ಮಕ್ಕಳು ರಾತ್ರಿ 11 ಗಂಟೆಯ ನಂತರ ಸಿನಿಮಾ ನೋಡಲು ಹೋಗುವಂತಿಲ್ಲ: ತೆಲಂಗಾಣ ಹೈಕೋರ್ಟ್‌

Most read

ಹೈದರಾಬಾದ್: ರಾತ್ರಿ 11 ಗಂಟೆಯ ನಂತರ 16 ವರ್ಷದೊಳಗಿನ ಮಕ್ಕಳಿಗೆ ಚಿತ್ರಮಂದಿರ ಮತ್ತು ಮಲ್ಟಿಫ್ಲೆಕ್ಸ್‌ಗಳಲ್ಲಿ ಚಲನಚಿತ್ರ ವೀಕ್ಷಿಸಲು ಅನುಮತಿ ನೀಡಬಾರದು ಎಂದು ರಾಜ್ಯ ಸರ್ಕಾರ ಮತ್ತು ಇತರರಿಗೆ ನಿರ್ದೇಶನ ನೀಡಿರುವ ತೆಲಂಗಾಣ ಹೈಕೋರ್ಟ್‌, ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿದೆ. ಈ ಬಗ್ಗೆ ಸಂಬಂಧಪಟ್ಟ ಎಲ್ಲರೊಂದಿಗೆ ಸಮಾಲೋಚನೆ ನಡೆಸಿ ಸೂಚನೆ ನೀಡಬೇಕು ಎಂದು ಸರ್ಕಾರಕ್ಕೆ ಕೋರ್ಟ್‌ ನಿರ್ದೇಶಿಸಿದೆ.

ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವವರೆಗೂ 16 ವರ್ಷದೊಳಗಿನ ಮಕ್ಕಳಿಗೆ ರಾತ್ರಿ 11 ಗಂಟೆಯ ನಂತರ ಚಿತ್ರಮಂದಿರಗಳಲ್ಲಿ ಚಲನಚಿತ್ರ ವೀಕ್ಷಿಸಲು ಅನುಮತಿಸುವುದಿಲ್ಲ ಎಂದು ಹೇಳಿದೆ. ನಟ ರಾಮ್‌ಚರಣ್‌ ನಟನೆಯ ‘ಗೇಮ್‌ ಚೇಂಜರ್’ ಸೇರಿದಂತೆ ಇತರ ಚಿತ್ರಗಳ ಟಿಕೆಟ್‌ ದರ ಹೆಚ್ಚಳಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ಸೋಮವಾರದಿಂದ ನಡೆಸುತ್ತಿದೆ. ಈ ವೇಳೆ ಅರ್ಜಿದಾರ ವಿಜಯ್‌ ಗೋಪಾಲ್ ಪರ ವಕೀಲರು, ಅಪ್ರಾಪ್ತ ವಯಸ್ಕರಿಗೆ ತಡರಾತ್ರಿ ಚಲನಚಿತ್ರ ವೀಕ್ಷಿಸಲು ಅನುಮತಿಸಬಾರದು. ಇದು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ನ್ಯಾಯಾಲಯದ ಗಮನ ಸೆಳೆದಿದ್ದರು.

ತಡರಾತ್ರಿ ಚಿತ್ರಮಂದಿರಗಳಿಗೆ ಮಕ್ಕಳ ಪ್ರವೇಶವನ್ನು ನಿಯಂತ್ರಿಸಲು ಸರ್ಕಾರ ತ್ವರಿತ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ ಅವರು, ಪುಷ್ಪ–2 ಚಿತ್ರ ಪ್ರದರ್ಶನ ವೇಳೆ ಕಾಲ್ತುಳಿತದಿಂದ ಮಹಿಳೆಯೊಬ್ಬಳು ಮೃತಪಟ್ಟು, ಆಕೆಯ ಮಗ ಗಾಯಗೊಂಡಿದ್ದ ಘಟನೆಯನ್ನು ಉಲ್ಲೇಖಿಸಿದ್ದಾರೆ. ಮಲ್ಟಿಫ್ಲೆಕ್ಸ್‌ಗಳಲ್ಲಿ ಕೊನೆಯ ಪ್ರದರ್ಶನವು ಬೆಳಿಗ್ಗೆ 1.30ರ ವರೆಗೆ ನಡೆಯುತ್ತದೆ. ತಡರಾತ್ರಿ ಶೋಗಳಿಗೆ ಮಕ್ಕಳು ಪ್ರವೇಶಿಸದಂತೆ ನಿಯಂತ್ರಿಸುವ ಯಾವುದೇ ನಿಯಮಗಳಿಲ್ಲ.

More articles

Latest article