ಕರ್ನಾಟಕಕ್ಕೆ ಬಜೆಟ್‌ನಲ್ಲಿ ಅನ್ಯಾಯ; ಸಿಎಂ ಸಿದ್ದರಾಮಯ್ಯ  ಆಕ್ರೋಶ

Most read

ಮೈಸೂರು: ಈ ಬಾರಿಯ ಕೇಂದ್ರ ಬಜೆಟ್ ಕರ್ನಾಟಕ ಹಾಗೂ ದೇಶದ ಹಿತದೃಷ್ಟಿಯಿಂದ ಬಹಳ ನಿರಾಶಾದಾಯಕ ಬಜೆಟ್ ಆಗಿದೆ. ದೂರದೃಷ್ಟಿ ಇಲ್ಲದ ಬಜೆಟ್. ಮೋದಿ ಸರ್ಕಾರ ಕರ್ನಾಟಕಕ್ಕೆ ಚೆಂಬು ಕೊಡುವುದನ್ನು ಮುಂದುವರಿಸಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಬಜೆಟ್‌ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಜೆಟ್ ಪೂರ್ವಭಾವಿ ಚರ್ಚೆ ಸಂದರ್ಭದಲ್ಲಿ ಕರ್ನಾಟಕ ಅನೇಕ ಬೇಡಿಕೆಗಳನ್ನು ಇಟ್ಟಿತ್ತು. ಅವು ಬೇಡಿಕೆಗಳಾಗಿಯೇ ಉಳಿದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವರ್ಷದ ಬಜೆಟ್ ಗಾತ್ರ 50.65 ಲಕ್ಷ ಕೋಟಿ ಆಗಿದ್ದು, ಇದರಲ್ಲಿ ಸಾಲದ ಮೊತ್ತ 15.68 ಲಕ್ಷ ಕೋಟಿ ಹಾಗೂ ಬಡ್ಡಿ‌ ಪಾವತಿಗೆ 12.70 ಲಕ್ಷ ಕೋಟಿ ನೀಡುತ್ತಿದೆ. ಈ ದೇಶದ ಮೇಲೆ ಸರ್ಕಾರ 205 ಲಕ್ಷ ಕೋಟಿ ಸಾಲ ಹೊರಿಸಿದೆ. ಕರ್ನಾಟಕ ತೆರಿಗೆ ಪಾವತಿಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಆದಾಗ್ಯೂ ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ರಾಜಕೀಯ ಕಾರಣಗಳಿಗೆ ಹೆಚ್ಚಿನ ಪಾಲು ನೀಡಲಾಗಿದೆ. ಇದೊಂದು ರೀತಿ ಬಿಹಾರ ಮತ್ತು ಆಂಧ್ರಪ್ರದೇಶದ ದ ಬಜೆಟ್ ಇದ್ದಂತಿದೆ. ರಾಜ್ಯದ ಯೋಜನೆಗಳಾದ ಮೇಲೆದಾಟು, ಮಹದಾಯಿ, ಕೃಷ್ಣಾ, ಭದ್ರಾ ಈ ಯಾವ ಯೋಜನೆಗಳಿಗೂ ಅನುದಾನ ನೀಡಿಲ್ಲ ಎಂದು ಆಪಾದಿಸಿದರು.

2023-24ರ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ತುಂಗಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ ಘೋಷಣೆ ಮಾಡಿದ್ದರು. ಈವರೆಗೆ ಒಂದೇ ಒಂದು ರೂಪಾಯಿ ಬಂದಿಲ್ಲ. ಬೊಮ್ಮಾಯಿ ರಾಜ್ಯ ಬಜೆಟ್ ಮಂಡಿಸುವಾಗ ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡುತ್ತೇವೆ ಎಂದು ಹೇಳೀದ್ದರು. ಬಜೆಟ್ ನಲ್ಲಿ ಆ ಪ್ರಸ್ತಾವವೇ ಇಲ್ಲ. ನೀರಾವರಿ ಯೋಜನೆಗೆ ಬಿಡಿಗಾಸು ಕೊಡುವುದಿರಲಿ, ಯೋಜನೆಗಳ ಪ್ರಸ್ತಾವವನ್ನೇ ಮಾಡಿಲ್ಲ. ರಾಯಚೂರಿನಲ್ಲಿ ಏಮ್ಸ್ ಘೋಷಣೆ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಸಚಿವ ಜೆ.ಪಿ. ನಡ್ಡಾ ಭರವಸೆ ನೀಡಿದ್ದರು. ಅದರ ಪ್ರಸ್ತಾವವೂ ಇಲ್ಲ. ಕುಡಿಯುವ ನೀರು, ಹೆದ್ದಾರಿಗೆ ಹಣ ಒದಗಿಸಲು ಕೇಳಿದ್ದೆವು. ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ರಾಜ್ಯಕ್ಕೆ ಎಸಗಿರುವ ಅನ್ಯಾಯಗಳ ಪಟ್ಟಿ ಮಾಡಿದರು.

 ಬೆಂಗಳೂರಿನಲ್ಲಿ ಮೂಲ ಸೌಕರ್ಯ, ರಾಜಕಾಲುವೆ ನಿರ್ವಹಣೆ, ಬಿಜಿನೆಸ್ ಕಾರಿಡಾರ್ ಗೆ ಹಣಕಾಸಿನ ನೆರವು ಕೇಳಿದ್ದೆವು. ಆದರೆ ಖಾಲಿ ಚೆಂಬು‌ ನೀಡಿದ್ದಾರೆ. ಅಂಗನವಾಡಿ ಆಶಾ ಕಾರ್ಯಕರ್ತರ ಗೌರವ ಧನ ಹೆಚ್ಚಿಸಿಲ್ಲ. ಐಸಿಡಿಎಸ್ ಯೋಜನೆ ಕೇಂದ್ರ ಸರ್ಕಾರದ್ದೇ ಅಲ್ಲವೇ ಎಂದು ಪ್ರಶ್ನಿಸಿ, ವಸತಿ ಯೋಜನೆಯ ಸಹಾಯಧನ 1.5 ಲಕ್ಷ ದಿಂದ 5 ಲಕ್ಷಕ್ಕೆ ಏರಿಸಲು ಕೋರಿದ್ದೆವು. ಗ್ರಾಮೀಣ ಭಾಗದಲ್ಲಿ 3 ಲಕ್ಷಕ್ಕೆ ಏರಿಸುವಂತೆ ಕೋರಿದ್ದೆವು. ಯಾವುದನ್ನೂ ಹೆಚ್ಚಿಸಿಲ್ಲ ಎಂದರು.

 ನರೇಗಾಕ್ಕೆ ಕಳೆದ ಬಜೆಟ್ ನಲ್ಲಿ 89.154 ಕೋಟಿ ನೀಡಿದ್ದರೆ, ಈ ವರ್ಷ 86 ಸಾವಿರ ಕೋಟಿಗೆ ಇಳಿಸಿದ್ದಾರೆ‌. ಕೃಷಿ ಸಿಂಚಾಯ್ ಯೋಜನೆ ಅನುದಾನ 8250 ರಿಂದ 8260 ಕೋಟಿಗಷ್ಟೇ ಏರಿಕೆ ಆಗಿದೆ. ಎಸ್ ಸಿ/ ಎಸ್ ಟಿ ವಿದ್ಯಾರ್ಥಿವೇತನ ಏರಿಸಿಲ್ಲ. ಬೆಳೆ ವಿಮೆಗೆ ಕಳೆದ ವರ್ಷ 15,864 ಕೋಟಿ ಇದ್ದು, ಈ ವರ್ಷ 12,242 ಕೋಟಿಗೆ ಇಳಿಸಿದ್ದಾರೆ. ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಸಬ್ ಕಾ ಸಾಥ್ ಘೋಷಣೆ ಯಥೇಚ್ಛವಾಗಿ ಬಳಸಿದ್ದಾರೆ. ಆದರೆ ಈ ಬಜೆಟ್ ನಲ್ಲಿ ಮೇಕ್ ಇನ್ ಇಂಡಿಯಾಗೆ ಕೊಟ್ಟಿರುವುದು ಕೇವಲ 100 ಕೋಟಿ. ಇದೊಂದು ಬಾಯಿ ಮಾತಿನ ಬಜೆಟ್’ ಎಂದು ಸಿದ್ದರಾಮಯ್ಯ ಟೀಕಿಸಿದರು.

