ಮನುಕುಲದ ಒಳಿತಿಗೆ ಸತ್ಯ, ಅಹಿಂಸೆ, ಸರಳ ಜೀವನ ಮಾರ್ಗವೇ ಸೂಕ್ತವಾದದ್ದು ಎನ್ನುವುದಕ್ಕೆ ತನ್ನ ಬದುಕಿನ ಮೂಲಕವೇ ಉತ್ತರ ನೀಡಿದ ಗಾಂಧಿಯನ್ನು ಅರ್ಥ ಮಾಡಿಕೊಳ್ಳುವವರಿಗೆ ಸತ್ಯ, ಅಹಿಂಸೆ, ಸರಳ ಜೀವನದ ಪ್ರಾಥಮಿಕ ಪರಿಚಯವಾದರೂ ಬೇಕು. ಗಾಂಧಿಯನ್ನು ತಿಳಿಯುವುದರಿಂದ ಗಾಂಧಿಗೇನಾದರೂ ಲಾಭವಿದೆಯೋ ಗೊತ್ತಿಲ್ಲ, ಆದರೆ ನಮಗಂತೂ ಇದೆ ಎನ್ನುವುದು ನನ್ನ ಬದುಕಿನ ಅನುಭವ. ಬೆಳಗಾವಿಗೆ ಹೊರಟವರಿಗೂ ಇದು ತಿಳಿಯಲಿ ಎನ್ನುವ ಹಾರೈಕೆ ನನ್ನದು- ಡಾ.ಉದಯ ಕುಮಾರ ಇರ್ವತ್ತೂರು.
ಕೆಲದಿನಗಳ ಹಿಂದೆ ನಡೆದ ಎರಡು ಘಟನೆಗಳು ಈ ವಾರದ ನುಡಿ ಸಂಚಾರಕ್ಕೆ ಸಾಮಗ್ರಿಯಾದುವು. ಮೊದಲನೆಯದು, ಪದವಿ ತರಗತಿಯಲ್ಲಿ ಜೊತೆಗಿದ್ದ ಸಹಪಾಠಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದ್ದ ಒಂದು ವಿಡಿಯೋ ಕ್ಲಿಪ್ ಕಳುಹಿಸಿದ್ದ. ಅದರಲ್ಲಿ ಗಾಂಧಿಯನ್ನು ಟೀಕಿಸಿದ ಕಾರಣಕ್ಕೆ ಯಾರೋ ಒಬ್ಬಳು ಹೆಣ್ಣು ಮಗಳ ಮೇಲೆ ಕೇಸು ದಾಖಲಿಸಲಾಗಿತ್ತು. ಅವಳ ಟೀಕೆಗೆ ಕಾರಣ ಗಾಂಧಿ ಭಗತ್ ಸಿಂಗ್ ಅವರನ್ನು ನೇಣುಗಂಬ ಏರುವುದನ್ನು ತಪ್ಪಿಸದೇ ಇರುವುದಾಗಿತ್ತು. ಅದಕ್ಕೆ ಆಕೆ ತನ್ನದೇ ಆದ ರೀತಿಯಲ್ಲಿ ಸಮರ್ಥನೆ ನೀಡುತ್ತಿರುವುದನ್ನು ಆಕೆ ಎಷ್ಟೊಂದು ಶಾಂತಚಿತ್ತಳಾಗಿ ತನ್ನ ವಿಚಾರವನ್ನು ಹೇಳುತ್ತಿದ್ದಾಳೆ ಎನ್ನುವ ಟಿಪ್ಪಣಿಯೊಂದನ್ನು ನೀಡಲಾಗಿತ್ತು. ಅಪರೋಕ್ಷವಾಗಿ ಇದು ಗಾಂಧಿಯ ಅಹಿಂಸೆ, ಸತ್ಯಾಗ್ರಹದ ಕುರಿತು ನಿರಾಕರಣೆಯಾಗಿದ್ದು, ನಿಜವಾದ ದೇಶ ಭಕ್ತಿಯ ಮಾದರಿ ಭಗತ್ ಸಿಂಗ್ ಹೊರತು ಗಾಂಧಿಯಲ್ಲ ಎನ್ನುವ ಬಲಪಂಥೀಯ ವಾದವಾಗಿದೆ. ಸ್ವಾತಂತ್ರ್ಯ ಹೋರಾಟದ ಬಗ್ಗೆ ಇದುವರೆಗೆ ಇದ್ದದ್ದೆಲ್ಲ ಅಪಕಲ್ಪನೆ, ಈಗ 2014 ರಿಂದ ಮಾತ್ರ ಸರಿಯಾದ ಮಾಹಿತಿ ದೊರೆಯುತ್ತಿದೆ ಎನ್ನುವುದನ್ನು ಪ್ರತಿಪಾದಿಸುವ ಪ್ರಯತ್ನದ ಮುಂದುವರಿಕೆಯಾಗಿದೆ. ಮತ್ತು ಇಂತಹ ವಾದವನ್ನು ಕೇಳಿದ ತಕ್ಷಣ ಗಾಂಧೀವಾದಿಗಳು ಹೇಗೆ ಉರಿದು ಬೀಳುತ್ತಾರೆ ನೋಡಿ ಎನ್ನುವ ರೀತಿಯ ಕುಹಕದ ಮಾತುಗಳನ್ನೂ ಹೇಳಲು ಮರೆಯಲಿಲ್ಲ.
