ಬೆಂಗಳೂರು: ಸತತ ಅವಮಾನ, ಸುದೀರ್ಘ ಮೂರು ವರ್ಷಗಳ ಬೀದಿ ಹೋರಾಟ ಮತ್ತು ಕಾನೂನು ಹೋರಾಟದ ನಂತರ ತಮ್ಮ ನ್ಯಾಯಯುತ ಸರ್ಕಾರಿ ನೌಕರಿಗೆ ಇತ್ತೀಚೆಗೆ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವ ಸಹಾಯಕ ಪ್ರಾಧ್ಯಾಪಕರ ಹಣದಲ್ಲಿ ಒಂದು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಗಾರವನ್ನು ಕಾಲೇಜು ಶಿಕ್ಷಣ ಇಲಾಖೆ ಆಯೋಜಿಸಿದೆ!
ಇದೇ ತಿಂಗಳ 27ನೇ ತಾರೀಖಿನ ಸೋಮವಾರದಂದು ನಗರದ ಸೆಂಟ್ರಲ್ ಕಾಲೇಜು ಕ್ಯಾಂಪಸ್ ನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನೂತನವಾಗಿ ನೇಮಕವಾಗಿರುವ ಸಹಾಯಕ ಪ್ರಾಧ್ಯಾಪಕರಿಗೆ ‘ಹೊಸ ಹಾದಿ- ಒಂದು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಗಾರ ಆಯೋಜನೆಯಾಗಿದೆ. ಈ ಸಂಬಂಧ ಕಾಲೇಜು ಶಿಕ್ಷಣ ಇಲಾಖೆಯು ದಿನಾಂಕ 22.01.2025 ರಂದು ಸುತ್ತೋಲೆಯನ್ನು ಹೊರಡಿಸಿ, ಮಾನ್ಯ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರು ಭಾಗವಹಿಸಲಿದ್ದಾರೆಂದೂ, ಇತ್ತೀಚೆಗೆ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವ ಎಲ್ಲಾ ನೂತನ ಸಹಾಯಕ ಪ್ರಾಧ್ಯಾಪಕರು ಸದರಿ ಕಾರ್ಯಾಗಾರಕ್ಕೆ ಕಡ್ಡಾಯವಾಗಿ ಹಾಜರಾಗಬೇಕೆಂದೂ ಸೂಚಿಸಿದೆ.
ಆದರೆ ಕಾರ್ಯಕ್ರಮಕ್ಕೆ ಸಹಾಯ ಪ್ರಾಧ್ಯಾಪಕರದ್ದೇ ದೇಣಿಗೆ!
ಇತ್ತೀಚೆಗೆ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವ ಸಹಾಯಕ ಪ್ರಾಧ್ಯಾಪಕರಲ್ಲಿ ಉನ್ನತ ಶಿಕ್ಷಣ ಸಚಿವರ ನಿಕಟ ವರ್ತಿಗಳಾದ ಕೆಲವರು ವಾಟ್ಸಾಪ್ ಗುಂಪಿನ ಮೂಲಕ ದೇಣಿಗೆ ಸಂಗ್ರಹಿಸಿದ್ದಾರೆ. ವಿಷಯವಾರು ಮತ್ತು ವೈಯಕ್ತಿಕವಾಗಿ ಹಣ ಸಂಗ್ರಹಿಸಿದ್ದಾರೆ. ಹೀಗೆ ಸಂಗ್ರಹಿಸಿದ ಹಣದಲ್ಲಿ ಸಚಿವರನ್ನು ಮೆಚ್ಚಿಸುವ ಸಲುವಾಗಿ ವೃತ್ತಿ ಮಾರ್ಗದರ್ಶನ ಹೆಸರಿನಲ್ಲಿ ಕಾರ್ಯಾಗಾರ ಆಯೋಜಿಸುವಂತೆ ಮಾಡಿದ್ದಾರೆ. ಇದನ್ನು