ಬೆಂಗಳೂರು: ಬೆಂಗಳೂರು ಅರಮನೆಯನ್ನು ವಶಪಡಿಸಿಕೊಂಡಿರುವ 1997ರ ಕಾಯ್ದೆಯ ಸಿಂಧುತ್ವವನ್ನು ಎತ್ತಿ ಹಿಡಿಯಲು ಸುಪ್ರೀಂಕೋರ್ಟ್ ಮುಂದೆ ಕರ್ನಾಟಕ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂದು ಸಲ್ಲಿಸಲಾಗಿರುವ ಮಧ್ಯಂತರ ಅರ್ಜಿಯನ್ನು ಪರಿಗಣಿಸಬೇಕೆಂದು ಕೋರಲು ರಾಜ್ಯ ಸಚಿವ ಸಂಪುಟ ಇಂದು ನಿರ್ಧರಿಸಿದೆ. ಈ ಹಿಂದೆ ಹೈಕೋರ್ಟ್ ಅನುಮೋದಿಸಿದ ಕರ್ನಾಟಕ ವಿಧಾನ ಮಂಡಲ ಅಂಗೀಕರಿಸಿದ ಅಧಿನಿಯಮವನ್ನು ಎತ್ತಿಹಿಡಿಯಲು 1997ರಲ್ಲಿ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಈಗಾಗಲೇ ಮಧ್ಯಂತರ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ್ ಸಚಿವ ಸಂಪುಟ ಸಭೆಯ ನಂತರ ಸಂಪುಟದ ನಿರ್ಣಯಗಳನ್ನು ಕುರಿತು ವಿವರಿಸಿದರು.
ಸುಪ್ರೀಂಕೋರ್ಟ್ ದಿನಾಂಕ: 10.12.2024ರ ತೀರ್ಪಿನಂತೆ ಬೆಂಗಳೂರು ಅರಮನೆ ಮೈದಾನಕ್ಕೆ ಸೇರಿದ 15 ಎಕರೆ 17.5 ಗುಂಟೆ ಜಮೀನನ್ನು ಉಪಯೋಗಿಸಿಕೊಳ್ಳುವುದಕ್ಕೆ ನಿಗಧಿಪಡಿಸಿದ ಟಿ.ಡಿ.ಆರ್ ದರದ ಬಗ್ಗೆ ಸಚಿವ ಸಂಪುಟ ಇಂದು ಚರ್ಚೆ ನಡೆಸಿದೆ. ನ್ಯಾಯಾಂಗ ನಿಂದನೆ ಅರ್ಜಿಯ ವಿಷಯದಲ್ಲಿ ಕಾನೂನಿನ ಪ್ರಕಾರ ಅಗತ್ಯ ಕ್ರಮ ವಹಿಸಲು ಸಚಿವ ಸಂಪುಟವು ಸಂಬಂಧಪಟ್ಟ ಇಲಾಖೆಗೆ ನಿರ್ದೇಶಿಸಿದೆ. ಸುಪ್ರೀಂಕೋರ್ಟ್ ದಿನಾಂಕ: 21.12.2014 ರ ಆದೇಶಾನುಸಾರ ರೂ.2,83,500 ಪ್ರ.ಚ.ಮೀಟರ್‌ಗೆ (ಬಳ್ಳಾರಿ ರಸ್ತೆ) ಮತ್ತು ರೂ. 2,04,000 ಪ್ರ.ಚ.ಮೀಟರ್‌ಗೆ (ಜಯಮಹಲ್ ರಸ್ತೆ) ಮೌಲ್ಯದಂತೆ ಟಿ.ಡಿ.ಆರ್ ವನ್ನು ನೀಡಲು ಅಂದಾಜು ರೂ. 3011.00 ಕೋಟಿಗಳ ಆರ್ಥಿಕ ಹೊರೆ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಅಪೀಲು ಸಲ್ಲಿಸಿದ್ದರೂ ಸಹ ಅದನ್ನು ತಿರಸ್ಕರಿಸಲಾಗಿರುತ್ತದೆ.
ಅಲ್ಲದೇ, ಸುಪ್ರೀಂಕೋರ್ಟ್ 2001ರ ಆದೇಶವನ್ನು ಉಲ್ಲಂಘಿಸಿ ಸುಮಾರು ಬೆಂಗಳೂರು ಅರಮನೆಯ 2 ಲಕ್ಷ ಚ.ಮೀಟರ್ ವ್ಯಾಪ್ತಿಯಲ್ಲಿ ಖಾಯಂ ಕಟ್ಟಡಗಳನ್ನು ನಿರ್ಮಿಸಿರುವ ಮಹಾರಾಜರ ಉತ್ತರಾಧಿಕಾರಿಗಳ ಮೇಲೆ ನ್ಯಾಯಾಂಗದ ನಿಂದನೆ ಅರ್ಜಿಯನ್ನು ಸಲ್ಲಿಸಲು ಸಹ ಸಚಿವ ಸಂಪುಟ ತೀರ್ಮಾನಿಸಿದೆ. 15 ದಿನಗಳಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಬಗ್ಗೆ ದಿನಾಂಕ: 09.01.2025 ರಂದು ಸರ್ಕಾರದ ವತಿಯಿಂದ ನೋಟಿಸ್‌ಗಳನ್ನು ಜಾರಿ ಮಾಡಲಾಗಿದೆ ಎಂದು ಸಚಿವರು ವಿವರಿಸಿದರು.
