ಬೆಂಗಳೂರು: ನಗರದ ವಿವಿಧ ಪೊಲೀಸ್ ಠಾಣೆಗಳ ಪೊಲೀಸರು ಡಿಸೆಂಬರ್ನಲ್ಲಿ ಕಾರ್ಯಾಚರಣೆ ನಡೆಸಿ, ಡ್ರಗ್ಸ್ ಪೂರೈಕೆ ಮಾಡುತ್ತಿದ್ದವರ ವಿರುದ್ಧ ಮಾದಕ ದ್ರವ್ಯ ನಿಗ್ರಹ ಕಾಯ್ದೆ ಅಡಿ (ಎನ್ಡಿಪಿಎಸ್) 62 ಪ್ರಕರಣ ದಾಖಲಿಸಿಕೊಂಡು, 85 ಆರೋಪಿಗಳನ್ನು ಬಂಧಿಸಿದ್ದಾರೆ.
ಇವರಲ್ಲಿ ಡ್ರಗ್ಸ್ ಪೂರೈಸುತ್ತಿದ್ದ ಮೂವರು ವಿದೇಶಿ ಪ್ರಜೆಗಳೂ ಸೇರಿದ್ದಾರೆ. ಬಂಧಿತರಿಂದ 241 ಕೆ.ಜಿ. ಗಾಂಜಾ, 48 ಗ್ರಾಂ. ಕೊಕೇನ್, 130 ಗ್ರಾಂ. ಚರಸ್, 12 ಕೆ.ಜಿ ಎಂಡಿಎಂಎ, 350 ಎಕ್ಸ್ಟೆಸಿ ಮಾತ್ರೆಗಳು, 40 ಎಲ್ಎಸ್ಡಿ ಸ್ಟ್ರಿಪ್ಸ್ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಡಿಸೆಂಬರ್ ನಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದವರ ವಿರುದ್ಧವೂ ನಿರಂತರ ಕಾರ್ಯಾಚರಣೆ ನಡೆಸಲಾಗಿತ್ತು. ಮಟ್ಕಾ, ಬೆಟ್ಟಿಂಗ್, ಅಕ್ರಮ ಮದ್ಯ ಮಾರಾಟ, ಅಕ್ರಮವಾಗಿ ಶಸ್ತ್ರಾಸ್ತ್ರ ಪೂರೈಕೆ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ವಿರುದ್ಧ 325 ಪ್ರಕರಣ ದಾಖಲಿಸಿಕೊಂಡು, 411 ಮಂದಿಯನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ 34 ಮಂದಿಯನ್ನು ಬಂಧಿಸಿರುವುದೂ ಕಳೆದ ತಿಂಗಳ ವಿಶೇಷವಾಗಿದೆ.