ಉದ್ರೇಕಗೊಳಿಸದೆ ವಿವೇಕ ಮೂಡಿಸುತ್ತಿರುವ ಕನ್ನಡ ಪ್ಲಾನೆಟ್‌ ಸುದ್ದಿ ಮಾಧ್ಯಮಕ್ಕೆ ಬರಗೂರು ರಾಮಚಂದ್ರಪ್ಪ ಮೆಚ್ಚುಗೆ

Most read

ಬೆಂಗಳೂರು: ಮಾಧ್ಯಮಗಳು ಉದ್ರೇಕಗೊಳಿಸುವ ಕೆಲಸ ಮಾಡಬಾರದು. ವಿವೇಕಗೊಳಿಸುವ ಕೆಲಸ ಮಾಡಬೇಕು. ಆದರೆ ಮುಖ್ಯವಾಹಿನಿಯ ಮಾಧ್ಯಮಗಳು  ಉದ್ರೇಕಗೊಳಿಸುವ ಸುದ್ದಿ ಮಾಧ್ಯಮಗಳಾಗಿ ಪರಿವರ್ತನೆಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಕನ್ನಡ ಪ್ಲಾನೆಟ್‌ ವಿವೇಕಗೊಳಿಸುವ ಕೆಲಸ ಮಾಡುತ್ತಿದೆ ಎಂದು ಖ್ಯಾತ ಸಾಹಿತಿ, ಚಿಂತಕ, ನಾಡೋಜ ಬರಗೂರು ರಾಮಚಂದ್ರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಪ್ಲಾನೆಟ್‌ ಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ  ಆಯೋಜಿಸಲಾಗಿದ್ದ ಭಾರತ ಸಂವಿದಾನ ಸಂಭ್ರಮ-75, ಕನ್ನಡ ಪ್ಲಾನೆಟ್‌ ಕಾನ್‌ ಕ್ಲೇವ್-‌ 2025 ಎಂಬ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮಾಧ್ಯಮಗಳು ಬದಲಾಗಿವೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಉದ್ರೇಕಗೊಳಿಸುವ ಸುದ್ದಿಗಳನ್ನೇ ಪ್ರಚಾರ ಮಾಡಲಾಗುತ್ತಿದೆ. ರಾಜಕೀಯ, ಇಡೀ ದೇಶದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಬೌದ್ದಿಕ ಬಿಕ್ಕಟ್ಟು ಆವರಿಸಿದೆ. ಚಾನೆಲ್‌ ಗಳ ಆಂಕರ್‌ ಗಳು ಪಕ್ಷಗಳ ವಕ್ತಾರರಾಗಿ ಬದಲಾಗಿದ್ದಾರೆ. ವಸ್ತು ಸ್ಥಿತಿ ಹೀಗಿರುವಾಗ ಸಂವಾದ ಅಸಾಧ್ಯವಾಗಿದೆ. ವಿಶ್ಲೇಷಣೆ ಹೆಸರಿನಲ್ಲಿ ಎಲ್ಲ ಆಯಾಮಗಳಿಂದಲೂ ದಾಳಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಪ್ಲಾನೆಟ್‌ ವಿವೇಕ ಮೂಡಿಸುವ ಕೆಲಸ ಮಾಡುತ್ತಿದೆ. ಯಾವುದೇ ಹಂತದಲ್ಲೂ ಉದ್ರೇಕ ಗೊಳಿಸುವ ಕೆಲಸ ಮಾಡುತ್ತಿಲ್ಲ. ಇದಕ್ಕಾಗಿ ಕನ್ನಡ ಪ್ಲಾನೆಟ್‌ ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದರು.

