ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ, ಹತ್ಯೆ ಪ್ರಕರಣ; ಆರೋಪಿಗೆ ಜೀವಾವಧಿ ಶಿಕ್ಷೆ

Most read

ಕೋಲ್ಕತ್ತ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತದ  ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದ ಪ್ರಕರಣದಲ್ಲಿ ಅಪರಾಧಿ ಸಂಜಯ್‌ ರಾಯ್‌ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ಸೆಕ್ಷನ್ 103(1)ರ ಅಡಿಯಲ್ಲಿ ಸಂಜಯ್‌ ರಾಯ್‌ಗೆ ಜೀವಾವಧಿ ಶಿಕ್ಷೆ ಹಾಗೂ ರೂ. 50,000 ದಂಡ ವಿಧಿಸಲಾಗಿದೆ ಎಂದು ಸಿಯಾಲ್ದ್‌  ನ್ಯಾಯಾಲಯದ ನ್ಯಾಯಾಧೀಶ ಅನಿರ್ಬನ್ ದಾಸ್ ತಿಳಿಸಿದ್ದಾರೆ. ಸಂತ್ರಸ್ತೆಯ ಕುಟುಂಬಕ್ಕೆ ರೂ.17 ಲಕ್ಷ ಪರಿಹಾರ ನೀಡುವಂತೆಯೂ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

2024r ಆಗಸ್ಟ್‌ನಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ರಾಯ್ ತಪ್ಪಿತಸ್ಥನೆಂದು ಶನಿವಾರ ನ್ಯಾಯಾಲಯ ಪರಿಗಣಿಸಿತ್ತು. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 64 (ಅತ್ಯಾಚಾರ), ಸೆಕ್ಷನ್‌ 66 (ಮಹಿಳೆಯ ಸಾವಿಗೆ ಕಾರಣವಾಗುವುದು) ಹಾಗೂ ಸೆಕ್ಷನ್ 103(1) (ಹತ್ಯೆ) ಅಡಿಯಲ್ಲಿ ರಾಯ್ ಅಪರಾಧಿ ಎಂದು ನ್ಯಾಯಾಧೀಶರು ಶನಿವಾರ ಆದೇಶ ಪ್ರಕಟಿಸಿದ್ದರು.

 2024ರ ಆಗಸ್ಟ್​ 9ರಂದು ಆಸ್ಪತ್ರೆಯ ಕೊಠಡಿಯೊಂದರಲ್ಲಿ 31 ವರ್ಷದ ತರಬೇತಿ ನಿರತ ವೈದ್ಯೆಯ ಶವ ಪತ್ತೆಯಾಗಿತ್ತು. ಈಕೆಯ ಮೇಲೆ ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಘಟನೆಯನ್ನು ವಿರೋಧಿಸಿ ಪಶ್ಚಿಮ ಬಂಗಾಳ ಮಾತ್ರವಲ್ಲದೆ ದೇಶಾದ್ಯಂತ ವೈದ್ಯರು ಮುಷ್ಕರ ನಡೆಸಿದ್ದರು. ಅಂತಿಮವಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಕಳೆದ ವರ್ಷ ನವೆಂಬರ್ 12ರಂದು ಸಿಬಿಐ ವಿಚಾರಣೆ ಆರಂಭಿಸಿತ್ತು. ಘಟನೆ ಸಂಬಂಧ ರಾಯ್‌ನನ್ನು ಆಗಸ್ಟ್‌ 10ರಂದು ಪೊಲೀಸರು ಬಂಧಿಸಿದ್ದರು. ಒಟ್ಟು 50 ಸಾಕ್ಷಿಗಳ ವಿಚಾರಣೆ ನಡೆದು ಜನವರಿ 9ರಂದು ವಿಚಾರಣೆ ಮುಕ್ತಾಯವಾಗಿತ್ತು.

More articles

Latest article