ಮಾಟಮಂತ್ರ ಶಂಕೆ; ಮಹಿಳೆಗೆ ಮೂತ್ರ ಕುಡಿಸಿ, ಬರೆ ಹಾಕಿದ ಖದೀಮರು

Most read

ಅಮರಾವತಿ: ಮಾಟಮಂತ್ರ ಮಾಡುತ್ತಾರೆ ಎಂದು ಶಂಕಿಸಿ 77 ವರ್ಷದ ಮಹಿಳೆಯನ್ನು ಥಳಿಸಿ, ಬಲವಂತವಾಗಿ ಮೂತ್ರ ಕುಡಿಸಿ, ಕಬ್ಬಿಣದ ಸಲಾಕೆಯಿಂದ ಬರೆ ಹಾಕಿರುವ ಪ್ರಕರಣ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಗ್ರಾಮವೊಂದರಲ್ಲಿ ವರದಿಯಾಗಿದೆ. ಜಿಲ್ಲೆಯ ಚಿಖಲ್ದಾರ ತಾಲ್ಲೂಕಿನ ರೆತ್ಯಖೇಡ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಸಂತ್ರಸ್ತೆಯ ಮಗ ಮತ್ತು ಸೊಸೆ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮತ್ತೆ ಮೇಲಾಧಿಕಾರಿಗಳನ್ನು ಭೇಟಿಯಾಗಿ ಕ್ರಮಕ್ಕೆ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ದೂರುದಾರರು ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ಪತ್ರ ಬರೆದಿದ್ದು, ಪ್ರಕರಣವನ್ನು ವಿವರಿಸಿದ್ದಾರೆ. ಸಂತ್ರಸ್ತೆಯು ಡಿಸೆಂಬರ್‌ 30ರಂದು ಮನೆಯಲ್ಲಿ ಒಬ್ಬರೇ ಇದ್ದರು. ಆಗ ಮನೆಗೆ ನುಗ್ಗಿದ ನೆರೆಹೊರೆಯವರು ಬಲವಂತವಾಗಿ ಅವರನ್ನು ಹಿಡಿದು, ಮಾಟಮಂತ್ರ ಮಾಡುತ್ತಿರುವೆ ಎಂದು ಆರೋಪಿಸಿ ಥಳಿಸಿದ್ದಾರೆ. ಮಹಿಳೆ ಮೇಲೆ ದೊಣ್ಣೆಯಿಂದ ಹೊಡೆದು, ಕೈಕಾಲುಗಳ ಮೇಲೆ ಕಬ್ಬಿಣದ ಸಲಾಕೆಯಿಂದ ಬರೆ ಹಾಕಿದ್ದಾರೆ. ಬಲವಂತವಾಗಿ ಮೂತ್ರ ಕುಡಿಸಿ, ನಾಯಿಯ ಮಲ ತಿನ್ನಿಸಿ, ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ ಎಂದೂ ದೂರಿನಲ್ಲಿ ವಿವರಿಸಿದ್ದಾರೆ.

ಕೆಲಸದ ನಿಮಿತ್ತ ಹೊರ ಹೋಗಿದ್ದ ಸಂತ್ರಸ್ತೆಯ ಮಗ ಮತ್ತು ಸೊಸೆ, ವಿಷಯ ತಿಳಿಯುತ್ತಿದ್ದಂತೆ ಜನವರಿ 5ರಂದು ಪೊಲೀಸರಿಗೆ ದೂರು ನೀಡಿದ್ದಾರೆ.  ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಅಮರಾವತಿ ಎಸ್‌.ಪಿ. ವಿಶಾಲ್‌ ಆನಂದ್‌, ಇದು ಗಂಭೀರವಾದ ವಿಚಾರ. ದೂರುದಾರರು ಶುಕ್ರವಾರ ತಮ್ಮನ್ನು ಭೇಟಿ ಮಾಡಿದ್ದಾರೆ. ಘಟನೆ ನಡೆದಿರುವ ಗ್ರಾಮವು ಕಾಡಿನ ಅಂಚಿನಲ್ಲಿದ್ದು, ಪರಿಶೀಲನೆ ಸಲುವಾಗಿ ಪೊಲೀಸ್‌ ಅಧಿಕಾರಿಗಳನ್ನು ಕಳುಹಿಸಲಾಗಿದೆ.ಅವರು ನೀಡುವ ವರದಿ ಪ್ರಕಾರ  ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ದೂರು ದಾಖಲಾಗಿರುವ ಠಾಣೆಯ ಪೊಲೀಸರು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಭರವಸೆ ನೀಡಿದ್ದಾರೆ.

More articles

Latest article