ಮತೀಯತೆ, ಮಠೀಯತೆ ಹೆಚ್ಚುತ್ತಿದೆ:

ಪ್ರೀತಿಯ ಅಂಗಡಿ ತೆರೆಯಬೇಕು ಎಂದು ಆಗ್ರಹಪಡಿಸುವ  ಹಂತದಲ್ಲಿ ದ್ವೇಷದ ಬಜಾರ್‌ ಗಳು ಸೃಷ್ಟಿಯಾಗುತ್ತಿವೆ. ಮಠೀಯತೆ ಮತೀಯತೆ ಹೆಚ್ಚುತ್ತಿದೆ ಎಂದು ವಿಷಾದಿಸಿದ ಅವರು ಜಾತಿ ವಿನಾಶ ಆಗುವುದಿರಲಿ, ಜಾತಿ ವಿಕಾಸ ಹೆಚ್ಚುತ್ತಿದೆ ಎಂದರು. ನಂತರ ಅವರು ಪ್ರಜಾಪ್ರಭುತ್ವ ಅಳಿವಿನ ಹಾದಿಯಲ್ಲಿ ಹೇಗೆ ಸಾಗುತ್ತಿದೆ ಎಂದು ವಿಶ್ಲೇಷಿಸಿದರು. ಪ್ರಜಾಪ್ರಭುತ್ವದಲ್ಲಿ ಚುನಾವಣೆ ಸಾಧನೆ ಮಾತ್ರ. ಅಂತಿಮ ಅಲ್ಲ ಎನ್ನುವುದನ್ನು ಮನಗಾಣಬೇಕು. ಜನಕೇಂದ್ರಿತ ಪ್ರಜಾಪ್ರಭುತ್ವ ಕಣ್ಮರೆಯಾಗುತ್ತಿದ್ದು, ವ್ಯಕ್ತಿ ಕೇಂದ್ರಿತ ವೈಭವೀಕರಣ ಆಗುತ್ತಿದೆ. ದೇಶದ ಚಿಂತನೆ ಎಂದರೆ ಪಕ್ಷದ ಚಿಂತನೆ ಆಗಿದೆ ಎಂದು ಹೇಳಿದರು.

ತನ್ನನ್ನು ಟೀಕೆ ಮಾಡುವವರನ್ನು ಗೌರವಿಸುವುದೇ ಪ್ರಜಾಪ್ರಭುತ್ವ ಎಂದು ನೆಹರೂ, ವಾಲ್ಟರ್‌ ಲಿಂಕನ್‌ ಹೇಳಿದ್ದರು. ಆದರೆ ಇಂದು ಆದರೆ ಕಳೆದ ಒಂದು ದಶಕದಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಕಟಿಸುವ ಸ್ವತಂತ್ರವೇ ಇಲ್ಲವಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ಲಾನೆಟ್‌ ಕಾರ್ಯವೈಖರಿಗೆ ಯತೀಂದ್ರ ಸಿದ್ದರಾಮಯ್ಯ ಶ್ಲಾಘನೆ:

ಕನ್ನಡ ಪ್ಲಾನೆಟ್‌ ಸಂಪಾದಕ ಹರ್ಷ ಕುಮಾರ್‌ ಕುಗ್ವೆ ಅವರು ರಚಿಸಿರುವ ನಮ್ಮ ಸಂವಿಧಾನ ಕೃತಿ ಬಿಡುಗಡೆ ಮಾಡಿ ಮಾತನಾಡಿದ ವಿಧಾನಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು, ಕನ್ನಡ ಪ್ಲಾನೆಟ್‌ ನ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಪ್ಲಾನೆಟ್‌ ನ ಪ್ರಧಾನ ಸಂಪಾದಕರುಗಳು ಮತ್ತು ಸಿಬ್ಬಂದಿ ತತ್ವ ಮತ್ತು ಮೌಲ್ಯಗಳಿಗೆ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಕನ್ನಡ ಪ್ಲಾನೆಟ್‌ ಗೆ ನಾವು ಬೆಂಬಲ ನೀಡಬೇಕು ಎಂದರು.