ಅವರು ತಮ್ಮ ವಾಟ್ಸಪ್ ಗುಂಪುಗಳಲ್ಲಿ “ಮಾನ್ಯ ಸಚಿವರ ಸೂಚನೆಯನುಸಾರ” ಎಂಬ ಒಕ್ಕಣಿಕೆಯಲ್ಲಿ ಹಾಕುತ್ತಿರುವ ಮೆಸೇಜ್ ಗಳೇ ಪುಷ್ಟೀಕರಿಸುತ್ತವೆ. ನಿಜವಾಗಿಯೂ ಇದು ಇಲಾಖೆಯ ಕಡೆಯಿಂದಲೇ ವೃತ್ತಿ ಮಾರ್ಗದರ್ಶನವಾಗಿದ್ದರೆ ಒಂದು ಕಾರ್ಯಾಗಾರವನ್ನು ನಡೆಸಲಾಗದಂತಹ ಅಧೋಗತಿ ಕಾಲೇಜು ಶಿಕ್ಷಣ ಇಲಾಖೆಗೆ ಬಂದಿದೆಯೇ? ಎಂದು ಕೇಳುವಂತಾಗಿದೆ. ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಉನ್ನತ ಶಿಕ್ಷಣ ಇಲಾಖೆಯೇ ಹೊರಡಿಸಿದೆ ಎಂದರೆ ಇದು ಸರ್ಕಾರದ ಕಾರ್ಯಕ್ರಮ. ಅದರಲ್ಲಿ ಇರುವ ಅತಿಥಿ ಗಣ್ಯರೆಲ್ಲರನ್ನೂ ಖುದ್ದಾಗಿ ಆಹ್ವಾನಿಸಿರುವುದು ಇಲಾಖೆಯೇ ಆಗಿರುವಾಗ “ಮಾನ್ಯ ಸಚಿವರ ಸೂಚನೆಯನುಸಾರ” ಇನ್ನೂ ಒಂದು ತಿಂಗಳ ಸಂಬಳವನ್ನೂ ಪಡೆಯದ ಸಹಾಯಕ ಪ್ರಾಧ್ಯಾಪಕರಲ್ಲಿ ಹಣ ಎತ್ತುವ ದರ್ದು ಏನಿತ್ತು? ಇದಕ್ಕೆ ಮಾನ್ಯ ಸಚಿವರು ಉತ್ತರ ನೀಡುವರೆ?
ಈ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ರಚಿಸಿರುವ ವಾಟ್ಸಾಪ್ ಗ್ರೂಪಿನಲ್ಲಿ, “ಎಲ್ಲ ಖರ್ಚು ವೆಚ್ಚವನ್ನು ನಾವೇ ಮಾಡಬೇಕಾಗಿರುವುದರಿಂದ, ಸಹೋದ್ಯೋಗಿ ಬಂಧುಗಳೇ ನಿಮ್ಮ ನಿಮ್ಮ ಮನಸಿಗನುಸಾರ ದಯಮಾಡಿ ಆರ್ಥಿಕ ಸಹಾಯ ಮಾಡಿ, please ಮುಂದೆ ನೀಡುವ Account, Contribution ಮಾಡುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಕೈ ಜೋಡಿಸಿ” ಎಂದು ಸತತವಾಗಿ ವಾಟ್ಸಪ್ ಗುಂಪುಗಳಲ್ಲಿ ಸಂದೇಶಗಳನ್ನು ಹರಿಬಿಡುವ ಮೂಲಕ ಹಣವನ್ನು ಸಂಗ್ರಹಿಸಲಾಗಿದೆ. ಹೀಗೆ contribution ಹೆಸರಿನಲ್ಲಿ ಎತ್ತಿದ ಹಣದಿಂದ ಕಾಲೇಜು ಶಿಕ್ಷಣ ಇಲಾಖೆಯು ‘ಅಧಿಕೃತ’ವಾಗಿ ಕಾರ್ಯಾಗಾರ ನಡೆಸುತ್ತಿದ್ದಾರೆ. ಇದಕ್ಕೆ ಮಾನ್ಯ ಮುಖ್ಯಮಂತ್ರಿ ಉಪಮುಖ್ಯಮಂತ್ರಿಗಳನ್ನೂ ಆಹ್ವಾನಿಸಾಗಿದೆ. ನಿಜಕ್ಕೂ ಉನ್ನತ ಶಿಕ್ಷಣ ಇಲಾಖೆಯ ಈ ನಡೆ ಸರ್ಕಾರಕ್ಕಾಗಲೀ, ಇಲಾಖೆಗಾಗಲೀ ಶೋಭೆ ತರುತ್ತದೆಯೇ?
