ಬೆಂಗಳೂರು: ಕಾಂಗ್ರೆಸ್ ಮುಖಂಡ ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಸಹೋದರಿ ಎಂದು ಹೇಳಿಕೊಂಡು ಮಹಿಳೆಯೊಬ್ಬರು 14.600 ಕೆಜಿಯಷ್ಟು ಚಿನ್ನಾಭರಣ ಖರೀದಿಸಿ ವಂಚನೆ ಮಾಡಿರುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯ ಗೌಡ, ನಟ ಧರ್ಮೇಂದ್ರ ಹಾಗೂ ಹರೀಶ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ನಿಂದ ಐಶ್ವರ್ಯ ಗೌಡ 11 ಬಾರಿ 14 ಕೆಜಿ ಚಿನ್ನ ಖರೀದಿಸಿ ವಂಚಿಸಿದ್ದಾಳೆ. ಚಿನ್ನಾಭರಣ ಮಳಿಗೆ ಮಾಲೀಕರಾದ ವನಿತಾ ಐತಾಳ್ ಅವರು ದೂರು ನೀಡಿದ್ದು, ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಐಶ್ವರ್ಯ ಗೌಡ ಜನವರಿಯಿಂದ ಇದುವರೆಗೂ 14 ಕೆಜಿ 600 ಗ್ರಾಂ ಚಿನ್ನಾಭರಣ ಖರೀದಿಸಿದ್ದಾರೆ. ಹಣ ಕೊಡಲು ಕೇಳಿದಾಗ ಮಾಜಿ ಸಂಸದ ಡಿ.ಕೆ. ಸುರೇಶ್ ಆಪ್ತರು ಎಂದು ಬೆದರಿಸಿದ್ದಾರೆ. ಈ ವೇಳೆ ಸಿನಿಮಾ ನಟ ಧರ್ಮೇಂದ್ರ ಎಂಬಾತನಿಂದ ಐಶ್ವರ್ಯಗೌಡ ಕರೆ ಮಾಡಿಸಿ, ಬೆದರಿಕೆ ಹಾಕಿದ್ದಾಳೆ. ಡಿ.ಕೆ ಸುರೇಶ್ ಧ್ವನಿಯಲ್ಲಿ ಧರ್ಮೇಂದ್ರ ಕರೆ ಮಾಡಿ ಹಣ ನೀಡಲು ವನಿತಾ ಐತಾಳ್ಗೆ ಕರೆ ಮಾಡಿ ಸಮಯ ಕೇಳಿದ್ದಾನೆ. ಕೊನೆಗೆ ತಾನೇ ಧರ್ಮೇಂದ್ರನನ್ನು ಕಳುಹಿಸಿ ಕೊಲೆ ಮಾಡಿಸುವುದಾಗಿಯೂ ಬೆದರಿಕೆ ಹಾಕಿದ್ದಾನೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ವನಿತಾ ಆರ್.ಆರ್. ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವನಿತಾ ಐತಾಳ್ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.