ಸಂಬಂಧಗಳ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಾರ್ವಕಾಲಿಕ ಕೃತಿ ಬೆಟ್ಟದ ಜೀವ:ಪಿ.ಶೇಷಾದ್ರಿ

Most read

                ಬೆಂಗಳೂರು: ಡಾ. ಶಿವರಾಮ ಕಾರಂತ ಅವರ “ಬೆಟ್ಟದ ಜೀವ” ಕೃತಿ ಮಾನವೀಯ ಸಂಬಂಧಗಳ ಮೌಲ್ಯಗಳನ್ನು ಅತ್ಯಂತ ಕಲಾತ್ಮಕವಾಗಿ ಹಿಡಿದಿಟ್ಟಿರುವ ಕೃತಿಯಾಗಿರುವುದರಿಂದಲೇ ಅದು ಇಂದಿಗೂ ಪ್ರಸ್ತುತವಾಗಿದೆ ಹಾಗೆಯೇ  ಎಂದಿಗೂ ಪ್ರಸ್ತುತವಾಗಿರುತ್ತದೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಹೇಳಿದ್ದಾರೆ.

                ಅವರು ಇಂದು ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ಕನ್ನಡ ವಿಭಾಗದ ಸಹಯೋಗದೊಂದಿಗೆ ಆಯೋಜಿಸಿದ್ದ, “ಅಂಗಳದಲ್ಲಿ ತಿಂಗಳ ಪುಸ್ತಕ” ಮಾಲಿಕೆಯಡಿ ಮಾತನಾಡುತ್ತಿದ್ದರು. ಪ್ರತೀ ತಿಂಗಳು ಒಂದು ಸಾಹಿತ್ಯ ಕೃತಿಯನ್ನು ಕುರಿತು ಒಬ್ಬ ಗಣ್ಯರು ಮಾತನಾಡುವ ಈ ಯೋಜನೆಯಡಿ ಇಂದು ಪಿ. ಶೇಷಾದ್ರಿ ಅವರು ಡಾ. ಶಿವರಾಮ ಕಾರಂತ ಅವರ ಬಹುಜನಪ್ರಿಯ ಕಾದಂಬರಿ “ಬೆಟ್ಟದ ಜೀವ” ಕುರಿತು ಮಾತನಾಡುತ್ತಿದ್ದರು.

                1935ರಲ್ಲಿ ಪ್ರಕಟವಾದ ಈ ಕಾದಂಬರಿ 90 ವರ್ಷಗಳ ನಂತರವು ಚರ್ಚೆಗೆ ಒಳಪಡುತ್ತಿದೆ ಎಂದರೆ ಅದಕ್ಕೆ ಕಾರಣ ಆ ಕೃತಿಯಲ್ಲಿರುವ ಮೌಲ್ಯಗಳು. ಸಂಬಂಧಗಳ ಸೂಕ್ಷ್ಮತೆಯನ್ನು ಅತ್ಯಂತ ಮನೋಜ್ಞವಾಗಿ ವರ್ಣಿತವಾಗಿರುವ ಈ ಕಾದಂಬರಿ ಅನೇಕ ರೂಪಕಗಳಿಗೆ ಮಾದರಿಯಾಗಿದೆ. ವೃದ್ಧ ತಂದೆ- ತಾಯಿಗಳು, ಮನೆ ಬಿಟ್ಟು ಹೋಗಿರುವ ಮಗ, ಆತ ಮರಳಿ ಬರಬಹುದೆನ್ನುವ ನಿರೀಕ್ಷೆ, ಜೊತೆಗಿರುವ ಸಂಬಂಧಿಗಳ ಆತಂಕ ಈ ಎಲ್ಲವೂ “ಬೆಟ್ಟದ ಜೀವ” ಕೃತಿಯಲ್ಲಿ ಒಡಮೂಡಿದೆ. ಮನುಷ್ಯ ಜೀವನದ ಆಂತರಿಕ ತುಮುಲಗಳನ್ನು ತೆರೆದಿಡುವ ಈ ಕಾದಂಬರಿ ಇಂದಿಗೂ ಪ್ರಸ್ತುತವಾಗಿರುವುದು ಇದರ ಕಥಾವಸ್ತುವಿನಿಂದಲೇ ಎಂದು ಶೇಷಾದ್ರಿ ಹೇಳಿದರು.  ಪ್ರತೀ ಸಂಬಂಧಗಳ ಮಧ್ಯೆಯೂ ಒಂದು ಸಣ್ಣ ಗುಟ್ಟು ಇರುತ್ತದೆ. ಅದು ಮನುಷ್ಯನ ಬದುಕಿನ ಒಳನೋಟವನ್ನು ಪ್ರತಿನಿಧಿಸುತ್ತದೆ. ಹಾಗೆಂದು ಆ ಗುಟ್ಟುಗಳು ಹಾನಿಕಾರಕವಲ್ಲ. ಸಂಬಂಧಗಳ ಕಟ್ಟುವಿಕೆಗಾಗಿ ಉಳಿಸಿಕೊಂಡಂತಹುದು ಎಂದು ಶೇಷಾದ್ರಿ ಬಣ್ಣಸಿದರು.

                ಅಂಕಲ್ – ಆಂಟಿ ಎಂದು ಕರೆಯುವ ಪದ್ಧತಿಯನ್ನು ಬಿಟ್ಟು ಅಚ್ಚ ಕನ್ನಡದ ಸಂಬಂಧ ಸೂಚಕಗಳನ್ನು ಇಂದಿನ ಮಕ್ಕಳು ಬಳಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸಮಕಾಲೀನ ಸ್ಥಿತಿಗತಿಗಳ ಬಗ್ಗೆಯೂ ಅವಲೋಕನ ಮಾಡಿದ ಶೇಷಾದ್ರಿ ಅವರು ಪ್ರತಿಭಾ ಪಲಾಯನದ ಬಗ್ಗೆಯೂ ತಮ್ಮ ಅಸಮಧಾನ ತೋರಿದರು. ನಮ್ಮ ಮಕ್ಕಳು ನಮ್ಮ ದೇಶದಲ್ಲಿ ಉಳಿಯುವಂತಾಗಬೇಕು ಎಂದರು.

ಸಮಾರಂಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅವರು ಮಾತನಾಡಿ ಶೇಷಾದ್ರಿ ಅವರ ಸಾಧನೆಯ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು. ಕನ್ನಡ ಪುಸ್ತಕ ಪ್ರಾಧಿಕಾರ ಹೊಸ ಚಿಂತನೆಯೊಂದಿಗೆ ಯೋಜನೆಯನ್ನು ರೂಪಿಸಿದ್ದು ಸಾಹಿತ್ಯಾಸಕ್ತರು ಹಾಗೂ ವಿದ್ಯಾರ್ಥಿಗಳು ಅದರ ಲಾಭ ಪಡೆಯಬೇಕು ಎಂದರು. ಕಾರ್ಯಕ್ರಮದಲ್ಲಿ ಸುರಾನಾ ಕಾಲೇಜಿನ ಪ್ರಾಂಶುಪಾಲರಾದ ಡಾ. ವೀಣಾ ಕೆ.ಎನ್, ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಉಪಸ್ಥಿತರಿದ್ದರು.

More articles

Latest article