Saturday, February 1, 2025

ರೈತರು ಮತ್ತು ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಸಚಿವ ಈಶ್ವರ ಖಂಡ್ರೆ ಕಿಡಿ

Most read

ಬೆಂಗಳೂರು: ಕೇಂದ್ರ ಬಜೆಟ್ ರೈತರ ಬೇಡಿಕೆ ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ನಿರಾಶಾದಾಯಕವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ರೈತರು ಬೆಳೆದ ಬೆಳೆಗೆ ನಿಶ್ಚಿತ ಬೆಲೆ ಬರಬೇಕು. ಇಂದು ಅನ್ನದಾತರ ಸ್ಥಿತಿ ಅನಿಶ್ಚಿತತೆಯಿಂದ ಕೂಡಿದೆ. ಎಲ್ಲ ವಸ್ತುಗಳಿಗೂ ಎಂ.ಎಸ್.ಪಿ ಇರುವಾಗ ರೈತರ ಕಷ್ಟಾರ್ಜಿತಕ್ಕೆ ನಿರ್ದಿಷ್ಟ ಬೆಲೆ ನೀಡುವ ಎಂ.ಎಸ್.ಪಿ. ಕಾಯಿದೆ ಬಗ್ಗೆ ಪ್ರಕಟಿಸದ ಬಜೆಟ್ ಇದಾಗಿದೆ ಎಂದು ತಿಳಿಸಿದ್ದಾರೆ.

ರೈತರು ಪ್ರಕೃತಿ ವಿಕೋಪದಿಂದ ತತ್ತರಿಸಿದ್ದು, ಸಾಲದ ಹೊರೆ ತಾಳದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಕೃಷಿ ಸಾಲ ಮನ್ನಾ ಬಗ್ಗೆ ಈ ಬಜೆಟ್ ನಲ್ಲಿ ಯಾವುದೇ ಘೋಷಣೆ ಮಾಡಿಲ್ಲ. ಬಜೆಟ್ ನಲ್ಲಿ ಬಿಜೆಪಿ ಮತ್ತು ಎನ್.ಡಿ.ಎ.ಯೇತರ ರಾಜ್ಯಗಳಿಗೆ ಘೋರ ಅನ್ಯಾಯ ಮಾಡಲಾಗಿದೆ. ಒಕ್ಕೂಟ ವ್ಯವಸ್ಥೆಯ ಭಾರತದಲ್ಲಿ ಇಂತಹ ತಾರತಮ್ಯ ಸರ್ವತ ಸಮರ್ಥನೀಯವಲ್ಲ. ಇಂತಹ ಒಂದು ಕೆಟ್ಟ ಸಂಪ್ರದಾಯಕ್ಕೆ ಬಜೆಟ್ ನಾಂದಿ ಹಾಡಿದೆ. ಕರ್ನಾಟಕದ ನಿರೀಕ್ಷೆಗಳೂ ಹುಸಿಯಾಗಿವೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಎನ್.ಡಿ.ಎ. ಆಡಳಿತ 11 ವರ್ಷಗಳ ಕಾರ್ಯಕಾಲದಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ನಿರುದ್ಯೋಗ ಸಮಸ್ಯೆ ಉಲ್ಬಣಿಸಿದೆ. ಈ ಬಜೆಟ್ ನಲ್ಲಿ ಕೂಡ ದುಡಿಯುವ ಯುವಕರ ಕೈಗೆ ಉದ್ಯೋಗ ನೀಡುವ ಯೋಜನೆ ರೂಪಿಸದಿರುವುದು ದುರ್ದೈವ. ಹಿಂದುಳಿದ ಈಶಾನ್ಯ ಭಾರತದ ಅಭಿವೃದ್ಧಿಗೆ ಆದ್ಯತೆ ನೀಡುವ ಕೇಂದ್ರ ಸರ್ಕಾರ, ಹಿಂದುಳಿದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕಿಂಚಿತ್ತೂ ಗಮನ ಹರಿಸದೆ ಕಡೆಗಣಿಸಿರುವುದಕ್ಕೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕಿಡಿ ಕಾರಿದ್ದಾರೆ.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಹಿಂದುಳಿದ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಅಭಿವೃದ್ಧಿಗೆ 5 ಸಾವಿರ ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡುವಂತೆ ಕೇಂದ್ರ ಹಣಕಾಸು ಸಚಿವರಿಗೆ ಮನವಿ ಮಾಡಿದ್ದರು. ಆದರೆ, ಇದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

More articles

Latest article