ನಕಲಿ ಭಾವಚಿತ್ರ; ಪ್ರಶಾಂತ್‌ ಸಂಬರಗಿ ವಿರುದ್ಧ ನಟ ಪ್ರಕಾಶ್ ರಾಜ್ ದೂರು

Most read

ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ನಕಲಿ ಫೊಟೋ ಹರಿಬಿಡುತ್ತಿರುವುದರ ವಿರುದ್ಧ ನಟ ಪ್ರಕಾಶ್ ರಾಜ್ ಅವರು  ಪ್ರಶಾಂತ್‌ ಸಂಬರಗಿ ವಿರುದ್ಧ ಲಕ್ಷ್ಮಿಪುರಂ ಠಾಣೆಯಲ್ಲಿಇಂದು ಬೆಳಿಗ್ಗೆ ದೂರು ನೀಡಿದ್ದಾರೆ. ಪ್ರಶಾಂತ್ ಸಂಬರಗಿ ಅವರು ನನ್ನ ಖ್ಯಾತಿಗೆ ಕುತ್ತು ತರುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಫೇಸ್‌ಬುಕ್‌ನಲ್ಲಿ ನನ್ನ ಹೆಸರು ಬಳಸಿ ಕೃತಕ ಬುದ್ದಿಮತ್ತೆಯ(ಎಐ) ಮೂಲಕ ಸೃಷ್ಟಿಸಿದ ಭಾವಚಿತ್ರ ಬಳಸಿ ಸುಳ್ಳು ತಲೆಬರಹ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಶಾಂತ್ ಸಂಬರಗಿ ಅವರಿಗೆ ಇ ಮೇಲ್ ಮೂಲಕ ನೋಟಿಸ್ ಕಳುಹಿಸಿದ್ದು, ತನಿಖೆ ಮುಂದುವರೆದಿದೆ ಎಂದು ಲಕ್ಷ್ಮಿಪುರಂ ಠಾಣೆ ಪೊಲೀಸರು ತಿಳಿಸಿದ್ದಾರೆ.

ಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಶಾಂತ್ ಸಂಬರಗಿ ವಿರುದ್ಧ ದೂರು ನೀಡಿದ ಬಳಿಕ ಮಾತನಾಡಿದ ಅವರು, ಪ್ರಶಾಂತ್ ಸಂಬರಗಿ ಎಂಬಾತ ನಟಿಯರೂ ಸೇರಿದಂತೆ ಅನೇಕ ಖ್ಯಾತನಾಮರಿಗೆ ಈ ರೀತಿ ತೊಂದರೆ ನೀಡಿದ್ದು, ಆತನಿಗೆ ಪಾಠ ಕಲಿಸಬೇಕು, ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿ ಹರಡುವವರಿಗೂ ಇದೊಂದು ಪಾಠವಾಗಬೇಕು ಎಂಬ ಕಾರಣಕ್ಕೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ತಪ್ಪು ಪ್ರಚಾರ ಮಾಡುವುದು,‌ ಅನುಮತಿ ಇಲ್ಲದೆ ಯಾರದೋ ಫೋಟೊಗಳನ್ನು ಬಳಸುವುದು ಅಕ್ಷಮ್ಯ ಅಪರಾಧ ಎಂದರು. ಕುಂಭಮೇಳದಲ್ಲಿನ ಪುಣ್ಯಸ್ನಾನದ ಬಗ್ಗೆ ಪ್ರಶ್ನಿಸಿದಾಗ ‘ಸ್ನಾನ ಮಾಡುವುದರಲ್ಲಿ ತಪ್ಪೇನಿದೆ. ಅದು ಅವರ ನಂಬಿಕೆ. ನನಗೆ ದೇವರ ಮೇಲೆ ನಂಬಿಕೆಯಿಲ್ಲ. ಮನುಷ್ಯರ ಮೇಲೆ ನಂಬಿಕೆ. ದೇವರಿಲ್ಲದೆ ಬದುಕಬಹುದು ಆದರೆ, ಮನುಷ್ಯರಿಲ್ಲದೆ ಬದುಕಲು ಸಾಧ್ಯವಿಲ್ಲ. ಹಾಗೆಂದು ಅವರ ನಂಬಿಕೆಯನ್ನು ಪ್ರಶ್ನಿಸುವುದಿಲ್ಲ. ಆದರೆ ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ತಪ್ಪು ಎಂದು ಪ್ರತಿಕ್ರಿಯಿಸಿದರು.

ಕುಂಭಮೇಳದ ಬಗ್ಗೆ ಕಾಂಗ್ರೆಸ್ ಟೀಕೆ ಮಾಡುತ್ತಿರುವುದರ ಬಗ್ಗೆ ಪ್ರಶ್ನಿಸಿದಾಗ, ಅವರವರ ಭಾವಕ್ಕೆ ಅವರ ಬಕುತಿಗೆ ಹೇಳುತ್ತಾ ಹೋಗಲಿ, ಅಭ್ಯಂತರವೇನಿಲ್ಲ. ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಯಾವ ನಂಬಿಕೆಯ ಬಗ್ಗೆ ಟೀಕೆ ಮಾಡುವುದಿಲ್ಲ. ನಾನು ಮೂಢನಂಬಿಕೆಯನ್ನಷ್ಟೇ ಪ್ರಶ್ನಿಸುತ್ತೇನೆ. ಈ ಹಿಂದೆ ಕ್ರಿಶ್ಚಿಯನ್ ಗಿಂತ ದೊಡ್ಡ ಮಾಫಿಯಾ ಇನ್ನೊಂದಿಲ್ಲ. ಮುಸ್ಲಿಮರಲ್ಲೂ ದೊಡ್ಡ ಭಯೋತ್ಪಾದಕರು ಇದ್ದಾರೆ ಎಂದು ಹೇಳಿದ್ದೇನೆ. ಆದರೆ ಅದು ಹೈಲೈಟ್ ಆಗಿಲ್ಲ. ನಾನು ಯಾವತ್ತೂ ಧರ್ಮ ಧರ್ಮಗಳನ್ನು ಎತ್ತಿ ಕಟ್ಟುವ ಕೆಲಸ ಮಾಡಿಲ್ಲ ಎಂದು ಹೇಳಿದರು.

More articles

Latest article