ಮುಂಬೈ: ದೇಶದ ಖ್ಯಾತ ಮಾಜಿ ಕ್ರಿಕೆಟ್ ಆಟಗಾರ ವಿನೋದ್ ಕಾಂಬ್ಳಿ ಕಳೆದ ಕೆಲವು ದಿನಗಳಿಂದ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದೀಗ ಮತ್ತೆ 52 ವರ್ಷದ ಅವರನ್ನು ಮುಂಬೈನ ಆಕೃತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಲ್ಲ ಮೂಲಗಳ ಪ್ರಕಾರ ಕಾಂಬ್ಳಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಇತ್ತೀಚೆಗೆ ಮುಂಬೈನ ಪ್ರಸಿದ್ಧ ಶಿವಾಜಿ ಪಾರ್ಕ್ ಮೈದಾನದಲ್ಲಿ ರಮಾಕಾಂತ್ ಅಚ್ರೇಕರ್ ಅವರ ಸ್ಮಾರಕ ಅನಾವರಣ ಕಾರ್ಯಕ್ರಮದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ರಮಾಕಾಂತ್ ಅವರ ತರಬೇತಿಯಲ್ಲಿ ಇವರಿಬ್ಬರೂ ಪಳಗಿದ್ದರು ಎನ್ನುವುದು ಈಗ ಇತಿಹಾಸ. ಈ ಸಮಾರಂಭದಲ್ಲೇ ಕಾಂಬ್ಳಿ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವುದು ಜಗಜ್ಜಾಹೀರಾಗಿತ್ತು.
ಎಕ್ಸ್ ನಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದರಲ್ಲಿ ಕಾಂಬ್ಳಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ವರದಿಗಳ ಪ್ರಕಾರ, ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಕಾಂಬ್ಳಿ ಯೂಟ್ಯೂಬ್ ಚಾನೆಲ್ನ ಸಂದರ್ಶನವೊಂದರಲ್ಲಿ ತಾನು ಗಂಭೀರ ಮೂತ್ರದ ಸೋಂಕಿನಿಂದ ಬಳಲುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಕುಡಿತದ ಚಟದಿಂದಲೇ ವಿನೋದ್ ಕಾಂಬ್ಳಿ ಅವರ ಆರೋಗ್ಯ ಹದಗೆಟ್ಟಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಿರಿಯ ಕ್ರಿಕೆಟಿಗ ಕಪಿಲ್ ದೇವ್, 1983 ರ ವಿಶ್ವಕಪ್ ತಂಡದ ಸಹ ಆಟಗಾರರೊಂದಿಗೆ ಕಾಂಬ್ಳಿಗೆ ಸಹಾಯ ಮಾಡುವುದಾಗಿ ಹೇಳಿಕೊಂಡಿದ್ದರು. ಆದರೆ ತಾವು ಸಹಾಯ ಮಾಡಬೇಕೆಂದರೆ ಕಾಂಬ್ಳಿ ಕುಡಿತ ಬಿಡಬೇಕು ಎಂಬ ಷರತ್ತನ್ನು ವಿಧಿಸಿದ್ದರು., ವಿನೋದ್ ಕಾಂಬ್ಳಿ ಕೂಡಾ ಕಪಿಲ್ ದೇವ್ ಅವರ ಪ್ರಸ್ತಾಪವನ್ನು ಒಪ್ಪಿಕೊಂಡು ಸಹಾಯಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದ್ದರು.