ಬೀದರ್: ನಗರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ ನಡೆದಿದೆ. ಜಿಲ್ಲಾ ನ್ಯಾಯಾಲಯ ಹಾಗೂ ಜಿಲ್ಲಾಧಿಕಾರಿ ಕಚೇರಿ ಸಮೀಪವೇ ಇರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್.ಬಿ.ಐ) ಸೆಕ್ಯೂರಿಟಿ ಏಜೆನ್ಸಿ ಸಿಬ್ಬಂದಿ ಮೇಲೆ ಅಪರಿಚಿತರು ಖಾರದ ಪುಡಿ ಎರಚಿ, ಗುಂಡಿನ ದಾಳಿ ನಡೆಸಿದ್ದರಿಂದ ಒಬ್ಬ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು ಗಿರೀಶ ಎಂದು ಗುರುತಿಸಲಾಗಿದೆ. ಎಟಿಎಂಗೆ ಹಣ ಹಾಕುವ ಪಿಸಿಎಸ್ ಏಜೆನ್ಸಿಯ ಸಿಬ್ಬಂದಿ ಬ್ಯಾಂಕ್‌ನ ಎದುರು ತಮ್ಮ ವಾಹನ ನಿಲ್ಲಿಸಿ, ಎಟಿಎಂಗೆ ಹಣ ತುಂಬಲು ವಾಹನದ ಬಾಗಿಲು ತೆಗೆಯುತ್ತಿದ್ದಂತೆ ಅವರ ಮೇಲೆ ಐದು ಸುತ್ತು ಗುಂಡಿನ ದಾಳಿಯಾಗಿದೆ. ಗಾಯಗೊಂಡಿರುವ ಭದ್ರತಾ ಸಿಬ್ಬಂದಿ ಶಿವಕುಮಾರ್ ಎಂಬುವವರಿಗೆ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ವಿಷಯ ತಿಳಿದು ನ್ಯಾಯಾಲಯ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ್ದ ನೂರಾರು ಜನ ಅಲ್ಲಿ ಜಮಾಯಿಸಿದ್ದರು. ಇಡೀ ಪ್ರದೆಶದಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಲಾಗಿದೆ. ಪೊಲೀಸರು ಜನರನ್ನು ಚದುರಿಸಿದ್ದಾರೆ. ಏಜೆನ್ಸಿ ಸಿಬ್ಬಂದಿ ವಾಹನದಲ್ಲಿ ಹಣದ ಸಮೇತ ಬ್ಯಾಂಕಿಗೆ ಬಂದಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಅಪರಿಚಿತರು ಹಣ ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಹಣ ಕೊಡದಿದ್ದಾಗ ಖಾರದ ಪುಡಿ ಎರಚಿ, ಬಳಿಕ ಗುಂಡಿನ ದಾಳಿ ನಡೆಸಿ, ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಜೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ವ್ಯಕ್ತಿಯನ್ನು ಬೀದರ್ ನ ಚಿದ್ರಿ ನಿವಾಸಿ ಗಿರಿ ವೆಂಕಟೇಶ (40) ಎಂದು ಗುರುತಿಸಲಾಗಿದೆ. ದುಷ್ಕರ್ಮಿಗಳು ರೂ. 93 ಲಕ್ಷದ ಪೆಟ್ಟಿಗೆಯನ್ನು ಕಸಿದುಕೊಂಡು ಹೋಗಿದ್ದಾರೆ ಎಂದು ಬ್ಯಾಂಕಿನ ಮೂಲಗಳು ತಿಳಿಸಿವೆ.