Friday, January 24, 2025

ಗಣರಾಜ್ಯೋತ್ಸವ ಆಚರಣೆ; ಬಿಗಿ ಭದ್ರತೆ; ಈ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ

Most read

ಬೆಂಗಳೂರು: ಜನವರಿ 26 ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅಂದು ಬೆಳಗ್ಗೆ 9 ಗಂಟೆಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.​ ದಯಾನಂದ್ ವಿವಿರಗಳನ್ನು ನೀಡಿದ್ದು, ಈ ಭಾರಿಯೂ ಗಣರಾಜ್ಯೋತ್ಸವಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ರಾಜ್ಯೋತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಭದ್ರತೆಗಾಗಿ 8 ಮಂದಿ ಡಿಸಿಪಿ, 17 ಮಂದಿ ಎಸಿಪಿ, 44 ಮಂದಿ ಪಿಐ, 114 ಮಂದಿ ಪಿಎಸ್​​ಐ, 58 ಮಂದಿ ಎಎಸ್ಐ, 80 ಮಂದಿ ಸಿಬ್ಬಂದಿ, 30 ಜನ ಕ್ಯಾಮೆರಾ ಸಿಬ್ಬಂದಿ ಸೇರಿದಂತೆ ಒಟ್ಟು 1051 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಂದೋಬಸ್ತ್​​ಗೆ 10 ಕೆಎಸ್​ಆರ್​ಪಿ ತುಕಡಿ, 2 ಅಗ್ನಿಶಾಮಕ ವಾಹನ, ಕ್ಷಿಪ್ರ ಕಾರ್ಯಾಚರಣೆ ತಂಡವೂ ಇರುತ್ತದೆ. ಮೈದಾನದ ಸುತ್ತ 103 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ ಎಂದಿದ್ದಾರೆ.

ಕಲರ್ ಕೋಡ್​ಗಳ ಮೂಲಕ ಪಾಸ್ ವಿತರಿಸಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಪಿಂಕ್ ಬಣ್ಣದ ಪಾಸ್ ನೀಡಲಾಗುತ್ತದೆ. ವಿಐಪಿ ಪಾಸ್ ಹೊಂದಿರುವವರು ಗೇಟ್-2ರ ಮೂಲಕ ಪ್ರವೇಶಿಸಬಹುದಾಗಿದೆ. ಮುಖ್ಯ ಅತಿಥಿಗಳು, ಗಣ್ಯರು ಗೇಟ್-3 ಮೂಲಕ ಪ್ರವೇಶಿಸಬಹುದು. ಗೇಟ್-4ರಲ್ಲಿ ಬಿಳಿ ಪಾಸ್ ನೀಡಲಾಗುತ್ತದೆ, ಇಲ್ಲಿ ಮಾಧ್ಯಮದವರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

ಜ.26ರಂದು ಬೆಳಗ್ಗೆ 8.30 ರಿಂದ 10.30ರವರೆಗೆ ಕಬ್ಬನ್ ರಸ್ತೆ, ಕಾಮರಾಜ ರಸ್ತೆ, ಬಿಆರ್​ವಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಪರ್ಯಾಯ ರಸ್ತೆಗಳಲ್ಲಿ ಸಂಚರಿಸಲು ನಗರ ಸಂಚಾರ ಪೊಲೀಸರ ಸೂಚನೆ ನೀಡಿದ್ದಾರೆ. ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತ, ಶಿವಾಜಿನಗರ ಬಸ್ ನಿಲ್ದಾಣ, ಕಬ್ಬನ್ ರಸ್ತೆ, ಸಿಟಿಒ ವೃತ್ತದಿಂದ ಕೆ.ಆರ್.ರಸ್ತೆ, ಕಬ್ಬನ್ ಜಂಕ್ಷನ್​​ವರೆಗೆ, ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.

More articles

Latest article