ಸಂವಿಧಾನವೂ ಉಳಿಯಬೇಕು, ನಿಮ್ಮ ಹಕ್ಕುಗಳೂ ಉಳಿಯಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

Most read

ನವದೆಹಲಿ: ನಮ್ಮ ಪಕ್ಷ ಸಂವಿಧಾನ ರಕ್ಷಣೆಗೆ ಹೋರಾಟ ಮಾಡುತ್ತಿದ್ದು, ದೇಶದ ಸಂವಿಧಾನವೂ ಉಳಿಯಬೇಕು ಹಾಗೂ ನಿಮ್ಮೆಲ್ಲರ ಹಕ್ಕುಗಳೂ ಉಳಿಯಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಸ್ತೂರನಗರ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಹಾಗೂ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ ಪರವಾಗಿ ಶನಿವಾರ ಪ್ರಚಾರ ನಡೆಸಿದರು.

40 ವರ್ಷಗಳ ಹಿಂದೆ ದೆಹಲಿಯಲ್ಲಿ ಕೇವಲ ಮೇಯರ್ ಅವರನ್ನು ಮಾತ್ರ ಆಯ್ಕೆ ಮಾಡಲಾಗುತ್ತಿತ್ತು. ಆದರೆ ರಾಜೀವ್ ಗಾಂಧಿ ಅವರು ದೆಹಲಿಗೆ ರಾಜ್ಯದ ಸ್ಥಾನಮಾನ ನೀಡಿ ಶಕ್ತಿ ತುಂಬಿದರು. ಆನಂತರ ದಿವಂಗತ ಶೀಲಾ ದೀಕ್ಷಿತ್ ಅವರ ಅವಧಿಯಲ್ಲಿ ಕಂಡ ಪ್ರಗತಿಯನ್ನು ನಂತರದ 10 ವರ್ಷಗಳಲ್ಲಿ ದೆಹಲಿ ಕಾಣಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಈ ಹಿಂದೆ ಏನಾಗಿದೆ ಎಂಬ ಚರ್ಚೆ ಈಗ ಬೇಡ. ನೀವೆಲ್ಲರೂ ಭವಿಷ್ಯದತ್ತ ಗಮನಹರಿಸಬೇಕು. ಇದಕ್ಕಾಗಿ ನಿಮ್ಮ ಕೈಯಲ್ಲಿ ಅತ್ಯುತ್ತಮ ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ನೀವು ಬಳಸಿಕೊಳ್ಳಬೇಕು. ನಾವು ಈ ದೇಶದ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಇತಿಹಾಸ ಸಂರಕ್ಷಣೆಗೆ ಹೋರಾಟ ಮಾಡುತ್ತಿದ್ದೇವೆ. ಸಂವಿಧಾನ ಉಳಿಯಬೇಕು, ನಿಮ್ಮ ಹಕ್ಕುಗಳೂ ಉಳಿಯಬೇಕು. ನೀವು ಆಯ್ಕೆ ಮಾಡುವ ಸರ್ಕಾರ ಜನ ಸಾಮಾನ್ಯರ ರಕ್ಷಣೆ ಮಾಡಬೇಕೇ ಹೊರತು ದೊಡ್ಡ ಉದ್ಯಮಿಗಳ ರಕ್ಷಣೆಯನ್ನಷ್ಟೇ ಮಾಡುವುದಲ್ಲ ಎಂದು ತಿಳಿಸಿದರು.

ಇಡೀ ದೇಶ ದೆಹಲಿ ಚುನಾವಣೆಯತ್ತ ನೋಡುತ್ತಿದೆ. ದೆಹಲಿ ಜನರ ತೀರ್ಮಾನ ದೇಶದ ಪ್ರಗತಿಯ ಮೇಲೆ ಅವಲಂಬಿತವಾಗಿದೆ. ವಾಜಪೇಯಿ ಅವರು ಪ್ರಧಾನಮಂತ್ರಿಯಾಗಿದ್ದಾಗ, ಬೆಂಗಳೂರು ಅಂತರರಾಷ್ಟ್ರೀಯ  ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆಗೆ ಆಗಮಿಸಿದ್ದರು. ಆಗ ಅವರು ಇಷ್ಟು ದಿನಗಳ ಕಾಲ ವಿದೇಶದ ನಾಯಕರು ಮೊದಲು ದೆಹಲಿಗೆ ಬಂದು ನಂತರ, ದೇಶದ ಇತರ ಭಾಗಗಳಿಗೆ ಹೋಗುತ್ತಿದ್ದರು. ಆದರೆ ಈಗ ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಆಗಮಿಸಿ ನಂತರ ದೇಶದ ಇತರೆ ನಗರಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಿದ್ದರು ಎಂದರು.

ಪ್ರಚಾರದ ಮಧ್ಯೆ ಬ್ಯಾಟಿಂಗ್ ಮಾಡಿದ ಡಿಸಿಎಂ: ಚುನಾವಣಾ ಪ್ರಚಾರದ ಮಧ್ಯೆ ತ್ಯಾಗರಾಜ್ ಕಾಲೋನಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಸ್ಥಳೀಯ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ದತ್ ಹಾಗೂ ಇತರೆ ಕಾಂಗ್ರೆಸ್ ನಾಯಕರು ಕ್ರಿಕೆಟ್ ಆಡಿದರು. ಈ ವೇಳೆ ಬ್ಯಾಟಿಂಗ್ ಮಾಡಿದ ಡಿ.ಕೆ. ಶಿವಕುಮಾರ್ ಅವರು ತಮ್ಮ ಬ್ಯಾಟಿಂಗ್ ಕೌಶಲ್ಯ ತೋರಿದರು.

More articles

Latest article