ನಂತರ ಅವರು ಕಳೆದ ಹತ್ತು ವರ್ಷಗಳಿಂದ ಉಂಟಾಗಿರುವ ರಾಜಕೀಯ ಸ್ಥಿತ್ಯಂತರ ಕುರಿತು ಮಾತನಾಡಿದರು. ದೇಶದ ಬಹುತೇಕ ಮಾಧ್ಯಮಗಳು ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಆಳುವ ಪಕ್ಷಕ್ಕೆ ಶರಣಾಗಿವೆ. ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ. ನ್ಯಾಯಾಂಗವೂ ಅದೇ ಹಾದಿ ಹಿಡಿದಿದೆ. ಮಾಧ್ಯಮಗಳು ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದೆ. ಆದ್ದರಿಂದ ಮುಖ್ಯವಾಹಿನಿ ಮಾಧ್ಯಮಗಳನ್ನು ನೆಚ್ಚಕೊಂಡರೆ ಪ್ರಯೋಜನ ಆಗುವುದಿಲ್ಲ. ಆದ್ದರಿಂದ ಕನ್ನಡ ಪ್ಲಾನೆಟ್‌ ನಂತಹ ಸ್ವತಂತ್ರ ಮಾಧ್ಯಮಗಳನ್ನು ಬೆಂಬಲಿಸಬೇಕು ಎಂದರು.

ಸಂವಿಧಾನ ರಕ್ಷಿಸುವ ಪ್ಲಾನೆಟ್‌ ಜತೆ ಕೈಜೋಡಿಸುವೆ: ಸುಧಾಮ ದಾಸ್‌ ಭರವಸೆ

ಮತ್ತೊಬ್ಬ ವಿಧಾನಪರಿಷತ್‌ ಸದಸ್ಯ ಸುಧಾಮ ದಾಸ್‌ ಮಾತನಾಡಿ ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಎಂತೆಂತಹ ವಿದ್ಯಮಾನಗಳು ಜರುಗಿವೆ ಮತ್ತು ಇದರಿಂದ ಶೋಷಿತ ಮತ್ತು ದಲಿತರಿಗೆ ಆಗಿರುವ ನಷ್ಟಗಳೇನು ಎಂದು ಎಳೆ ಎಳೆಯಾಗಿ ಬಿಚ್ಚಿಟ್ಟರು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಕನ್ನಡ ಪ್ಲಾನೆಟ್‌ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ನಾನು ಪ್ಲಾನೆಟ್‌ ನ ಬೆಂಬಲಕ್ಕೆ ನಿಲ್ಲುವೆ. ನಾನೂ ಸಹ ಸಂವಿಧಾನ ಕುರಿತು ಜಾಗೃತಿ ಮೂಡಿಸುವ ಕೆಲಸ ಆರಂಭಿಸುತ್ತೇನೆ. ಕನ್ನಡ ಪ್ಲಾನೆಟ್‌ ನ ಸಹಕಾರ ಕೋರುತ್ತೇನೆ ಎಂದರು.

ಪ್ಲಾನೆಟ್‌ ತಂಡದ ಜತೆ ಇರಲು ಹೆಮ್ಮೆಯಾಗುತ್ತದೆ: ಮಾಜಿ ಶಾಸಕಿ ಡಾ.ಅಂಜಲಿ ಹೇಮಂತ್‌ ನಿಂಬಾಳ್ಕರ್‌:

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾ.ಅಂಜಲಿ ಹೇಮಂತ್‌ ನಿಂಬಾಳ್ಕರ್‌ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕನ್ನಡ ಪ್ಲಾನೆಟ್‌ ನ ಬದ್ಧತೆಯ ಪರಿಚಯವಾಗಿದೆ. ಈ ತಂಡದ ಜತೆ ಇರಲು ನಾನು ಈ ಸಮಾರಂಭದಲ್ಲಿ ಭಾಗವಹಿಸಿದ್ದೇನೆ.

