ಶಿವಮೊಗ್ಗ: ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಂಡ ಉದ್ದೇಶ ರಾಜ್ಯದ ಮಟ್ಟಿಗೆ ನಿರೀಕ್ಷಿತ ಫಲಿತಾಂಶವನ್ನು ನೀಡದಿರುವ ಹಿನ್ನೆಲೆಯಲ್ಲಿ ಕರ್ನಾಟಕವು ದ್ವಿಭಾಷೆಯ ಸೂತ್ರವನ್ನು ಅಳವಡಿಸಿಕೊಳ್ಳಲು ಇದು ಸಕಾಲವಾಗಿದೆಯೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.
ಅವರು ಇಂದು ಶಿವಮೊಗ್ಗಕ್ಕೆ ಭೇಟಿ ನೀಡಿ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ಹಾಗೂ ಸರ್ಕಾರದ ಪ್ರಮುಖ ಇಲಾಖಾ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ನೆರೆಯ ರಾಜ್ಯ ತಮಿಳುನಾಡು ದ್ವಿಭಾಷಾ ಸೂತ್ರವನ್ನು ಅನುಸರಿಸಿ ತನ್ನ ಭಾಷಾ ಅಸ್ಮಿತೆಯನ್ನು ಬೇರೆಲ್ಲ ಭಾಷೆಗಳಿಗಿಂತ ಸಮರ್ಥವಾಗಿ ಕಾಪಾಡಿಕೊಂಡಿದೆ. ಆದರೆ ಕರ್ನಾಟಕವು ತ್ರಿಭಾಷಾ ಸೂತ್ರವನ್ನು ಅನುಸರಿಸಿದ ಹಿನ್ನೆಲೆಯ ಲಾಭ-ನಷ್ಟಗಳನ್ನು ಪರಿಶೀಲಿಸಿದಾಗ ನಮ್ಮ ರಾಜ್ಯಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಹಾಗಾಗಿ ಕರ್ನಾಟಕವೂ ಕೂಡ ಕನ್ನಡದ ಭಾಷಾ ಬೆಳವಣಿಗೆ ಮತ್ತು ವಿಕಾಸದ ದೃಷ್ಟಿಯಿಂದ ದ್ವಿಭಾಷಾ ಸೂತ್ರವನ್ನೇ ಅನುಸರಿಸುವ ಅಗತ್ಯವಿದೆ ಎಂದರು.
ಹೊರರಾಜ್ಯದಲ್ಲಿರುವ ಕನ್ನಡಪೀಠಗಳು ಸಮರ್ಥವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಆಡಳಿತಾರೂಢ ರಾಜ್ಯ ಸರ್ಕಾರವು ಪ್ರತಿ ವಿಶ್ವವಿದ್ಯಾಲಯಕ್ಕೆ ಒಂದೇ ಬಾರಿಗೆ ಹತ್ತು ಕೋಟಿ ರೂ.ಗಳ ಇಡುಗಂಟನ್ನು ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದ ಬಿಳಿಮಲೆ, ಹೊರ ರಾಜ್ಯ ಮತ್ತು ದೇಶಗಳಲ್ಲಿ ಕನ್ನಡ ಪೀಠಗಳನ್ನು ತೆರೆಯಬೇಕು. ಅದಕ್ಕಾಗಿ ಅಗತ್ಯವಿರುವ ಅನುದಾನವನ್ನು ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮುಂದಿನ ಬಜೆಟ್‌ನೊಳಗಾಗಿ ಕಾಯ್ದಿರಿಸುವ ವಿಶ್ವಾಸವಿರುವುದಾಗಿ ತಿಳಿಸಿದರು. ಅನ್ಯಭಾಷಿಕರು ಸರಳವಾಗಿ ಕನ್ನಡಭಾಷೆ ಕಲಿಯಲು ಅನುಕೂಲವಾಗುವಂತೆ 36 ಗಂಟೆಗಳ ಅವಧಿಯ ಪಠ್ಯಕ್ರಮವನ್ನು ಪ್ರಾಧಿಕಾರದ ವತಿಯಿಂದ ತಯಾರಿಸಲಾಗಿದ್ದು, ಬೆಂಗಳೂರಿನ 30 ಕಲಿಕಾ ಕೇಂದ್ರಗಳಲ್ಲಿ ಸುಮಾರು 600 ಮಲೆಯಾಳಿಗಳು ಹಾಗೂ ಇತರೆ ಅಪಾರ್ಟ್ ಮಂಟ್ ಗಳಲ್ಲಿ ವಾಸವಾಗಿರುವ ಅಸಂಖ್ಯಾತ ಜನರಿಗೆ ಕನ್ನಡ ಕಲಿಕಾ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಕಲಿಕಾ ಕೇಂದ್ರಗಳ ಸಂಖ್ಯೆಯನ್ನು 100ಕ್ಕೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಸ್ಥಳೀಯ ಜನರು ತಮ್ಮ ಭಾಷೆಯ ಸೊಗಡನ್ನು ಸಂಭ್ರಮಿಸುವಂತೆ ಹಾಗೂ ಇಲ್ಲಿನ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗೆ ಸಂಬಂಧಿಸಿದಂತೆ ಸ್ಥಗಿತಗೊಂಡಿರುವ ಸಹ್ಯಾದ್ರಿ ಉತ್ಸವವನ್ನು ಪುನರ್ ಆರಂಭಿಸಬೇಕು. ಅದಕ್ಕಾಗಿ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದ ಅವರು, ಈ ಕುರಿತಂತೆ ಪ್ರಾಧಿಕಾರ ಸರ್ಕಾರದಿಂದ ಅನುಮತಿ ಪಡೆಯುವಲ್ಲಿ ತನ್ನ ಸಹಕಾರವನ್ನು ವಿಸ್ತರಿಸಲಿದೆ ಎಂದರು.
ಹೊಸದಾಗಿ ಆರಂಭಗೊಳ್ಳುತ್ತಿರುವ ಕೈಗಾರಿಕಾ ಘಟಕಗಳು, ಬಹುರಾಷ್ಟ್ರೀಯ ಕಂಪನಿಗಳು ಹಾಗೂ ವಿಮಾನ ನಿಲ್ದಾಣ ಮುಂತಾದ ಸ್ಥಳಗಳಲ್ಲಿ ಕನ್ನಡ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಕೇವಲ ಸರ್ಕಾರಿ ಆದೇಶಗಳಿಂದ ಕನ್ನಡದ ಉಳಿವು ಮತ್ತು ವಿಕಾಸ ಸಾದ್ಯವಿಲ್ಲ. ಕನ್ನಡವನ್ನು ಹೃದಯದ ಭಾಷೆಯಾಗಿ ಪರಿಗಣಿಸಿ, ದೇಶದ ಇತರೆ ರಾಜ್ಯಗಳಿಗೆ ಮಾದರಿಯಾಗುವಂತೆ ಇಲ್ಲಿನ ಜವಾಬ್ದಾರಿಯುತ ಅಧಿಕಾರಿಗಳು, ಜನಪ್ರತಿನಿಧಿಗಳು ಕನ್ನಡ ಕಟ್ಟುವ ಕೆಲಸವನ್ನು ಮಾಡಬೇಕಾಗಿದೆ ಎಂದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅನ್ಯಭಾಷಿಕ ನೌಕರರ ನೇಮಕಾತಿಯಿಂದಾಗಿ ಸಾಮಾಜಿಕ ಸಾಮರಸ್ಯ ಕದಡುತ್ತಿದೆ. ಬ್ಯಾಂಕುಗಳ ನೇಮಕಾತಿ ಪರೀಕ್ಷೆಗಳೂ ಕೂಡ ಆಂಗ್ಲ ಮತ್ತು ಹಿಂದಿ ಬಾಷೆಯಲ್ಲಿ ನಡೆಯುತ್ತಿರುವುದರಿಂದ ಕನ್ನಡಿಗರು ಬ್ಯಾಂಕುಗಳ ನೇಮಕಾತಿ ಪರೀಕ್ಷೆಯಿಂದ ಹೊರಗುಳಿಯುತ್ತಿದ್ದಾರೆ. ಈ ನ್ಯೂನತೆಯನ್ನು ಸರಿಪಡಿಸಲು ಲೀಡ್ ಬ್ಯಾಂಕ್ ಪ್ರತಿನಿಧಿಗಳು ಸೂಚನೆ ನೀಡಬೇಕಾದ ಅಗತ್ಯವಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್, ಸದಸ್ಯರಾದ ಡಾ.ರಾಮಚಂದ್ರಪ್ಪ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಫಣಿಕುಮಾರ್, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್. ಮತ್ತಿತರರು ಉಪಸ್ಥಿತರಿದ್ದರು.