ಹೈದರಾಬಾದ್: ಪುಷ್ಪ 2 ಸಿನಿಮಾ ಪ್ರದರ್ಶನದ ಸಂದರ್ಭದಲ್ಲಿ ಸಂಧ್ಯಾ ಥಿಯೇಟರ್ ನಲ್ಲಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರನ್ನು ಇಂದು ಹೈದರಾಬಾದ್ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸತತ 4 ಗಂಟೆಗಳ ಕಾಲ ಅಲ್ಲು ಅರ್ಜುನ್ಗೆ ಪ್ರಶ್ನೆಗಳನ್ನು ಕೇಳಲಾಗಿದೆ.
ಡಿಸೆಂಬರ್ 2ರಂದು ಸಂಧ್ಯಾ ಥಿಯೇಟರ್ ನಲ್ಲಿ ಪುಷ್ಪ 2 ಸಿನಿಮಾ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 35 ವರ್ಷದ ಓರ್ವ ಮಹಿಳೆ ಅಸು ನೀಗಿದ್ದರು ಮತ್ತು ಆಕೆಯ ಪುತ್ರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೈದರಾಬಾದ್ ನಲ್ಲಿರುವ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಹಾಜರಾಗಿದ್ದರು.ಈ ಸಂದರ್ಭದಲ್ಲಿ ಅವರ ವಕೀಲರೂ ಜತೆಗಿದ್ದರು. ಕೇಂದ್ರ ವಲಯದ ಡಿಸಿಪಿ ಅಕ್ಷಾಂಕ್ಷ್ ಯಾದವ್ ಇವರ ವಿಚಾರಣೆ ನಡೆಸಿದ್ದಾರೆ. ಅಲ್ಲು ಅರ್ಜುನ್ ಆಗಮನದ ಹಿನ್ನಲೆಯಲ್ಲಿ ಪೊಲೀಸ್ ಠಾಣೆಗೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಕೆಲವು ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನೂ ನಿಷೇಧಿಸಲಾಗಿತ್ತು. ಡಿ.23ರಂದು ಇಂದು 11 ಗಂಟೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರು. ಅಲ್ಲು ಅವರ ನಿವಾಸದ ಬಳಿಯೂ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಮೃತ ಮಹಿಳೆಯ ಕುಟುಂಬಸ್ಥರು ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ನಟ ಅಲ್ಲು ಅರ್ಜುನ್, ಅವರ ಭದ್ರತಾ ಸಿಬಂದಿಗಳು ಹಾಗೂ ಥಿಯೇಟರ್ ಮಾಲೀಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ ವಿವಿಧ ಕಲಂಗಳ ಪ್ರಕಾರ ದೂರು ದಾಖಲಿಸಿದ್ದರು.
ಡಿಸೆಂಬರ್ 11ರಂದು ಪೊಲೀಸರು ಮಹಿಳೆಯ ಸಾವಿನ ಪ್ರಕರಣದ ಸಂಬಂಧ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದರು. ಆದರೆ ಅದೇ ದಿನ ತೆಲಂಗಾಣ ಹೈಕೋರ್ಟ್ ಅಂದೇ ನಾಲ್ಕು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ನಂತರ ಡಿಸೆಂಬರ್ 14ರ ಬೆಳಗ್ಗೆ ಅಲ್ಲು ಅರ್ಜುನ್ ಅವರನ್ನು ಜೈಲಿನಿಂದ ಬಿಡುಗಡೆಯಾಗಿದ್ದರು.