ಇಂದು ಮಹಾತ್ಮಾ ಗಾಂಧಿ ಮತ್ತು ಅಂಬೇಡ್ಕರ್‌ ಅವರನ್ನು ಪ್ರತ್ಯೇಕಿಸಿ ನೋಡುವ ಸಂಚು ನಡೆಯುತ್ತಿದೆ. ಇಬ್ಬರ ದಾರಿ ಒಂದೇ ಆಗಿದ್ದರೂ ನಡೆಯುವ ಹಾದಿ ಮಾತ್ರ ಬೇರೆ ಬೇರೆಯಾಗಿತ್ತು. ಶೋಷಿತ ಸಮುದಾಯಗಳ ಏಳಿಗೆಯೇ ಇಬ್ಬರ ಗುರಿಯೂ ಆಗಿತ್ತು ಎಂದರು. ಹಿಂದುತ್ವದ ಹೆಸರಿನಲ್ಲಿ ಸಮಾಜ ಕಲುಷಿತಗೊಂಡಿದೆ. ನಕ್ಸಲರು ಶರಣಾಗಲೂ ಸಂವಿಧಾನ ಕಾರಣ ಎನ್ನುವುದನ್ನು ಮರೆಯಬಾರದು. ಹೋರಾಟಕ್ಕೆ ಧುಮುಕಿದ್ದೀರಿ. ಹಿಂಜರಿಯಬಾರದು. ನಾನು ನಿಮ್ಮ ಜತೆ ಇರುತ್ತೇನೆ ಎಂದು ಭರವಸೆ ತುಂಬಿದರು.

ಈ ಸಂವಿಧಾನ ಸಂಭ್ರಮ ಮತ್ತು ಕನ್ನಡ ಪ್ಲಾನೆಟ್‌  ಕಾನ್‌ ಕ್ಲೇವ್ ಕಾರ್ಯಕ್ರಮಕ್ಕೆ  ಕ್ಕೆ ಅಂಬೇಡ್ಕರ್‌ ಯೂತ್‌ ಫೆಡರೇಷನ್‌ ಸಹಯೋಗ ನೀಡಿತ್ತು. ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಪ್ಲಾನೆಟ್‌ ಪ್ರಧಾನ ಸಂಪಾದಕರಾದ ದಿನೇಶ್‌ ಕುಮಾರ್‌ ಎಸ್.ಸಿ, ಹರ್ಷಕುಮಾರ್‌ ಕುಗ್ವೆ ಮತ್ತು  ಅಂಬೇಡ್ಕರ್‌ ಯೂತ್‌ ಫೆಡರೇಷನ್‌ ಸಂಚಾಲಕ ರುದ್ರು ಪುನೀತ್‌ ಉಪಸ್ಥಿತರಿದ್ದರು. ನಂತರ ನಡೆದ ವಿವಿಧ ಗೋಷ್ಠಿಗಳಲ್ಲಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್‌ ಅಹಮದ್‌ , ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಮತ್ತು ಕರ್ನಾಟಕ ಜನಶಕ್ತಿ ಮುಖಂಡ ನೂರ್‌ ಶ್ರೀಧರ್‌ ಭಾಗವಹಿಸಿದ್ದರು.

ಕನ್ನಡ ಪ್ಲಾನೆಟ್‌ ಮತ್ತು ಅಂಬೇಡ್ಕರೈಟ್‌ ಯೂತ್‌ ಫೆಡರೇಶನ್‌ ಜಂಟಿಯಾಗಿ ನಡೆಸಿದ್ದ ಸಂವಿಧಾನ ವಿಡಿಯೋ ಭಾಷಣ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.

