ಸಿಲ್ಚಾರ್( ಅಸ್ಸಾಂ): ಅಸ್ಸಾಂ ವಿಶ್ವವಿದ್ಯಾನಿಲಯದ ಬಾಲಕಿಯರ ವಸತಿ ನಿಲಯದಲ್ಲಿ ದೈತ್ಯ ಹೆಬ್ಬಾವು ಕಾಣಿಸಿಕೊಂಡಿದೆ. ಸುಮಾರು 100 ಕೆಜಿ ತೂಕ ಹಾಗೂ 17 ಅಡಿ ಉದ್ದದ ದೈತ್ಯ ಹೆಬ್ಬಾವು ಪತ್ತೆಯಾಗಿದ್ದು, ಈ ದೈತ್ಯ ಹಾವನ್ನು ಕಂಡು ವಿದ್ಯಾರ್ಥಿನಿಯರು ಬೆಚ್ಚಿ ಬಿದ್ದಿದ್ದಾರೆ. ಕೊನೆಗೆ ಈ ಹಾವನ್ನು ರಕ್ಷಣಾ ತಂಡ ಹಿಡಿದು ಅರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾಗಿದೆ. ಈ ಹಾವು ಹಿಡಿಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದೆ.
ಸಿಲ್ಚಾರ್ ಎಂಬಲ್ಲಿರುವ ಅಸ್ಸಾಂ ವಿಶ್ವವಿದ್ಯಾಲಯದ ಬಾಲಕಿಯರ ವಸತಿ ನಿಲಯದಲ್ಲಿ ರಾತ್ರಿ 10.30 ರ ವೇಳೆಗೆ 100 ಕೆಜಿ ತೂಕದ 17 ಅಡಿ ಉದ್ದದ ಬರ್ಮೀಸ್ ಹೆಬ್ಬಾವು ಕಾಣಿಸಿಕೊಂಡಿದೆ. ವನ್ಯಜೀವಿ ಸಂಶೋಧಕ ಮತ್ತು ಸಂರಕ್ಷಣಾ ತಜ್ಞ ಬಿಶಾಲ್ ಸೋನರ್, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಉರಗ ರಕ್ಷಕ ತ್ರಿಕಲ್ ಚಕ್ರವರ್ತಿ ಅವರು ಜಂಟಿ ಕಾರ್ಯಾಚರಣೆ ನಡೆಸಿ ಹಾವನ್ನು ರಕ್ಷಿಸಿ ಬರೈಲ್ ವನ್ಯಜೀವಿ ಅಭಯಾರಣ್ಯದಲ್ಲಿ ಬಿಡಲಾಗಿದೆ.
ಬಿಶಾಲ್ ಸೋನಾರ್ ಪ್ರತಿಕ್ರಿಯಿಸಿ ಇದು ಬರಾಕ್ ಕಣಿವೆ ಪ್ರದೇಶಗಳಲ್ಲಿ ಕಂಡು ಬರುವ ದೈತ್ಯ ಹೆಬ್ಬಾವು ಜಾತಿಗೆ ಸೇರಿದೆ. ಈ ಬರ್ಮೀಸಗ ಹೆಬ್ಬಾವು ಮನುಷ್ಯನಿಗೆ ಯಾವುದೇ ರೀತಿಯ ತೊಂದರೆ ಉಂಟು ಮಾಡುವುದಿಲ್ಲ ಅಥವಾ ದಾಳಿಯನ್ನೂ ಮಾಡುವುದಿಲ್ಲ ಎಂದು ಹೇಳಿದ್ದಾರೆ. factostats ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ರಕ್ಷಣಾ ತಂಡದ ಸದಸ್ಯರು ಬರೋಬ್ಬರಿ 17 ಅಡಿ ಉದ್ದದ ಬರ್ಮೀಸ್ ಹಾವನ್ನು ರಕ್ಷಿಸುವ ದೃಶ್ಯ ಮೈ ನವಿರೇಳೀಸುತ್ತದೆ.