೊಡಬೇಕಿತ್ತು. ಬಿಹಾರದಂತಹ ರಾಜ್ಯಕ್ಕೆ ಚುನಾವಣೆ ಮೇಲೆ ಕಣ್ಣಿಟ್ಟುಕೊಂಡು ಯೋಜನೆ ಘೋಷಿಸುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇಶವನ್ನು 5 ಟ್ರಿಲಿಯನ್ ಡಾಲರ್ ಮೌಲ್ಯದ ಆರ್ಥಿಕತೆಯನ್ನಾಗಿ ಮಾಡಲು ಚಾರಿತ್ರಿಕ ಕ್ರಮಗಳ ಅನಿವಾರ್ಯತೆ ಇದೆ. ಅದಕ್ಕೆ ಬೇಕಾದ ಧೈರ್ಯವನ್ನು ಪ್ರದರ್ಶಿಸುವಲ್ಲಿ ಈ ಬಜೆಟ್ ಸೋತಿದೆ ಎಂದು ಪಾಟೀಲ ಅಭಿಪ್ರಾಯಪಟ್ಟಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಈ ಬಾರಿಯಾದರೂ ಉತ್ತರ ಕರ್ನಾಟಕಕ್ಕೆ ಅಖಿಲ ಭಾರತ ವೈದ್ಯಕೀಯ ಸಂಸ್ಥೆ (ಏಮ್ಸ್) ಮಂಜೂರು ಮಾಡುತ್ತಾರೆ ಎನ್ನುವ ನಿರೀಕ್ಷೆ ಕೂಡ ಹುಸಿಯಾಗಿದೆ. ಒಟ್ಟಿನಲ್ಲಿ ಇದು ಜನವಿರೋಧಿ ಬಜೆಟ್ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಟೀಕಿಸಿದರು.