ನೆಲಮಂಗಲ: ಬೆಂಗಳೂರು ತುಮಕೂರು ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 6 ಮಂದಿ ದುರ್ಮಣಕ್ಕೀಡಾಗಿದ್ದಾರೆ. ನೆಲಮಂಗಲ ತಾಲೂಕಿನ ಟಿ.ಬೇಗೂರು ಸಮೀಪ ಕಾರಿನ ಮೇಲೆ ಕಂಟೇನರ್ ಲಾರಿ ಬಿದ್ದ ಪರಿಣಾಮ ಕಾರಿನಲ್ಲಿದ್ದ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಸು ನೀಗಿದವರಲ್ಲಿ ಇಬ್ಬರು ಮಹಿಳೆಯರು ಇಬ್ಬರು ಹೆಣ್ಣು ಮಕ್ಕಳು, ಓರ್ವ ಪುರುಷ ಮತ್ತು ಒಬ್ಬ ಯುವಕ ಸಾವನ್ನಪ್ಪಿದ್ದಾರೆ. ಇದರಿಂದ ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ನಡುವೆಯೂ ಸರಣಿ ಅಪಘಾತ ಸಂಭವಿಸಿದೆ.
ಇದರಿಂದ ತುಮಕೂರು ರಸ್ತೆಯಲ್ಲಿ ಸುಮಾರು 10 ಕಿಮೀ ನಷ್ಟು ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದರು. ಕೆಲವೇ ತಿಂಗಳ ಹಿಂದೆಯಷ್ಟೇ ಈ ಕುