ಇವಿಎಂ ಪರೀಶೀಲನೆ ಕೋರಿ ಸುಪ್ರೀಂ ಕೋರ್ಟ್‌ ನಲ್ಲಿ ಅರ್ಜಿ; ಸಂಜೀವ್ ಖನ್ನಾ ನೇತೃತ್ವದ ಪೀಠ ವಿಚಾರಣೆ

Most read

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳ(ಇವಿಎಂ) ಪರಿಶೀಲನೆಗೆ ನೀತಿ ರೂಪಿಸುವಂತೆ ಕೋರಿ ಹರಿಯಾಣ ರಾಜ್ಯದ ಸಚಿವ ಮತ್ತು 5 ಬಾರಿ ಶಾಸಕರಾಗಿರುವ ಕರಣ್ ಸಿಂಗ್ ದಲಾಲ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ. ಶುಕ್ರವಾರ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಮನಮೋಹನ್ ಪೀಠದ ಎದುರು ಅರ್ಜಿ ವಿಚಾರಣೆಗೆ ಬಂದಾಗ, ಈ ಅರ್ಜಿಯೂ ಸೇರಿ ಇದೇ ರೀತಿಯ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಪೀಠಕ್ಕೆ ಸಲ್ಲಿಸುವಂತೆ ಸೂಚಿಸಲಾಯಿತು.

ದಲಾಲ್ ಅವರು ವಿದ್ಯುನ್ಮಾನ ಮತಯಂತ್ರಗಳ(ಇವಿಎಂ) ಪರಿಶೀಲನೆಗೆ ನೀತಿ ರೂಪಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದಾರೆ. ಜೊತೆಗೆ, ‘ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ ವರ್ಸಸ್ ‘ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ ನೀಡಲಾದ ಹಿಂದಿನ ತೀರ್ಪಿನ ಅನುಸರಣೆಗೂ ಅವರು ಕೋರಿದ್ದಾರೆ.

ದಲಾಲ್ ಮತ್ತು ಸಹ-ಅರ್ಜಿದಾರ ಲಖನ್ ಕುಮಾರ್ ಸಿಂಗ್ಲಾ ಅವರು ತಮ್ಮ ಕ್ಷೇತ್ರಗಳಲ್ಲಿ ಎರಡನೇ ಅತಿ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಇವಿಎಂನ ನಾಲ್ಕು ಘಟಕಗಳ (ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್, ವಿವಿಪ್ಯಾಟ್ ಮತ್ತು ಸಿಂಬಲ್ ಲೋಡಿಂಗ್ ಯೂನಿಟ್.) ಮೂಲ ‘Burnt Memory’ ಅಥವಾ ಮೈಕ್ರೋಕಂಟ್ರೋಲರ್ ಅನ್ನು ಪರೀಕ್ಷಿಸಲು ಪ್ರೋಟೊಕಾಲ್ ಅನ್ನು ಅಳವಡಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದಾರೆ. ಫಲಿತಾಂಶದ ಬಳಿಕ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡ 5ರಷ್ಟು ಇವಿಎಂಗಳನ್ನು ಇವಿಎಂ ತಯಾರಿಸಿದ ಎಂಜಿನಿಯರ್‌ಗಳಿಂದ ಪರಿಶೀಲನೆ ನಡೆಸಬೇಕು ಎಂದು ಹಿಂದಿನ ತೀರ್ಪೊಂದರಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು. ಎರಡನೇ ಮತ್ತು ಮೂರನೇ ಅತಿ ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿಗಳ ಲಿಖಿತ ಮನವಿ ಮೇರೆಗೆ ಪರಿಸೀಲನೆಗೆ ಸೂಚಿಸಿತ್ತು.

ಈ ಸಂಬಂಧ ಚುನಾವಣಾ ಆಯೋಗವು ಯಾವುದೇ ನೀತಿ ರೂಪಿಸುವಲ್ಲಿ ವಿಫಲವಾಗಿದ್ದು, ‘Burnt Memory’ ಪ್ರಕ್ರಿಯೆಯನ್ನು ಅಸ್ಪಷ್ಟತೆಯಲ್ಲಿಟ್ಟಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಸದ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನವು(ಎಸ್‌ಒಪಿ) ಪ್ರಾಥಮಿಕ ಪರೀಕ್ಷೆ ಮತ್ತು ಅಣಕು ಮತದಾನಕ್ಕೆ ಸೀಮಿತವಾಗಿದೆ. ಟ್ಯಾಂಪರಿಂಗ್ ಪತ್ತೆಗೆ Burnt Memory ಪರಿಶೀಲಿಸದೇ ಇರುವುದು ಇವಿಎಂಗಳ ತಯಾರಕರಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಮತ್ತು ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ಎಂಜಿನಿಯರ್‌ಗಳ ಪಾತ್ರವನ್ನು ಅಣಕು ಮತದಾನದ ಸಮಯದಲ್ಲಿ ವಿವಿಪ್ಯಾಟ್ ಚೀಟಿಗಳ ಎಣಿಕೆಗೆ ಸೀಮಿತಗೊಳಿಸಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ಈ ವಿಧಾನವು ಯಂತ್ರಗಳ ಸಮಗ್ರ ಪರೀಕ್ಷೆಯನ್ನು ತಡೆಯುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

More articles

Latest article