ಸಿಎಂ ಯೋಗಿ ಕುಂಭಮೇಳ ಸಾವಿನ ಸಂಖ್ಯೆ ಮುಚ್ಚಿಡುತ್ತಿದ್ದಾರೆ; ಅಖಿಲೇಶ್‌ ಆರೋಪ

Most read

ಲಖನೌ: ಮಹಾ ಕುಂಭಮೇಳದಲ್ಲಿ ಕಾಲ್ತುಳಿತದಿಂದ ಮೃತಪಟ್ಟವರ ಸಂಖ್ಯೆಯನ್ನು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಮುಚ್ಚಿಡುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಗಂಭೀರ ಆರೋಪ ಮಾಡಿದ್ದಾರೆ. ಮಹಾಕುಂಭದಲ್ಲಿ ಗಾಯಗೊಂಡ ಭಕ್ತರಿಗೆ ವೈದ್ಯಕೀಯ ಸೇವೆ, ಆಹಾರ ಮತ್ತು ಬಟ್ಟೆಗಳನ್ನು ಒದಗಿಸುವಂತೆ ಅವರು ಉತ್ತರ ಪ್ರದೇಶ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬುಧವಾರ ಮುಂಜಾನೆ ಮಹಾಕುಂಭದ ಸಂಗಮ ಪ್ರದೇಶದಲ್ಲಿ ಲಕ್ಷಾಂತರ ಯಾತ್ರಾರ್ಥಿಗಳು ಪವಿತ್ರ ಸ್ನಾನ ಮಾಡಲು ಆಗಮಿಸಿದ್ದ ಕಾರಣ, ನೂಕುನುಗ್ಗಲಿನಿಂದ ಉಂಟಾದ ಕಾಲ್ತುಳಿತದಲ್ಲಿ ಕನಿಷ್ಠ 30 ಜನರು ಸಾವಿಗೀಡಾಗಿದ್ದರು. 60 ಜನರು ಗಾಯಗೊಂಡಿದ್ದರು. ಈ ಸಂಬಂಧ ಎಕ್ಸ್‌ ಮೂಲಕ ರಾಜ್ಯ ಸರ್ಕಾರಕ್ಕೆ ಸಲಹೆಗಳನ್ನು ನೀಡಿರುವ ಅಖಿಲೇಶ್ ಯಾದವ್‌, ರಾಜ್ಯದಾದ್ಯಂತ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ದೂರದ ಪ್ರದೇಶಗಳಲ್ಲಿ ಸಿಲುಕಿರುವ ಜನರಿಗೆ ಚಿಕಿತ್ಸೆ ನೀಡಲು ಕಳುಹಿಸಬೇಕು. ಸ್ವಯಂಸೇವಕರನ್ನು ಬಳಸಿಕೊಂಡು ದ್ವಿಚಕ್ರ ವಾಹನಗಳ ಮೂಲಕ ಅವರನ್ನು ಕರೆದೊಯ್ಯಲು ವ್ಯವಸ್ಥೆ ಮಾಡಬೇಕು. ಹಗಲು– ರಾತ್ರಿ ಊಟ ಮತ್ತು ಕುಡಿಯುವ ನೀರಿನ ಸೌಲಭ್ಯಕ್ಕಾಗಿ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಮಹಾ ಕುಂಭಮೇಳದ ಸುತ್ತ ಮತ್ತು ರಾಜ್ಯಾದ್ಯಂತ ಕಿಮೀಗಟ್ಟಲೆ ದೂರದಲ್ಲಿ ಸಿಲುಕಿರುವ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಮಾಡಬೇಕು. ಔಷಧಿ ಅಂಗಡಿಗಳು ದಿನದ ಇಪ್ಪತ್ತನಾಲ್ಕು ಗಂಟೆ ತೆರೆಯಲು ಅವಕಾಶ ನೀಡಬೇಕು. ಯಾತ್ರಾರ್ಥಿಗಳಿಗೆ ಬಟ್ಟೆ, ಹೊದಿಕೆ ನೀಡಬೇಕು ಎಂದೂ ಒತ್ತಾಯಿಸಿದ್ದಾರೆ. ಯೋಗಿ ಸರ್ಕಾರವು ಪ್ರಚಾರ ಮತ್ತು ಅಪಘಾತದ ಸುದ್ದಿಯನ್ನು ಹತ್ತಿಕ್ಕಲು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿರುವಾಗ, ಸಂತ್ರಸ್ತರಿಗಾಗಿ ಕೆಲವು ಕೋಟಿ ಖರ್ಚು ಮಾಡಲು ಹಿಂದೇಟು ಹಾಕುತ್ತಿರುವುದು ಏಕೆ ಎಂದೂ ಅವರು  ಪ್ರಶ್ನಿಸಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿ ಬುಧವಾರ ಮಹಾಕುಂಭಮೇಳದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 30ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಘಟನಾ ಸ್ಥಳದಿಂದ 3 ಕಿ.ಮೀ ದೂರದಲ್ಲಿ ಸಂಭವಿಸಿದ ಮತ್ತೊಂದು ಕಾಲ್ತುಳಿತದಲ್ಲಿ ಏಳು ಜನರು ಸಾವಿಗೀಡಾಗಿದ್ದಾರೆ. ಸಂಗಮದಿಂದ 3 ಕಿ.ಮೀ ದೂರದಲ್ಲಿರುವ ಜೂಸಿ ಘಾಟ್‌ನಲ್ಲಿ ಈ ಕಾಲ್ತುಳಿತ ಸಂಭವಿಸಿದೆ ಎಂದು ಕಲ್ಪವಾಸಿ ಪೊಲೀಸ್ ಠಾಣೆಯ ವೃತ್ತಾಧಿಕಾರಿ ರುದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ. ಜನಸಂದಣಿಯ ಅತಿಯಾದ ಒತ್ತಡದಿಂದಾಗಿ ಜೂಸಿಯಲ್ಲಿ ಏಳು ಜನರು ಸಾವಿಗೀಡಾಗಿದ್ದಾರೆ. ಬುಧವಾರ ಸಂಜೆ 7 ಗಂಟೆಗೆ ಮಹಾಕುಂಭನಗರದ ಜಿಲ್ಲಾಧಿಕಾರಿ ವಿಜಯ್ ಕಿರಣ್ ಆನಂದ್ ಮತ್ತು ಮೇಳದ ಡಿಐಜಿ ವೈಭವ್ ಕೃಷ್ಣ ಅವರು ಮೊದಲ ಕಾಲ್ತುಳಿತದ ಕುರಿತು ಮಾಹಿತಿ ನೀಡಿದ್ದರು. ಈ ವೇಳೆ ಬುಧವಾರ ನಸುಕಿನ 1 ಗಂಟೆಯಿಂದ 2 ಗಂಟೆಯ ನಡುವೆ ಸಂಗಮದ ಬಳಿ ನೂಕುನುಗ್ಗಲು ಉಂಟಾಗಿ 30 ಮಂದಿ ಸಾವಿಗೀಡಾಗಿರುವುದಾಗಿ ಹೇಳಿದ್ದರು.

More articles

Latest article