ಇನ್ನೂ ವಿಪರ್ಯಾಸವೆಂದರೆ, ಉನ್ನತ ಶಿಕ್ಷಣ ಇಲಾಖೆ ಹೊರಡಿಸಿರುವ ಆಹ್ವಾನ ಪತ್ರಿಕೆಯಲ್ಲಿ “ವೃತ್ತಿ ಮಾರ್ಗದರ್ಶನ ಕಾರ್ಯಾಗಾರ” ಎಂಬ ಒಕ್ಕಣಿಕೆ ಇದ್ದರೂ, ಈ ವೃತ್ತಿ ಮಾರ್ಗದರ್ಶನವನ್ನು ಯಾರು ನಡೆಸಿಕೊಡುತ್ತಾರೆ ಎಂಬ ಕನಿಷ್ಟ ಮಾಹಿತಿಯೂ ಇಲ್ಲ. ರಾಜಕಾರಣಿಗಳ ಮತ್ತು ಇಲಾಖೆಯ ಉನ್ನತ ಅಧಿಕಾರಗಳ ಹೆಸರುಗಳಷ್ಟೇ ಅಲ್ಲಿ ರಾರಾಜಿಸುತ್ತರುವುದು. ಒಂದು ಶಿಕ್ಷಣ ಇಲಾಖೆಯೇ ಇಷ್ಟು ಆದ್ವಾನವಾಗಿ ಒಂದು ಕಾರ್ಯಕ್ರಮ ನಡೆಸಿದರೆ ಅದಕ್ಕಿಂತ ವಿಪರ್ಯಾಸವಿರಲು ಸಾಧ್ಯವೆ? ‘ವೃತ್ತಿ ಮಾರ್ಗದರ್ಶನ ಕಾರ್ಯಗಾರ’ದ ಹೆಸರಿನಲ್ಲಿ ಸುತ್ತೋಲೆ ಹೊರಡಿಸಿದ ಇಲಾಖೆ, ಸಚಿವರ ಆಪ್ತರಾದ ಸಹಾಯಕ ಪ್ರಾಧ್ಯಾಪಕರನ್ನು ಕರೆಯಿಸಿಕೊಂಡು ಮಾರ್ಗದರ್ಶನ ಮಾಡಿದ್ದು ಮಾತ್ರ “ಅಭಿನಂದನಾ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಯವರಿಗೆ ಹಾಗೂ ಇತರ ಮಾನ್ಯರಿಗೆ ಸನ್ಮಾನಿಸಲು ತೆಗೆದುಕೊಳ್ಳಬೇಕಾದ mementos ಹಾಗೂ ಇತರ Honouring things ಆಯ್ಕೆಯಲ್ಲಿ ವಹಿಸಬೇಕಾದ ಜಾಗ್ರತೆಯ ಬಗೆಗೆ”(ವಾಟ್ಸಪ್ ಗುಂಪಿನ ಮಾಹಿತಿ). ಇಲಾಖೆಯ ಕಾರ್ಯಾಗಾರವಾದಲ್ಲಿ ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಇಲಾಖೆಯೇ ಮಾಡಿಕೊಳ್ಳಬೇಕು. ಆದರೆ ಇಲ್ಲಿ ಕಾರ್ಯಾಗಾರದಲ್ಲಿ ಭಾಗವಹಿಸುವ ಸಹಾಯಕ ಪ್ರಾಧ್ಯಾಪಕರಿಗೆ ಅಭಿನಂದನಾ ಪತ್ರವನ್ನೂ, ಸನ್ಮಾನ ಸ್ಮರಣಿಕೆಗಳನ್ನೂ ಆ ‘ಕೆಲವು ಸಹಾಯಕ ಪ್ರಾಧ್ಯಾಪಕರೇ’ ಸಿದ್ಧಮಾಡಿಸುತ್ತಿದ್ದಾರೆ. ಅದಕ್ಕೆ ತಗಲುವ ವೆಚ್ಚಗಳನ್ನೂ ಅವರೇ ಬರಿಸುತ್ತಿದ್ದಾರೆ! ಒಂದು ಇಲಾಖೆಗೆ ಎಂತಹ ಅವಮಾನಕಾರಿಯಲ್ಲವೆ ಇದು?
2021ರಲ್ಲಿ ಆರಂಭವಾದ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯನ್ನು ಪೂರ್ಣಗೊಳಿಸಿ ಎಂದು ಆಯ್ಕೆಯಾದ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮೂರು ಬಾರಿ ಹೋರಾಟ ಮಾಡಿದಾಗ ಇದೇ ಉನ್ನತ ಶಿಕ್ಷಣ ಸಚಿವರು, ‘ಅವರು (ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳು) ತಂತಮ್ಮ ಖುಷಿಗೆ ಹೋರಾಟ ಮಾಡುತ್ತಿದ್ದಾರೆ. ಏನ್ ಮಾಡೋಕೆ ಆಗುತ್ತೆ? ಮಾಡಿಕೊಳ್ಳಲಿ’ ಎಂದು ಅಸಡ್ಡೆ ಮಾಡಿದ್ದರು. ಅದೇ ಹೋರಾಟದ ಪ್ರತಿಫಲವಾಗಿ ತಮ್ಮ ಕೆಲಸಗಳನ್ನು ಪಡೆದುಕೊಂಡ ಸಹಾಯಕ ಪ್ರಾಧ್ಯಾಪಕರಿಂದಲೇ ಅಭಿನಂದನಾ ಕಾರ್ಯಕ್ರಮವನ್ನು ಅವರ ಹಣದಿಂದಲೇ ತಾವೇ ಆಯೋಜಿಸಿಕೊಂಡು ಸ್ವೀಕರಿಸುತ್ತಿದ್ದಾರೆ! ಇಲ್ಲಿ ಸೃಷ್ಟಿಯಾಗಿರುವ ಮಧ್ಯವರ್ತಿಗಳು “ನಮ್ಮ Batch ವತಿಯಿಂದ ಮಾಡುತ್ತಿರುವ “ಅಭಿನಂದನ ಸಮಾರಂಭ”ಕ್ಕೆ ತಪ್ಪದೇ ಎಲ್ಲರೂ ಬಂದು ಯಶಸ್ವಿಗೊಳಿಸಿ, ನಮ್ಮ Batch ನ ಅಸ್ಮಿತೆಯನ್ನು ಉಳಿಸಿ” (ವಾಟ್ಸಪ್ ಗುಂಪಿನ ಮಾಹಿತಿ) ಎಂದು ಎದೆ ತಟ್ಟಿಕೊಳ್ಳುತ್ತಾ ಒಂದು ಕೆಟ್ಟ ಪರಂಪರೆಗೆ ಕಾರಣೀಕರ್ತರಾಗುತ್ತಿದ್ದಾರೆ. ಇಂತಹ ನೂತನ ಸಹಾಯಕ ಪ್ರಾಧ್ಯಾಪಕರು ಮುಂದೆ ತಾವು ಪಾಠ ಮಾಡುವ ಕಾಲೇಜುಗಳಲ್ಲಿ ಇನ್ನೆಂತಹ ಭಟ್ಟಂಗಿತನದ ಪರಂಪರೆ ಹುಟ್ಟುಹಾಕಬಹುದು ಯೋಚಿಸಿ. ಎಲ್ಲಾ ವಿದ್ಯಾರ್ಥಿಗಳೂ ತಮ್ಮ ಭಟ್ಟಂಗಿತನ ಮಾಡಿಯೇ (ಬಕೆಟ್ ಹಿಡಿದು) ಅಂಕಗಳಿಸಬೇಕು ಎಂಬ ಕೆಟ್ಟ ಶಿಕ್ಷಣ ವಿರೋಧಿ ಸಂಸ್ಕೃತಿ ಶಿಕ್ಷಣ ಕ್ಷೇತ್ರದಲ್ಲಿ ಇರುವುದೇ ಇಂತವರಿಂದ. ಅಲ್ಲವೆ?
ಇನ್ನು 2024ರ ನವೆಂಬರ್ ತಿಂಗಳಿನಲ್ಲಿ ಸ್ಥಳನಿಯುಕ್ತಿಗೊಂಡ ಸಹಾಯಕ ಪ್ರಾಧ್ಯಾಪಕರಿಗೆ ಇಲಾಖೆಯಿಂದ ಪ್ರಥಮ ವೇತನ ಸೆಳೆಯುವ ಆದೇಶವೇ ಆಗಿಲ್ಲ. ಈ ಆದೇಶವನ್ನೂ ಸಹ ಈ “ಅಭಿನಂದನ ಸಮಾರಂಭ”ದಲ್ಲೇ ಹೊರಡಿಸುವ ಯೋಜನೆಯನ್ನು ಇಲಾಖೆ ಮಾಡಿಕೊಂಡಿದೆಯಂತೆ? ಉನ್ನತ ಶಿಕ್ಷಣ ಸಚಿವರು ಪ್ರತಿಯೊಂದು ಆದೇಶಕ್ಕೂ ಅಭಿನಂದನೆ ಸ್ವೀಕರಿಸಿಯೇ ಆದೇಶ ಹೊರಡಿಸುವಂತೆ ಮಾಡುತ್ತಾರೆಯೋ ಕಾದುನೋಡಬೇಕು! ‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ಮಾತಿದೆ. ಅದರ ಭಾಗವಾದ ಉತನ್ನ ಶಿಕ್ಷಣ ಸಚಿವರು ತಮ್ಮ ಕರ್ತವ್ಯವನ್ನು ಮಾಡಿ, ಆದೇಶ ಹೊರಡಿಸಿದ್ದಾರೆ. ಅದನ್ನೇ ದೊಡ್ಡ ಸಾಧನೆ ಎಂದು ಭಾವಿಸಿಕೊಂಡು ಸನ್ಮಾನ ಸ್ವೀಕರಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಹಲವರು ಮಾತಾಡಿಕೊಳ್ಳುತಿದ್ದಾರೆ.
ಬೇರೆಯವರ ಶ್ರಮ ಮತ್ತು ಹಣದಲ್ಲಿ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವುದರ ಬದಲು ಉನ್ನತ ಶಿಕ್ಷಣ ಇಲಾಖೆಯಲ್ಲಿರುವ 2021ರ ವಿಶೇಷ ವರ್ಗಾವಣೆ ಸಮಸ್ಯೆ, ಅತಿಥಿ ಉಪನ್ಯಾಸಕರ ನೇಮಕ, ವಿಶ್ವವಿದ್ಯಾಲಯಗಳಲ್ಲಿನ ಕುಲಪತಿಗಳ, ಬೋಧಕರ ನೇಮಕಾತಿ- ಇಂತಹ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವತ್ತ ಮಾನ್ಯ ಸಚಿವ ಎಂ ಸಿ ಸುಧಾಕರ ಅವರು ಗಮನ ಹರಿಸಲಿ. ಅವರ ಇಲಾಖೆಯಲ್ಲಿ ಇನ್ನೂ ಒಂದು ಆದ್ವಾನವೆಂದರೆ ವಿಧಾನ ಸೌಧದ ಇಲಾಖೆಯ ಕಚೇರಿಯಲ್ಲಿ ಹೋದ ಗಣ್ಯರಿಗೆ ಅಧಿಕಾರಾರೂಢ ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ಬದ್ಧ ವೈರಿಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರೋತ್ಥಾನ ಪರಿಷತ್ತು ಪ್ರಕಟಿಸಿರುವ ದುಬಾರಿ ಬೆಲೆಯ ಪುಸ್ತಕಗಳನ್ನು ಇಲಾಖೆಯ ಅಧಿಕಾರಿಗಳು ಉಡುಗೊರೆಯಾಗಿ ನೀಡುತ್ತಿದ್ದಾರೆ! ಇದು ಮಾನ್ಯ ಸಚಿವರ ಸೂಚನೆಯ ಮೇಲೆ ನಡೆಯುತ್ತಿದೆಯೋ ಅಥವಾ ಆರೆಸ್ಸೆಸ್ ಏಜೆಂಟರಿಂದ ನಡೆಯುತ್ತಿದೆಯೋ? ಮಾನ್ಯ ಸಚಿವರೇ ಉತ್ತರ ಹೇಳಬೇಕು. ಈ ಕುರಿತು ಸ್ವತಃ ಉಡುಗೊರೆ ಸ್ವೀಕರಿಸಿದ್ದ ಗಣ್ಯರೊಬ್ಬರು ಕನ್ನಡ ಪ್ಲಾನೆಟ್ ಜೊತೆ ತಮ್ಮ ಬೇಸರ ಹಂಚಿಕೊಂಡು, “ಏನ್ರಿ ಇದು, ಹೈಯರ್ ಎಜುಕೇಶನ್ ಇಲಾಖೆಯಲ್ಲಿ ಆರೆಸ್ಸೆಸ್ ಹುಳಗಳು ಸೇರಿಕೊಂಡು ಆರೆಸ್ಸೆಸ್ ಪುಸ್ತಕಗಳನ್ನು ನಮಗೆ ಉಡುಗೊರೆ ಕೊಡ್ತಿದಾರಲ್ರೀʼ ಎಂದರು.
ಸಚಿವ ಸುಧಾಕರ್ ಅವರೆ, ಮೊದಲು ಇಂತಹ ಅಪಸ್ಯವಗಳಿಂದ ಇಲಾಖೆಯನ್ನು ಸ್ವಚ್ಛಗೊಳಿಸಿ, ನಂತರ ನಿಜವಾದ ಅಭಿಮಾನ ಆದರಗಳಿಂದ ನಿಮ್ಮ ಬೆನ್ನು ತಟ್ಟುವವರು ಸಾವಿರ ಜನ ಬರುತ್ತಾರೆ.