ತಿರುವನಂತಪುರ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಯಶಸ್ಸಿನಹಾದಿಯಲ್ಲಿ ಸಾಗುತ್ತಿದ್ದು, ಚಂದ್ರಯಾನ-4 ಮತ್ತು ಗಗನಯಾನ ಮುಂದಿನ ಪ್ರಮುಖ ಯೋಜನೆಗಳಾಗಿವೆ ಎಂದು ಇಸ್ರೊಗೆ ಹೊಸ ಅಧ್ಯಕ್ಷರಾಗಿ ನೇಮಕಗೊಂಡಿರುವ ವಿ. ನಾರಾಯಣನ್ ಇಂದು ತಿಳಿಸಿದ್ದಾರೆ. ವಿ. ನಾರಾಯಣನ್ ಅವರು ಜ. 14ರಂದು ಇಸ್ರೊ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಇಸ್ರೊ ಮಹಾನ್ ಸಂಸ್ಥೆ. ಈ ಹಿಂದೆ ಅನೇಕ ಮಹಾನ್ ನಾಯಕರು ಸೇವೆ ಸಲ್ಲಿಸಿದ್ದಾರೆ. ಅಂತಹ ಮಹಾನ್ ಸಂಸ್ಥೆಯ ಭಾಗವಾಗಿರುವುದು ನನ್ನ ಅದೃಷ್ಟ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಎಲ್ಲವನ್ನು ನಿರ್ಧರಿಸುತ್ತಾರೆ. ಪ್ರಧಾನಿ ಕಾರ್ಯಾಲಯದಿಂದ ಕರೆ ಬಂದಿದೆ. ಈಗಿನ ಅಧ್ಯಕ್ಷ ಎಸ್.ಸೋಮನಾಥ್ ಅವರೂ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ ಎಂದರು. ನಂತರ ಇಸ್ರೊದ ಭವಿಷ್ಯದ ಪ್ರಮುಖ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡ ಅವರು, ನಿಮಗೆಲ್ಲರಿಗೂ ತಿಳಿದಿರುವಂತೆಯೇ ಮಹತ್ವದ ಯೋಜನೆಗಳನ್ನು ಕೈಗೊಳ್ಳುವ ಸಮಯ ಇದಾಗಿದೆ ಎಂದರು.
ಸ್ಪೇಸ್ ಡಾಕಿಂಗ್ ಯೋಜನೆಯಾದ ಸ್ಪೇಡೆಕ್ಸ್ ಕುರಿತು ಮಾತನಾಡಿದ ಅವರು ಡಾಕಿಂಗ್ ಪ್ರಯೋಗ ಜನವರಿ 9ರಂದು ನಡೆಯಲಿದೆ. ಗಗನಯಾನ ನಮ್ಮ ಮುಂದಿರುವ ಮತ್ತೊಂದು ಮಹತ್ತರ ಯೋಜನೆಯಾಗಿದ್ದು, ಇದೇ ತಿಂಗಳಲ್ಲಿ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 100ನೇ ಉಡ್ಡಯನ ನಡೆಯಲಿದೆ. ಜಿಎಸ್‌ಎಲ್‌ವಿ ಉಡ್ಡಯನ ವಾಹಕ ಮೂಲಕ ಎನ್‌ವಿಎಸ್-02 ನ್ಯಾವಿಗೇಷನ್ ಉಪಗ್ರಹ ಕಕ್ಷೆಗೆ ಸೇರಿಸಲಾಗುವುದು ಎಂದು ಅವರು ತಿಳಿಸಿದರು.
ಚಂದ್ರಯಾನ-4 ಯೋಜನೆಯ ಕುರಿತು ಮಾಹಿತಿ ನೀಡಿದ ಅವರು, ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಚಂದ್ರಯಾನ-4 ರಲ್ಲಿ ಅಲ್ಲಿಗೆ ಇಳಿದು ಮಾದರಿಗಳನ್ನು ಸಂಗ್ರಹಿಸಿ ಮರಳುವ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕೆಲಸಗಳು ಪ್ರಾರಂಭವಾಗಿವೆ ಎಂದರು. ಎಲ್ಲರಿಗೂ ತಿಳಿದಂತೆ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆಗೆ ಪ್ರಧಾನಿ ಅನುಮೋದನೆ ನೀಡಿದ್ದಾರೆ. ಬಾಹ್ಯಾಕಾಶ ನಿಲ್ದಾಣ ಐದು ಮಾಡ್ಯೂಲ್‌ಗಳನ್ನು ಹೊಂದಿರುತ್ತದೆ. ಈ ಪೈಕಿ ಮೊದಲಯನೇಯದು 2028ರಲ್ಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.