ಚಿಕ್ಕಬಳ್ಳಾಪುರ: ಗುಡಿಬಂಡೆ ಸಮೀಪ ಸಂಭವಿಸಿದ ಭೀಕರ ಅಮಘಾತದಲ್ಲಿ ಪತ್ರಕರ್ತ ಭರತ್ ಅಸು ನೀಗಿದ್ದಾರೆ. ಭರತ್ (32) ಬೆಂಗಳೂರಿನ ದಿನ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ಕೆಲಸ ಮಾಡುತಿದ್ದರು. ಬೆಂಗಳೂರಿನಲ್ಲಿ ವಾಸವಿದ್ದ ಭರತ್, ವಾರಾಂತ್ಯದ ಹಿನ್ನೆಲೆಯಲ್ಲಿ ಸ್ವಗ್ರಾಮ ಗುಡಿಬಂಡೆಗೆ ಆಗಮಿಸಿದ್ದರು. ಅಲ್ಲಿಂದ ತಡರಾತ್ರಿ ಬಾಗೇಪಲ್ಲಿಗೆ ತೆರಳುವಾಗ ಅಫಘಾತ ಸಂಭವಿಸಿದೆ. ಮಾಚಹಳ್ಳಿ ಕೆರೆಯ ಏರಿಯ ಮೇಲೆ ಇದ್ದ ದೇವರ ಕಲ್ಲಿನ ಗುಡಿಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ದೇವರ ಗುಡಿಯ ಮೇಲಿನ ಚಪ್ಪಡಿ ಕಲ್ಲು ಕಾರಿನೊಳಗೆ ಬಿದ್ದಿದೆ. ಇದರ ಪರಿಣಾಮ ತಲೆಗೆ ಗಂಭೀರ ಗಾಯವಾಗಿ ಭರತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ತಿಂಗಳು 9 ತಿಂಗಳ ಮಗಳ ನಾಮಕರಣ ಸಿದ್ಧತೆಯಲ್ಲಿ ಭರತ್ ತೊಡಗಿಸಿಕೊಂಡಿದ್ದರು. ಆದರೆ ದುರದೃಷ್ಟವಶಾತ್ ಭರತ್ ಸಾವನ್ನಪ್ಪಿದ್ದಾರೆ. ಇವರ ಅಗಲಿಕೆಗೆ ಪತ್ರಕರ್ತ ಮಿತ್ರರು ಕಂಬನಿ ಮಿಡಿದಿದ್ದಾರೆ.