ಇಂತಹ ಸ್ಥಳದಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಸರ್ಕಾರದಿಂದ ಇನ್ನು ಮುಂದೆ ಅನುಮತಿ ನೀಡಲು ಸಚಿವ ಸಂಪುಟ ನಿರ್ಬಂಧ ವಿಧಿಸಿದೆ.
ಕರ್ನಾಟಕ ರಾಜ್ಯವು ಬೆಂಗಳೂರು ಅರಮನೆ (ಭೂಸ್ವಾಧಿನ ಮತ್ತು ವರ್ಗಾವಣೆ) ಅಧಿನಿಯಮ, 1996 ಎಂದು ಕರೆಯಲ್ಪಡುವ ಶಾಸನವನ್ನು ಅಧಿನಿಯಮಿಸಿ ದಿನಾಂಕ: 21.11.1996 ರಿಂದ ಜಾರಿಗೆ ಬರುವಂತೆ ಬೆಂಗಳೂರು ಅರಮನೆಗೆ ಸೇರಿದ ಎಲ್ಲಾ ಸ್ಥಿರ ಚರ ಸ್ವತ್ತುಗಳ (ಕಾಯ್ದೆಯಲ್ಲಿ ನಿರ್ಧಿಷ್ಟಪಡಿಸಲಾದ ಸ್ವತ್ತುಗಳು) ಎಲ್ಲಾ ವಿಧವಾದ ಹಕ್ಕು ರಾಜ್ಯ ಸರ್ಕಾರದಲ್ಲಿ ವಿಹಿತವಾಗುತ್ತದೆ ಎಂದು ತಿಳಿಸಲಾಗಿತ್ತು. ಈ ಅಧಿನಿಯಮವನ್ನು ಪ್ರಶ್ನಿಸಿ ರಿಟ್ ಅರ್ಜಿ ಸಂಖ್ಯೆ: 3383/1997 ರಲ್ಲಿ ಮತ್ತು ಇತರೆ ಸಂಬಂಧಿತ ವಿಷಯಗಳಲ್ಲಿ ಕರ್ನಾಟಕ ಹೈಕೋರ್ಟ್ ಮುಂದೆ ಪ್ರಶ್ನಿಸಿದ ಸಂದರ್ಭದಲ್ಲಿ ರಾಜ್ಯದ ಶಾಸನದ ಮಾನ್ಯತೆಯನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಹೈಕೋರ್ಟ್ ನ ಈ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ವಿಶೇಷ ಅನುಮತಿ ಅರ್ಜಿ (ಸಿವಿಲ್) ಸಂಖ್ಯೆ: 8650/1997 ರಲ್ಲಿ ಮತ್ತು ಇತರೆ ಸಂಬಂಧಿತ ವಿಷಯಗಳಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಿರುತ್ತಾರೆ. ಸುಪ್ರೀಂಕೋರ್ಟ್ ಈ ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ ನೀಡಿದೆ. ಈ ಅರ್ಜಿ ವಿಲೇವಾರಿ ಆಗುವವರೆಗೆ ಮಾಲಿಕತ್ವ ಪ್ರಶ್ನೆಯು ಇತ್ಯರ್ಥವಾಗುವವರೆಗೆ ಟಿ.ಡಿ.ಆರ್ ಪ್ರಕರಣವನ್ನು ಕಾನೂನು ಪ್ರಕಾರ ನಿರ್ವಹಿಸಲು ಸಚಿವ ಸಂಪುಟ ನಿರ್ದೇಶಿಸಿದೆ.
ಬೆಂಗಳೂರಿನ ಆನಂದರಾವ್ ವೃತ್ತದ ಬಳಿ ಅವಳಿ ಗೋಪುರ ನಿರ್ಮಿಸಲು ಸಂಪುಟ ಅಸ್ತು ಎಂದಿದೆ. 8.72 ಎಕರೆ ಪ್ರದೇಶದಲ್ಲಿ ಅವಳಿ ಗೋಪುರ ನಿರ್ಮಿಸುವ ಜವಬ್ಧಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲು ನಿರ್ಧರಿಸಲಾಗಿದೆ. ಅವಳಿ ಗೋಪುರದಲ್ಲಿ ಸರ್ಕಾರಿ ಕಚೇರಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.