ಸಂವಿಧಾನದ ಬದಲಾವಣೆ ಸದ್ದಿಲ್ಲದೆ ನಡೆಯುತ್ತಿರುವ ಕುರಿತು ಎಚ್ಚರ ಬೇಕು: ಡಾ. ವೆಂಕಟೇಶಯ್ಯ ನೆಲ್ಲುಕುಂಟೆ

ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮಾನ್ಯ ಮುಖ್ಯಮಂತ್ರಿಗಳ ಆಪ್ತಕಾರ್ಯದರ್ಶಿಗಳಾದ ಡಾ. ವೆಂಕಟೇಶಯ್ಯ ನೆಲ್ಲಕುಂಟೆ ಮಾತನಾಡಿ, ಇಂದು ಸಂವಿಧಾನವು ಯಾರ ಗಮನಕ್ಕೂ ಬರದೇ ಬದಲಾವಣೆಗೆ ಒಳಗಾಗುತ್ತಿದೆ. ಸಂವಿಧಾನದ ಮೌಲ್ಯಗಳಿಗೆ ವಿರುದ್ಧ ಗತಿಯಲ್ಲಿ ಈ ಬದಲಾವಣೆ ಆಗುತ್ತಿರುವ ಕುರಿತು ಜನರಲ್ಲಿ ಜಾಗೃತಿ ಅಗತ್ಯವಿದೆ ಎಂದು ತಿಳಿಸಿದರು.

ಸಮಾರೋಪದ ನುಡಿಗಳನ್ನಾಡಿದ ಹಿರಿಯ ಸಾಹಿತಿ, ಚಿಂತಕರಾದ ಡಾ.ಮೂಡ್ನಾಕೂಡು ಚಿನ್ನಸ್ವಾಮಿಯವರು ಮಾತನಾಡಿ, ಇಂದು ಮೇಲ್ಜಾತಿಗಳಿಗೆ ಜಾತಿ ವಿನಾಶ ಬೇಕಾಗಿಲ್ಲ, ತಳಸಮುದಾಯಗಳಿಗೆ ಸಾಮಾಜಿಕ ನ್ಯಾಯ ಬೇಕಿದೆ. ಜಾತಿ ವಿನಾಶ ಆಗದಂತೆ ತಡೆಯುವ ಮಟ್ಟಕ್ಕೆ ವ್ಯವಸ್ಥೆ ಇದೆ. ಇಂದು ಸಬ್‌ ಕಾ ಸಾಥ್‌ ಸಬ್‌ ಕ್ ವಿಶ‍್ವಾಸ್‌ ಎಂದು ಹೇಳು ಪಕ್ಷ ಒಬ್ಬ ವ್ಯಕ್ತಿಗೂ ಕನಿಷ್ಟ ಪಂಚಾಯ್ತಿ ಚುನಾವಣೆಯ ಟಿಕೆನ್ನೂ ಕೊಟ್ಟಿಲ್ಲ. ಒಳಗೊಳ್ಳುವಿಕೆ ಇಲ್ಲದೆ ಸಂವಿಧಾನ ಜಾರಿಗೊಳಿಸಲು ಸಾಧ್ಯವಿಲ್ಲ. ಮುಸ್ಲಿಮರನ್ನು ಎರಡನೇ ದರ್ಜೆಯ ಪ್ರಜೆಗಳೆಂದು ಕಾಣುವ ವ್ಯವಸ್ಥೆ ಸಂವಿಧಾನ ವಿರೋಧಿಯಾದದ್ದು ಎಂದು ತಿಳಿಸಿದರು. ವೈಶಾಲಿ ಎನ್‌ ಬ್ಯಾಳಿ, ಕರವೇ ಮುಖಂಡ ಸಣ್ಣೀರಪ್ಪ, ಕನ್ನಡ ಪ್ಲಾನೆಟ್‌ ಪ್ರಧಾನ ಸಂಪಾದಕ ದಿನೇಶ್‌ ಕುಮಾರ್‌ ಎಸ್‌ ಸಿ ಉಪಸ್ಥಿತರಿದ್ದರು.

More articles

Latest article