ಮುಡಾ ಹಗರಣ; ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ  ಕ್ಲೀನ್‌ ಚಿಟ್?; ಈ ಬಗ್ಗೆ ಸಿಎಂ ಹೇಳಿದ್ದೇನು?

Most read

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ  ತೀವ್ರ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಹಗರಣದ ತನಿಖೆಯನ್ನು ಪೂರ್ಣಗೊಳಿಸಿರುವ ಲೋಕಾಯುಕ್ತ ಇಲಾಖೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಅವರಿಗೆ ಕ್ಲೀನ್‌ಚಿಟ್‌ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಡಾ ಹಗರಣದಲ್ಲಿ ಡಿ ನೋಟಿಫೈ ಮಾಡುವಾಗ, ಭೂಪರಿವರ್ತನೆ ಮಾಡುವಾಗ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿದ್ದಾರೆಯೇ ಹೊರತು ಸಿಎಂ ಸಿದ್ದರಾಮಯ್ಯ ಅಥವಾ ಅವರ ಕುಟುಂಬದ ಪಾತ್ರ ಎಲ್ಲಿಯೂ ಕಂಡು ಬಂದಿಲ್ಲ. ಎಂದು ಲೋಕಾಯುಕ್ತ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮುಡಾ ಆಯುಕ್ತರು, ಕಂದಾಯ ಇಲಾಖೆ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿರುವುದು ಕಂಡು ಬಂದಿದೆ. ಅಧಿಕಾರಿಗಳು ಅಪರಾಧ ಎಸಗಿರುವ ಬಗ್ಗೆ ಮುಂದೆ ಯಾವ ಕ್ರಮ ಅನುಸರಿಸಬೇಕು ಎಂದು ಕಾನೂನು ತಜ್ಞರ ಸಲಹೆ ಪಡೆಯಲು ಲೋಕಾಯುಕ್ತ ನಿರ್ಧರಿಸಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಮುಡಾ ಹಗರಣದ ತನಿಖಾ ವರದಿಯನ್ನು ಲೋಕಾಯುಕ್ತ ಅಧಿಕಾರಿಗಳು ಸೋಮವಾರ ನ್ಯಾಯಾಲಯಕ್ಕೆ  ಸಲ್ಲಿಸಲಿದ್ದಾರೆ. ಲೋಕಾಯುಕ್ತ ಎಸ್​​ಪಿ ಟಿಜೆ ಉದೇಶ್ ನೇತೃತ್ವದಲ್ಲಿ ಮುಡಾ ಹಗರಣ ಕುರಿತು ತನಿಖೆ ನಡೆದಿತ್ತು. ಈ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾಯುಕ್ತ ವರದಿ, ಕ್ಲೀನ್‌ ಚಿಟ್‌ ಕುರಿತು ತಮಗೇನೂ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಮತ್ತೊಂದು ಕಡೆ  ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ತನಿಖೆಯೂ ಪ್ರಗತಿಯಲ್ಲಿದೆ. ಏತನ್ಮಧ್ಯೆ, ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಮನವಿ ಮಾಡಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯೂ ಹೈಕೋರ್ಟ್​​ನಲ್ಲಿ ನಡೆಯುತ್ತಿದೆ. ಜನವರಿ 27ರಂದು ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಸಂಬಂಧ ಹೈಕೋರ್ಟ್ ತೀರ್ಪು ನೀಡುವ ನಿರೀಕ್ಷೆ ಇದೆ.

More articles

Latest article