ಎರಡನೆಯದು, ಕಾರ್ಯಕ್ರಮಗಳಲ್ಲಿ ಸ್ಮರಣಿಕೆಯ ರೂಪದಲ್ಲಿ ನೀಡುವುದಕ್ಕೆ ಈಗ ಗಾಂಧಿ ಪ್ರತಿಮೆಗಳೇ ಸಿಗುತ್ತಿಲ್ಲ, ಈ ಕುರಿತು ಪೂರೈಕೆದಾರರಲ್ಲಿ ವಿಚಾರಿಸಿದರೆ ಅಂತವುಗಳಿಗೆ ಬೇಡಿಕೆಯೇ ಇಲ್ಲ. ಹಾಗಾಗಿ ನಾವು ತರಿಸಿ ಇಟ್ಟುಕೊಳ್ಳುವುದಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು ಎಂದು ಗೆಳೆಯರೊಬ್ಬರು ಹೇಳಿದರು. ಇಂದಿನ ಯುವ ಜನಾಂಗಕ್ಕೆ ಗಾಂಧಿಯವರ ಕುರಿತು ಕುತೂಹಲವಾಗಲೀ ಗೌರವವಾಗಲೀ ಮೂಡಬಾರದು ಎಂದು ಕೆಲಸ ಮಾಡುವ ಒಂದು ಗುಂಪು ತಕ್ಕ ಮಟ್ಟಿಗೆ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಿದೆ ಎಂದೇ ಹೇಳಬಹುದೇನೋ?
ಇಂದಿನ ತಲೆಮಾರಿನ ಬಹುತೇಕರು ಗಾಂಧಿ ಮತ್ತು ಅವರು ಪ್ರತಿಪಾದಿಸಿದ ವಿಚಾರಗಳು ಅನಾಕರ್ಷಕ, ಅಪ್ರಯೋಜಕ, ದೇಶವನ್ನು ವಿಭಜನೆ ಮಾಡಲು ಕಾರಣವಾಗಿದ್ದು, ಸರ್ದಾರ್ ಪಟೇಲ್ ಬದಲು ಜವಾಹರ್ಲಾಲ್ ಪ್ರಧಾನ ಮಂತ್ರಿಯಾಗಿ ದೇಶ ಹಾಳಾಗಲು ಕಾರಣವಾಗಿದೆ…ಇವೇ ಮುಂತಾದ ದೋಷಾರೋಪ ಪಟ್ಟಿ ಹಿಡಿದುಕೊಂಡು ಕಂಡ ಕಂಡಲ್ಲಿ ಹಿಡಿ ಶಾಪ ಹಾಕುವ ಯೋಜನೆಯನ್ನು ಅನುಷ್ಠಾನಗೊಳಿಸುವ ಕಾಲಾಳುಗಳಾಗಿದ್ದಾರೆ. ಈ ರೀತಿಯ ಚರ್ಚೆ, ವಾದ ಸರಣಿ ಮೇಲ್ನೊಟಕ್ಕೆ ಆಕರ್ಷಕವಾಗಿ ಯುವ ಸಮುದಾಯದ ಭಾವನೆಗಳನ್ನು ಬಡಿದೆಬ್ಬಿಸುವ ರೀತಿಯಲ್ಲಿದೆ. ಮತ್ತು ಇಂತಹ ಮಾತುಗಳಿಗೆ ಬಹಳ ದೊಡ್ಡ ಸಂಖ್ಯೆಯ ಜನರ ಅದರಲ್ಲಿಯೂ ಯುವ ಜನರ ಬೆಂಬಲವಿದ್ದಂತೆ ತೋರುತ್ತದೆ. ಇದು ಅಧಿಕಾರದ ಗದ್ದುಗೆಗೆ ಹೆದ್ದಾರಿ ನಿರ್ಮಿಸುವ, ಸುಳ್ಳಿನ ಬುಲ್ಡೋಜರ್ ನಿರ್ಮಿಸುತ್ತಿರುವ ಹೆದ್ದಾರಿ ಎನ್ನುವುದು ಬಹುತೇಕರಿಗೆ ಒಂದೋ ಗೊತ್ತಿಲ್ಲ, ಇಲ್ಲಾ ಅದು ಗೊತ್ತಿದ್ದೂ ಅಧಿಕಾರದ ಕಡೆಗೆ ಈ ಸುಳ್ಳು ನಮ್ಮನ್ನು ಬಹಳ ಬೇಗನೇ ಹತ್ತಿರ ಕೊಂಡು ಹೋಗುವುದಿದ್ದರೆ ಅದರಿಂದ ನಮಗಾಗುವ ನಷ್ಟವೇನಿಲ್ಲ ಎಂದುಕೊಂಡು ಸುಮ್ಮನಿರುವವರು ಮಿಕ್ಕುಳಿದವರು. ಈ ವಾದ ಪಸರಿಸುವುದಕ್ಕೆ ಇನ್ನೊಂದು ಕಾರಣ, ಗಾಂಧಿಯ ಹೆಸರಲ್ಲಿ ಸುದೀರ್ಘ ಕಾಲ ರಾಜಕೀಯ ಅಧಿಕಾರ ಅನುಭವಿಸಿದ ಕಾಂಗ್ರೆಸ್ ಈ ವಿಷಯದ ಸತ್ಯಾಸತ್ಯತೆಯನ್ನು ನಿಕಷಕ್ಕೆ ಒಡ್ಡಿ ನಿಜ ಸಂಗತಿಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡುವ ಕೆಲಸದಲ್ಲಿ ಸಂಪೂರ್ಣ ವಿಫಲವಾಗಿರುವುದು.
ಗಾಂಧೀ ಕುರಿತಂತೆ ಸುದೀರ್ಘ ಲೇಖನ ಒಂದನ್ನು ಬರೆಯುವ ಕಾರಣಕ್ಕೆ ಮಗದೊಮ್ಮೆ ಗಾಂಧಿಯನ್ನು ಓದುವುದಕ್ಕೆ ಆರಂಭಿಸಿದ ನಂತರ ಇದುವರೆಗೆ ಕಂಡರಿಯದ ಹಲವು ವಿಷಯಗಳ ದರ್ಶನವಾಗ ತೊಡಗಿತು. ಅಧಿಕಾರ ಅಹಂಕಾರ, ದರ್ಪ ದಬ್ಬಾಳಿಕೆಯ ಹಿಮಾಲಯವನ್ನು ಗಾಂಧಿಯೆನ್ನುವ ಸಾಮಾನ್ಯ ಮನುಷ್ಯನೊಬ್ಬ ನಮ್ಮ ನಾಡಿನ ಚಿಂತನಾ ಪರಂಪರೆಯಲ್ಲಿ ಹಾಸು ಹೊಕ್ಕಾಗಿರುವ ಹೆಚ್ಚಾಗಿ ಯಾರ ಕಣ್ಣಿಗೂ ಆಕರ್ಷಕವಾಗಿ ಕಾಣದೇ ಉಳಿದ, ಅಥವಾ ನಿರುಪಯೋಗಿ ವಸ್ತುಗಳೆಂದು ಪರಿಗಣಿಸಲಾಗಿದ್ದ ಸತ್ಯ, ಅಹಿಂಸೆ, ಅಸಹಕಾರವೆನ್ನುವ ಸಲಕರಣೆಗಳನ್ನೇ ಬಳಸಿ ಕಡಿದು ನಿರ್ಮಿಸಿದ ಸ್ವಾಭಿಮಾನದ ಹೆದ್ದಾರಿಯ (ಸ್ವ ರಾಜ್ಯದ ಕಲ್ಪನೆ) ಮೂಲಕ ತಲುಪಿದ ಸ್ವಾತಂತ್ರ್ಯದ ಗುರಿ ಒಂದು ಐತಿಹಾಸಿಕ ಸತ್ಯವೇ ಸರಿ. 1909ನೇ ಇಸವಿ ಜುಲೈ 5 ರಂದು ಮದನ್ಲಾಲ್ ದಿಂಗ್ರಾ ಎಂಬ ಭಾರತೀಯ ವಿದ್ಯಾರ್ಥಿ ಗುಂಡು ಹಾರಿಸಿ ಇಂಗ್ಲೀಷ್ ಸೈನ್ಯದ ಅಧಿಕಾರಿ ಕರ್ಜನ್ ವೈರಿಯನ್ನು ಕೊಲೆ ಮಾಡಿದ್ದ. ಮದನ್ಲಾಲ್ ದಿಂಗ್ರಾ ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಯಲ್ಲಿ ತನ್ನ ಕಾರ್ಯವನ್ನು ಪ್ರಬಲವಾಗಿ ಸಮರ್ಥಿಸಿಕೊಂಡಿದ್ದ ಕೂಡಾ. ನೈತಿಕವಾಗಿಯೂ ಸಶಕ್ತವಲ್ಲದ ಈ ರೀತಿಯ ಹೋರಾಟಗಳು ದೀರ್ಘಾವಧಿಯಲ್ಲಿ ಗುರಿ ತಲುಪಲು ಪೂರಕವಾಗುವ ಬದಲು ಮಾರಕವಾಗುತ್ತವೆ ಎನ್ನುವುದನ್ನು ಗಾಂಧಿ, ಸಾಕಷ್ಟು ಮುಂಚಿತವಾಗಿಯೇ ಸ್ಪಷ್ಟವಾಗಿ ಹೇಳಿದ್ದರು. ಅವರ ಆಭಿಪ್ರಾಯದಂತೆ ಬೃಹತ್ ಸಾಮ್ರಾಜ್ಯವಾಗಿ ವಿಸ್ತರಿಸಿಕೊಂಡಿದ್ದ ಬ್ರಿಟೀಷರ ವಿರುದ್ಧ ಹೋರಾಡುವುದು ಸಮರ್ಥನೀಯವಾಗಿರಲಿಲ್ಲ, ಯಾಕೆಂದರೆ-
1. ಪ್ರಭುತ್ವದ ವಿರುದ್ಧ ಹಿಂಸಾತ್ಮಕ ಹೋರಾಟ ಇನ್ನಷ್ಟು ಹಿಂಸೆಯನ್ನು ಹುಟ್ಟು ಹಾಕುತ್ತದೆ ಮತ್ತು ಅದಕ್ಕೆ ದೊಡ್ಡ ಬೆಲೆ ತೆರಬೇಕಾಗಿದ್ದವರು, ಬ್ರಿಟೀಷರಿಗೆ ಹೋಲಿಸಿದಲ್ಲಿ ಅಶಕ್ತರಾಗಿದ್ದ ಭಾರತೀಯ ಜನ ಸಾಮಾನ್ಯರು. ಕೇವಲ ಹೋರಾಟದಲ್ಲಿ ತೊಡಗಿಕೊಂಡವರಲ್ಲದೆ ಮಿಕ್ಕುಳಿದವರೂ ಇಂತಹ ಹಿಂಸೆಯ ಪರಿಣಾಮವನ್ನು ಅನುಭವಿಸಬೇಕಾಗಿ ಬರಬಹುದು.
2.ಯಾರ ವಿರುದ್ಧ ಹೋರಾಟಕ್ಕಿಳಿಯಲಾಗಿದೆಯೋ ಅಂತಹವರು ತಮ್ಮ ವಿಚಾರವನ್ನು ಪುನರ್ ವಿಮರ್ಶಿಸುವ ಬದಲಿಗೆ ಇನ್ನಷ್ಟು ಬಲಿಷ್ಠವಾದ ದಾಳಿಯನ್ನು ಸಂಘಟಿಸುವ ಸಾಧ್ಯತೆಗಳು ಹಿಂಸಾತ್ಮಕ ಹೋರಾಟಗಳಲ್ಲಿ ಹೆಚ್ಚಾಗಿದೆ. ಮತ್ತು ಇದೊಂದು ಕಡಿಯಲಾರದ ಕೊಂಡಿಯಾಗಿ ಸುದೀರ್ಘ ಕಾಲ ಮುಂದುವರಿಯುವ ಅಪಾಯವಿದೆ.
ಮೇಲಾಗಿ ಇಂತಹ ಹೋರಾಟಗಳನ್ನು ಸಮಾಜದಿಂದ ದೂರವಿದ್ದು ಮುಖ್ಯವಾಹಿನಿಯಿಂದ ಮರೆಯಲ್ಲಿದ್ದು ಮಾಡಬೇಕಿರುತ್ತದೆ. ಬೆಳಕಿನಲ್ಲಿ ಮಾಡುವ ಹೋರಾಟಗಳು ಕಣ್ಣೆದುರು ನಡೆಯುತ್ತಿರುವಾಗಲೇ ಅನೇಕ ಸುಳ್ಳುಗಳು ಸತ್ಯವನ್ನು ಮರೆಮಾಚುವ ರೀತಿಯಲ್ಲಿ ಕುಣಿಯುತ್ತಿದ್ದರೆ, ಇನ್ನು ಆ ಮರೆಯಲ್ಲಿ ನಡೆಯುವ ಹಿಂಸಾತ್ಮಕ ಹೋರಾಟವನ್ನು ಪ್ರೇರೇಪಿಸುವವರು ಯಾವಾಗಲೂ ಸುರಕ್ಷತಾ ವಲಯದಲ್ಲಿ ಉಳಿದು ಭಾವನಾತ್ಮಕವಾಗಿ ಸಕ್ರಿಯವಾಗಿರುವವರನ್ನು ಅಪಾಯಕ್ಕೆ ಒಡ್ಡಿ ಹೋರಾಟ ಮುಂದುವರೆಸುವ ಸಂಭವಗಳೇ ಹೆಚ್ಚು.
ಆದ್ದರಿಂದ ಇದಕ್ಕೆ ಬದಲಾಗಿ ಆತ್ಮಬಲ, ಸತ್ಯ, ಅಹಿಂಸೆಯ ಬಲದಿಂದ ನಡೆಯುವ ಹೋರಾಟಗಳಲ್ಲಿ ಸೋಲು ಗೆಲುವುಗಳಿಗೆ ಬದಲಿಗೆ ಪರಿವರ್ತನೆ ಉಂಟಾಗುವ ಉದ್ದೇಶವಿರುತ್ತದೆ. ಇದರಿಂದ ಇಡೀ ಮನುಷ್ಯ ಸಮುದಾಯ ಶಾಂತಿ ನೆಮ್ಮದಿಯಿಂದ ಇರುವುದಕ್ಕೆ ಸಾಧ್ಯ ಎನ್ನುವುದು ಗಾಂಧಿಯವರ ಇಂಗಿತವಾಗಿದ್ದಂತೆ ತೋರುತ್ತದೆ. ಇದು ನಿಜ ಕೂಡಾ, ಬದಲಾಗಬೇಕಾದದ್ದು ಭಾರತೀಯರು ಅನುಭವಿಸುತ್ತಿದ್ದ ಕಷ್ಟ ಮಾತ್ರವಲ್ಲ, ಬ್ರಿಟೀಷರ ಶೋಷಕ ಮನೋಭಾವ ಕೂಡಾ, ಎನ್ನುವ ಮಾತು ಬಹಳ ಗಾಢವಾದ, ಗೂಢವಾದ ಆರ್ಥಗಳನ್ನು ಹಿಡಿದಿಟ್ಟುಕೊಂಡಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಸಾಮ್ರಾಜ್ಯಶಾಹಿ ಶೋಷಕರಾಗುವ ಬದಲು ಪೋಷಕನ ಮನೋಸ್ಥಿತಿಯನ್ನು ಹೊಂದಬೇಕು ಎನ್ನುವ ಮಾತನ್ನು ಅರಗಿಸಿಕೊಳ್ಳಲು ಕೇವಲ ಹೃದಯ ಮಾತ್ರವಲ್ಲ ಬುದ್ಧಿಯೂ ಬೇಕಾಗುತ್ತದೆ.
