ಯಾದಗಿರಿ: ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರನ್ನು ಅವಮಾನಿಸಿರುವ ಕೇಂದ್ರದ ಗೃಹ ಸಚಿವ ಅಮಿತ್ ಶಾ ಕೂಡಲೇ ರಾಜೀನಾಮೆ ನೀಡಿ ದೇಶದ ಜನರ ಕ್ಷಮೆಯಾಚಿಸಬೇಕು. ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಆಶ್ರಯದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಸಂಚಾಲಕ ಶರಣು ಎಸ್ ನಾಟೇಕರ್ ಮಾತನಾಡಿ ದೆಹಲಿಯ ಸಂಸತ್ ಭವನದಲ್ಲಿ ಕಳೆದ ಡಿ.17 ರಂದು ಮಾತನಾಡಿರುವ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಎಂದು ಹೇಳುವುದು ಒಂದು ಪ್ಯಾಷನ್ ಆಗಿದೆ. ಇಷ್ಟು ಬಾರಿ ದೇವರ ಹೇಳಿದ್ದರೆ ಏಳೇಳು ಜನ್ಮಕೂ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎಂದು ಹೇಳುವ ಮೂಲಕ ಅಂಬೇಡ್ಕರ್ ಅವರನ್ನು ಅಪಮಾನ ಮಾಡಿದ್ದಾರೆ ಎಂದರು.
ತಾವು ಆಡಿರುವ ಮಾತುಗಳನ್ನು ಸಮರ್ಥನೆಯನ್ನು ಮಾಡಿಕೊಂಡಿದ್ದಾರೆ. ಅಮಿತ್ ಶಾ ಅವರ ದೇಶದ್ರೋಹಿ ಮಾತುಗಳನ್ನು ಖಂಡಿಸಬೇಕಿದ್ದ ಪ್ರಧಾನಿ ಮೋದಿ ಮತ್ತು ಅವರ ಸಹೋದ್ಯೋಗಿಗಳು ಗೃಹ ಸಚಿವರ ಬೆನ್ನಿಗೆ ನಿಂತಿದ್ದಾರೆ. ಇಂತಹವರಿಂದ ನಾವು ಯಾವುದೇ ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿರುವ ಪ್ರತಿಯೊಬ್ಬರೂ ಸಹ ಇದನ್ನು ಖಂಡೀಸಬೇಕು ಎಂದು ಆಗ್ರಹಪಡಿಸಿದರು.
ಪ್ರಜಾಪ್ರಭುತ್ವದ ಪಿತಾಮಹ ಡಾ.ಬಿ.ಆರ್ ಅಂಬೇಡ್ಕರ್ ಅವರು ಮತ್ತು ಸಂವಿಧಾನದ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡುವವರ ವಿರುದ್ಧ ರಾಷ್ಟ್ರ ದ್ರೋಹ ಪ್ರಕರಣವನ್ನು ದಾಖಲಿಸಬೇಕು ಜೊತೆಗೆ ಅವರನ್ನು ಗಡಿಪಾರು ಮಾಡಬೇಕು. ಅಮಿತ್ ಶಾ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡಬೇಕು. ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ ಸಹ ಕೇಂದ್ರ ರಾಜ್ಯ ಸರ್ಕಾರಗಳು ಸರಿಯಾದ ದಿಟ್ಟ ಕ್ರಮಗೊಳ್ಳುತ್ತಿಲ್ಲ ಆದ್ದರಿಂದ ದಲಿತರ ಮೇಲೆ ದೌರ್ಜನ್ಯ ನಡೆದರೆ ಆಯಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ನೇರ ಹೊಣೆಗಾರರನ್ನಾಗಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟಕಾರರು ಒತ್ತಾಯಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ಭೀಮರಾಯ ಸಿಂಧಿಗೇರಿ, ಬಾಬು ತಲಾರಿ, ಶಿವಶರಣಪ್ಪ ವಾಡಿ, ಮಂಜುಳಾ ಸುರಪುರ, ಅಂಜು ಯಾದಗಿರಿ, ಭೀಮರಾಯ ಕಾಗಿ, ಮಹಾದೇವಪ್ಪ,ಶರಣು ಮಮ್ಮದರ್, ಸಾಬಣ್ಣ ಬೇಗರ್, ಗಿರೀಶ್ ಎಂ ಚಟ್ಟೇರಕರ್ ಗಂಗಮ್ಮ ಇನ್ನಿತರರು ಭಾಗವಹಿಸಿದ್ದರು.