ಬೆಂಗಳೂರು: ಜನವರಿ 24 ರಂದು ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ವಿಶಿಷ್ಟ ರೀತಿಯಲ್ಲಿ ಆಚರಿಸಲು ರಾಜ್ಯ ಆರೋಗ್ಯ ಇಲಾಖೆ ಮುಂದಾಗಿದೆ. ಹೆಣ್ಣುಮಕ್ಕಳ ಲಿಂಗಾನುಪಾತವನ್ನ ಹೆಚ್ವಿಸುವುದರ ಜೊತೆಗೆ ಹೆಣ್ಣುಭ್ರೂಣ ಹತ್ಯೆಯನ್ನು ಹೋಗಲಾಡಿಸಲು ಆರೋಗ್ಯ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ.
ಈ ಬಾರಿಯ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯನ್ನ ರಾಜ್ಯದಾದ್ಯಂತ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಸಂಭ್ರಮದಿಂದ ಆಚರಿಸಲು ಆರೋಗ್ಯ ಇಲಾಖೆ ಮುಂದಾಗಿದ್ದು, ಆಸ್ಪತ್ರೆಗಳಲ್ಲಿ ಪಿಂಕ್ ಲೈಟಿಂಗ್ ಮಾಡಲು ನಿರ್ಧರಿಸಲಾಗಿದೆ. ಇಂದು ಜನಿಸುವ ಎಲ್ಲ ಹೆಣ್ಣೂ ಮಕ್ಕಳಿಗೆ 1000 ರೂ ಬೆಲೆಯ ಮಕ್ಕಳ ಕಿಟ್ ಗಳನ್ನು ಉಡುಗೊರೆಯಾಗಿ ನೀಡಲು ಆರೋಗ್ಯ ಇಲಾಖೆ ಎಲ್ಲ ಜಿಲ್ಲೆಯ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಹೆಣ್ಣುಮಕ್ಕಳ ಆರೋಗ್ಯ ಕಾಪಾಡುವ ವಿಚಾರದಲ್ಲಿ ಆರೋಗ್ಯ ಇಲಾಖೆ ಹಲವು ಕಾರ್ಯಕ್ರಮಗಳನ್ನ ಹಾಕಿಕೊಂಡಿದೆ. ಅನಿಮೀಯಾ ಮುಕ್ತ ಪೌಷ್ಠಿಕ ಕರ್ನಾಟಕ ಯೋಜನೆ ಹೆಣ್ಣುಮಕ್ಕಳ ರಕ್ತ ಹೀನತೆ ಹೋಗಲಾಡಿಸುವಲ್ಲಿ ಮಹತ್ವದ ಯೋಜನೆಯಾಗಿದೆ. ಶುಚಿ ಯೋಜನೆ, ಜನನಿ ಸುರಕ್ಷಾ ಯೋಜನೆಗಳನ್ನ ಜಾರಿಗೊಳಿಸಿದೆ. ವಿಶೇಷವಾಗಿ ಹೆಣ್ಣುಭ್ರೂಣ ಹತ್ಯೆಗಳನ್ನ ನಡೆಸುವವರ ವಿರುದ್ಧ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಸಮಾಜದಲ್ಲಿ ಹೆಣ್ಣು ಮಗು ಎದುರಿಸುತ್ತಿರುವ ಎಲ್ಲಾ ಅಸಮಾನತೆಗಳ ಬಗ್ಗೆ ದಿನಾಚರಣೆಯ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಹೆಣ್ಣು ಹುಟ್ಟುವ ಮೊದಲೇ ಎದುರಿಸುವ ಲಿಂಗ ತಾರತಮ್ಯ ಒಂದು ಪ್ರಚಲಿತ ಸಮಸ್ಯೆಯಾಗಿದೆ. ಇಂದಿಗೂ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳೇ ಬೇಕೆಂದು ನಂಬುತ್ತಾರೆ. ಇದು ಸರಿಯಲ್ಲ. ಹೆಣ್ಣನ್ನು ಪೂಜ್ಯ ಭಾವನೆಯಿಂದ ನೋಡಬೇಕು. ಲಿಂಗ ಪತ್ತೆ ಮತ್ತು ಗರ್ಭಪಾತ ನಡೆಸುವ ಎಲ್ಲಾ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಮತ್ತು ಹೆಣ್ಣು ಮಗುವಿನ ಮೌಲ್ಯದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ PCPNDT ಕಾಯ್ದೆಯನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.