ಇಟ್ಟಿಗೆ ಭಟ್ಟಿಯಲ್ಲಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದ ಮಾಲೀಕನ ಬಂಧನ

Most read

ವಿಜಯಪುರ: ಇಲ್ಲಿನ ಗಾಂಧಿ ನಗರ ಪ್ರದೇಶದಲ್ಲಿ ಇಟ್ಟಿಗೆ ಭಟ್ಟಿಯೊಂದರಲ್ಲಿ ಕೆಲಸ ಮಾಡಲು ನಿರಾಕರಿಸಿದ ಮೂವರು ಕಾರ್ಮಿಕರನ್ನು ಇಟ್ಟಿಗೆ ಭಟ್ಟಿ ಮಾಲೀಕ ಮತ್ತು ಆತನ ಮಗ ಸೇರಿಕೊಂಡು ಕಾರ್ಮಿಕರನ್ನು ಕೊಠಡಿಯಲ್ಲಿ ಕೂಡಿಹಾಕಿ, ಕೈ ಕಾಲು ಕಟ್ಟಿ, ಕಾಲ ಮೇಲೆ ನಿಂತು ಪೈಪ್‌ನಿಂದ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.  ಮೂವರು ತಪ್ಪಿಸಿಕೊಂಡಿದ್ದಾರೆ. ಈ ಅಮಾನವೀಯ ಪ್ರಕರಣದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಮೂವರು ತಪ್ಪಿಸಿಕೊಂಡಿದ್ದಾರೆ. ಅಂಗಾಲು, ಬೆನ್ನು, ಸೊಂಟಕ್ಕೆ ತೀವ್ರ ಹಲ್ಲೆಯಾಗಿರುವ ಕಾರ್ಮಿಕರಾದ ಸದಾಶಿವ ಮಾದರ, ಸದಾಶಿವ ಬಬಲಾದಿ, ಉಮೇಶ ಮಾದರ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಟ್ಟಿಗೆ ಭಟ್ಟಿ ಮಾಲೀಕ ಖೇಮು ರಾಠೋಡ ಎಂಬಾತನನ್ನು ಬಂಧಿಸಲಾಗಿದೆ. ಇಟ್ಟಿಗೆ ಭಟ್ಟಿಯಲ್ಲಿ ಪ್ರತಿ ದಿನ ರೂ. 600 ಕೂಲಿ ಪಡೆಯುತ್ತಿದ್ದ ಕಾರ್ಮಿಕರು ಕಳೆದ ಸಂಕ್ರಮಣದಂದು ಮನೆಗೆ ತೆರಳಿದ್ದರು. ಜನವರಿ 16ರಂದು ಮರಳಿ ಇಟ್ಟಂಗಿ ಭಟ್ಟಿಗೆ ಬಂದಿದ್ದರು. ಕೆಲಸ ಮಾಡಲು ಒಪ್ಪದ ಕಾರ್ಮಿಕರು ತಮ್ಮೆಲ್ಲ ಸಾಮಾನುಗಳನ್ನು ಮನೆಗೆ ಕೊಂಡೊಯ್ಯಲು ಮುಂದಾಗಿದ್ದರು. ಆಗ ಖೇಮು ರಾಠೋಡ ತಮ್ಮ ಕಡೆಯವರನ್ನು ಕರೆಯಿಸಿ, ಕಾರ್ಮಿಕರನ್ನು ಮೂರು ದಿನ ಕೊಠಡಿಯಲ್ಲಿ ಕೂಡಿ ಹಾಕಿ ಪ್ರತಿ ದಿನ ಅವರ ಮೇಲೆ  ಹಲ್ಲೆ ಮಾಡಿಸಿದ್ದಾನೆ. ಹೆದರಿಸಿ, ಬೆದರಿಸಿ ಕಾರ್ಮಿಕರಿಂದ ಕೆಲಸ ಮಾಡಿಸುತ್ತಿದ್ದ ಎಂದು ನಿಂಬರಗಿ ತಿಳಿಸಿದ್ದಾರೆ.

More articles

Latest article