ಬೆಂಗಳೂರು: ಹೆಸರಘಟ್ಟ ರಸ್ತೆಯಲ್ಲಿರುವ ಶಿವಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಳ್ಳಿಪುರ ಮಧುಗಿರಿಹಳ್ಳಿ, ಕಾಳೇನಹಳ್ಳಿ, ಶಿವಕೋಟೆ ಮತ್ತು ಲಿಂಗನಹಳ್ಳಿ ಮೊದಲಾ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡಿದ್ದು ನಾಯಿಯೊಂದನ್ನು ಕೊಂದು ಹಾಕಿದೆ. ಇದರಿಂದ ಸ್ಥಳೀಯರು
ಆತಂಕಗೊಂಡಿದ್ದಾರೆ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಮತ್ತು ದನ, ಕುರಿ ಮೇಯಿಸುವವರು ಭಯಪಡುತ್ತಿದ್ದಾರೆ.
ಮಾವಳ್ಳಿಪುರ ಗ್ರಾಮದ ಕೆರೆ ಅಂಗಳದಲ್ಲಿ ಚಿರತೆಯು ಬೀದಿನಾಯಿಯ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಬುಧವಾರ ಮುಂಜಾನೆ ಕಾಳೇನಹಳ್ಳಿ ಗ್ರಾಮದ ನಿವಾಸಿ ಚೇತನ್ ರೆಡ್ಡಿ ಅವರ ಸಾಕು ನಾಯಿಯ ಮೇಲೂ ಚಿರತೆ ದಾಳಿ ಮಾಡಿದೆ. ಸದ್ದು ಕೇಳಿಸಿಕೊಂಡು ರೆಡ್ಡಿ ಅವರು
ಹೊರಬರುವ ವೇಳೆಗೆ ಗಾಬರಿಗೊಂಡ ಚಿರತೆ ಓಡಿಹೋಗಿದೆ. ಈ ಭಾಗದಲ್ಲಿ ಚಿರತೆಯು ಓಡಾಡುತ್ತಿರುವುದನ್ನು ಸಾರ್ವಜನಿಕರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುತ್ತಿವೆ. ಚಿರತೆಯ ಸಂಚಾರದಿಂದ ಸುತ್ತಮುತ್ತಲಿನ ಗ್ರಾಮಸ್ಥರು ಭಯಬೀತರಾಗಿದ್ದಾರೆ.
  ಸಾರ್ವಜನಿಕರು, ಮಕ್ಕಳು, ಸ್ತ್ರೀಯರು ಆತಂಕಗೊಂಡಿದ್ದು ಆದಷ್ಟು ತ್ವರಿತವಾಗಿ  ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಈ ಗ್ರಾಮಗಳ ನಿವಾಸಿಗಳು ಒತ್ತಾಯಿಸಿದ್ದಾರೆ. ಈ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಅರಣ್ಯಾಧಿಕಾರಿಗಳು ರಾತ್ರಿ ವೇಳೆ ಸಾರ್ವಜನಿಕರು
ಓಡಾಡದಂತೆ ಎಚ್ಚರಿಕೆ ನೀಡಿದ್ದಾರೆ. ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ರೂಪಿಸುತ್ತಿದ್ದು, ಇಂದು ಬೋನು ಇರಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

                                    