ಗಾಂಧಿ ಧರ್ಮವೆಂದರೆ ಜನಿವಾರ ಹಾಕಿಕೊಂಡು ನಾಮ ಬಳಿದುಕೊಂಡು ಪೂಜೆ ಮಾಡುವುದಲ್ಲ, ಸತ್ಯ, ನೀತಿ ನಿಯಮ, ಅಹಿಂಸೆಯನ್ನು ಆವಾಹಿಸಿಕೊಂಡು ಬದುಕುವ ರೀತಿ ಎನ್ನುವುದನ್ನು ನಂಬಿದವರು ಮತ್ತು ಅದರಂತೆ ಬದುಕಲು ಪ್ರಯತ್ನಪಟ್ಟವರು. ಅಗತ್ಯಕ್ಕಿಂತ ಏನನ್ನು ಬಳಸಬಾರದು, ಸಂಗ್ರಹಿಸಿಟ್ಟು ಕೊಳ್ಳಬಾರದು ಎಂದು ಹೇಳುತ್ತಾ ಅದರಂತೆಯೇ ಬದುಕಲು ಪ್ರಯತ್ನಪಟ್ಟವರು. ಅವರು ಹೇಳುವ ಅಪರಿಗ್ರಹ, ಬ್ರಹ್ಮಚರ್ಯ ತತ್ವಗಳ ಪಾಲನೆ ಅಷ್ಟು ಸುಲಭವಲ್ಲ. ಇದು ಹೇಳುವುದಕ್ಕೆ ಸರಳ ಆದರೆ ಪಾಲಿಸುವುದಕ್ಕೆ ಕಠಿಣಾತಿ ಕಠಿಣ.
ಇಂದಿನ ಕಾಲಮಾನದಲ್ಲಿ ಎಲ್ಲದಕ್ಕೂ ತರಬೇತಿ ಪಡೆಯುವ, ಹಣದಿಂದ ಎಲ್ಲವನ್ನೂ ಕೊಳ್ಳಲು ತುದಿಗಾಲಲ್ಲಿ ನಿಂತವರು ನಾವು. ಗುಣವನ್ನು, ಗ್ರಹಿಸಿ, ಅಭ್ಯಸಿಸಿ ಮೈಗೂಡಿಸಿ ಕೊಳ್ಳುವುದು ಬಿಟ್ಟು ಅನ್ಯ ಮಾರ್ಗವಿಲ್ಲ. ಇವತ್ತಿನ ಕಾಲಮಾನದಲ್ಲಿ ಅಧಿಕಾರವಿರಲಿ, ಹಣವಿರಲಿ, ಅಂಕಗಳಿರಲಿ, ಆರೋಗ್ಯವಿರಲಿ ನಮಗೆ ಇವತ್ತು ಎಲ್ಲವೂ ಸುಲಭವಾಗಿ ಸಿಗಬೇಕು. ಹಣದ ಭಾಷೆಗೆ ದಕ್ಕುವ ರೋಷ, ಆವೇಶಗಳು ಗಾಂಧಿ ಜಾಡಿನಲ್ಲಿ ಕಾಣಸಿಗುವುದೇ ಇಲ್ಲ. ಗುಣದ ಭಾಷೆಯನ್ನು ತಿಳಿಯದವರಿಗೆ ಗಾಂಧಿ ಕಾಣದಿರುವುದು ಆಶ್ಚರ್ಯವೇನೂ ಅಲ್ಲ. ಅನುಭವದಿಂದ ಪಡೆದ ಶಿಕ್ಷಣ ಮಾತ್ರ ಒಳ್ಳೆಯ ವ್ಯಕ್ತಿಗಳನ್ನು, ನಾಗರಿಕರನ್ನು ರೂಪಿಸುತ್ತದೆ ಎಂದು ನಂಬಿದವರು ಗಾಂಧಿ. ಹಾಗಾಗಿ ಅವರು ಮಕ್ಕಳಿಗೆ ಆಧುನಿಕ ಶಿಕ್ಷಣವನ್ನು ನೀಡದೆ, ಲೋಕದ ಕುರಿತು ತಿಳುವಳಿಕೆ ನೀಡಿ, ವ್ಯವಹಾರ ಜ್ಞಾನವನ್ನು ನೀಡಿದ್ದು, ನಮ್ಮನ್ನು ಅನ್ಯರ ಮೂಲಕ ಪ್ರವೇಶಿಸುವುದು, ಅಪಕಲ್ಪನೆಗೆ ಈಡು ಮಾಡಬಹುದೆನ್ನುವ ಎಚ್ಚರದಿಂದ. ಆದರೆ ನಾವು, ನಮ್ಮ ಸಂಸ್ಕೃತಿ ಎನ್ನುವುದು ಮಂತ್ರದ ಮಾವಿನಕಾಯಿಯಲ್ಲ ಅದು ಬದುಕುವ ರೀತಿ, ಪಾಲಿಸುವ ನೀತಿ, ಸತ್ಯ ಅಹಿಂಸೆಯ ಮೂಲಕ ಬದುಕು ಕಟ್ಟುವ ಕಾಯಕವೆಂದು ಬದುಕಿ ತೋರಿದವರು. ಇನ್ನೊಬ್ಬರ ಹೆಗಲ ಮೇಲೆ ಬಂದೂಕು ಇಟ್ಟು ತಿದಿ ಒತ್ತುವವರಿಗೆ, ಇದು ಅರ್ಥವಾಗಲು ಸಾಧ್ಯವೇ?
