ಪಟ್ನಾ: ಬಿಜೆಪಿಯ ದಲಿತ, ಬುಡಕಟ್ಟು ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಸಂಸದರನ್ನು ಪಂಜರದಲ್ಲಿ ಇರಿಸಲಾಗಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಪಟ್ನಾದಲ್ಲಿ ನಡೆದ ಸಂವಿಧಾನ ಸುರಕ್ಷಾ ಸಮ್ಮೇಳನದಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು.
ದೇಶದ ಸಂಪತ್ತು ಇಬ್ಬರು, ಮೂವರಿಗೆ ಹಂಚಿಕೆಯಾಗಬೇಕು ಎಂದು ಎಲ್ಲಿ ಬರೆದಿದೆ? ಇಂದು ಭಾರತದಲ್ಲಿ ಯಾವುದೇ ಶಾಸಕ ಅಥವಾ ಸಂಸದನಿಗೆ ಅಧಿಕಾರವೇ ಇಲ್ಲ. ನಮ್ಮನ್ನು ಪಂಜರದಲ್ಲಿ ಇರಿಸಲಾಗಿದೆ ಎಂದು ಬಿಜೆಪಿ ಶಾಸಕ, ಸಂಸದರನ್ನು ಭೇಟಿಯಾದಾಗ ಅವರು ಹೇಳುತ್ತಾರೆ ಎಂದು ರಾಹುಲ್ ಹೇಳಿದ್ದಾರೆ.
ಗಂಗೆಯ ನೀರು ಎಲ್ಲ ಕಡೆ ಹರಿಯುತ್ತದೆ. ಹಾಗೆಯೇ ಸಂವಿಧಾನದ ತತ್ವ ಪ್ರತಿಯೊಬ್ಬರಿಗೂ, ದೇಶದ ಪ್ರತಿಯೊಂದು ಸಂಸ್ಥೆಗೂ ತಲುಪಬೇಕು ಎಂದು ಹೇಳಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು 1947ರ ಆಗಸ್ಟ್ 15ರಂದು ಅಲ್ಲ ಎಂದು ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಕೆಲವು ದಿನಗಳ ಹಿಂದೆ ಹೇಳಿದ್ದರು. ಇದು ದೇಶದ ಸಂವಿಧಾನವನ್ನು ಧಿಕ್ಕರಿಸಿದಂತೆ ಅಲ್ಲವೇ ಎಂದು ಪ್ರಶ್ನಿಸಿದ ಅವರು ದೇಶದ ಸಂವಿಧಾನದಿಂದ ಡಾ. ಅಂಬೇಡ್ಕರ್, ಭಗವಾನ್ ಬುದ್ಧ ಹಾಗೂ ಮಹಾತ್ಮಾ ಗಾಂಧಿಯವರ ತತ್ವಗಳನ್ನು ಅಳಿಸಿ ಹಾಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.