 ಕೃಷಿ ಕ್ಷೇತ್ರದ ಅನುದಾನ ಕಡಿಮೆ ಆಗಿದೆ. ಆಹಾರ ಖಾತ್ರಿಗೆ ಕಳೆದ ಬಜೆಟ್ ನಲ್ಲಿ 2.06 ಲಕ್ಷ ಕೋಟಿ ಇದ್ದರೆ, 2.03 ಲಕ್ಷ ಕೋಟಿಗೆ ಈ ಬಜೆಟ್ ನಲ್ಲಿ ಇಳಿಸಲಾಗಿದೆ. ಯುವಜನರು, ಮಹಿಳೆಯರ ಬದಲಿಗೆ ಕಾರ್ಪೋರೇಟ್ ಗೆ ಹೆಚ್ಚು ಅನುದಾನ ದೊರೆತಿದೆ. ಟೆಲಿಕಾಂ ಕ್ಷೇತ್ರದ ಮೂಲ ಸೌಕರ್ಯಕ್ಕೆ 28 ಸಾವಿರ ಕೋಟಿ ಕೊಡಲಾಗಿದೆ. ಬಿಹಾರ ರಾಜ್ಯದ ಚುನಾವಣೆ ಇರುವ ಕಾರಣ 3-4 ಬಾರಿ ಪ್ರಸ್ತಾಪ ಆಗಿದೆ‌. ಆದರೆ ಮುಂದಿನ ದಿನಗಳಲ್ಲಿ ಬಿಹಾರಕ್ಕೂ ಚೆಂಬು ನಿಶ್ಚಿತ ಎಂದು ವ್ಯಂಗ್ಯವಾಡಿದರು.

ಕರ್ನಾಟಕ ಬಿಜೆಪಿ ನಾಯಕರು ಕೇಂದ್ರಕ್ಕೆ ಮನವಿ ಸಲ್ಲಿಸಿಲ್ಲ. ತೆರಿಗೆ ಹಂಚಿಕೆಯಲ್ಲಿ ಆಗಿರುವ ಅನ್ಯಾಯ ಪ್ರಶ್ನಿಸಿಲ್ಲ. ಅವರಿಗೆ ಆ ಧೈರ್ಯವೂ ಇಲ್ಲ. ಅವರಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಎಚ್.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ,, ವಿ.ಸೋಮಣ್ಣ ಯಾರಿಗೂ ಮೋದಿ ಮುಂದೆ ಮಾತನಾಡುವ ಧೈರ್ಯ ಇಲ್ಲ ಎಂದು ಲೇವಡಿ‌ ಮಾಡಿದರು. ರೈತರು ದೀರ್ಘ ಕಾಲ ಹೋರಾಟ ಮಾಡಿದ್ದರೂ ಎಂಎಸ್ ಪಿಗೆ ಕಾನೂನು‌ ತಂದಿಲ್ಲ. ಆದಾಯ ತೆರಿಗೆ ಮಿತಿ ಇಳಿಕೆಯಿಂದ ಬಡವರು, ಕಾರ್ಮಿಕ ರಿಗೆ ಉಪಯೋಗ ಇಲ್ಲ ಎಂದರು.

ನನಗೆ ಕೇಂದ್ರ ಸರ್ಕಾರದ ಮೇಲೆ ವಿಶ್ವಾಸ, ನಿರೀಕ್ಷೆ ಇಲ್ಲ. ಆದಾಗ್ಯೂ ನಮಗೆ ಆಗಿರುವ ಅನ್ಯಾಯವನ್ನು ಮೋದಿ, ನಿರ್ಮಲಾ ಹಾಗೂ 16ನೇ ಹಣಕಾಸು ಆಯೋಗದ ಮುಂದೆಯೂ ಪ್ರಶ್ನಿಸುತ್ತೇವೆ. ಆಂಧ್ರ ಹಾಗೂ ಬಿಹಾರ ಹೊರತುಪಡಿಸಿ ಎಲ್ಲ ರಾಜ್ಯಗಳಿಗೂ ಅನ್ಯಾಯ ಆಗಿದೆ. ಕರ್ನಾಟಕ ದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಅದಕ್ಕೆ ದ್ವೇಷ ತೀರಿಸಿಕೊಳ್ಳುತ್ತಿದ್ದಾರೆ. ಮನುಸ್ಮೃತಿ ವಿರುದ್ಧ ಮಾತನಾಡುವ ಎಲ್ಲ ರಾಜ್ಯಗಳಿಗೂ ಅನ್ಯಾಯ ಆಗಿದೆ ಎಂದು ದೂರಿದರು.

More articles

Latest article