ತಮ್ಮ ವಸಾಹತುಗಳಲ್ಲಿದ್ದ ಇಡೀ ಮನುಷ್ಯ ಸಮುದಾಯವನ್ನು ತನ್ನ ಭೋಗ ಜೀವನ ಶೈಲಿಯ ಬಳಕೆಗೆ ಇರುವ ಸಾಮಗ್ರಿಗಳು, ಸರಕುಗಳು ಎನ್ನುವ ಬಿಳಿಯರ ಅಹಂಕಾರವನ್ನು ಒಂದು ಏಟೂ ನೀಡದೆ ಸತ್ಯದ, ನ್ಯಾಯದ ಕನ್ನಡಿಯನ್ನು ಮುಂದಿಟ್ಟು ಅದರೊಳಗೆ ತಮ್ಮ ಮುಖ ತಾವೇ ಕಂಡು ಬೆಚ್ಚಿ ಬೀಳಿಸುವ ಮೂಲಕ ಬ್ರಿಟೀಷರಿಗೆ ಸತ್ಯ ದರ್ಶನ ಮಾಡಿಸಿದ ಅಪರೂಪದ ಮನುಷ್ಯ ಮೋಹನದಾಸ ಕರಮ ಚಂದ ಗಾಂಧಿ. ಮನುಕುಲದ ಒಳಿತಿಗೆ ಸತ್ಯ, ಅಹಿಂಸೆ, ಸರಳ ಜೀವನ ಮಾರ್ಗವೇ ಸೂಕ್ತವಾದದ್ದು ಎನ್ನುವುದಕ್ಕೆ ತನ್ನ ಬದುಕಿನ ಮೂಲಕವೇ ಉತ್ತರ ನೀಡಿದ ಈ ಫಕೀರನನ್ನು ಅರ್ಥ ಮಾಡಿಕೊಳ್ಳುವವರಿಗೆ ಸತ್ಯ, ಅಹಿಂಸೆ, ಸರಳ ಜೀವನದ ಪ್ರಾಥಮಿಕ ಪರಿಚಯವಾದರೂ ಬೇಕು. ಗಾಂಧಿಯನ್ನು ತಿಳಿಯುವುದರಿಂದ ಗಾಂಧಿಗೇನಾದರೂ ಲಾಭವಿದೆಯೋ ಗೊತ್ತಿಲ್ಲ ಆದರೆ ನಮಗಂತೂ ಇದೆ ಎನ್ನುವುದು ನನ್ನ ಬದುಕಿನ ಅನುಭವ, ಬೆಳಗಾವಿಗೆ ಹೊರಟವರಿಗೂ ಇದು ತಿಳಿಯಲಿ ಎನ್ನುವ ಹಾರೈಕೆ ನನ್ನದು.
ಡಾ.ಉದಯ ಕುಮಾರ ಇರ್ವತ್ತೂರು
ವಿಶ್ರಾಂತ ಪ್ರಾಂಶುಪಾಲರು
ಇದನ್ನೂ ಓದಿ- ಹೊಸ ಯುಜಿಸಿ ಕರಡು ನಿಯಮಾವಳಿ – ವಿಶ್ವವಿದ್ಯಾನಿಲಯಗಳನ್ನು ಲಯ ಮಾಡುವ ಹುನ್ನಾರ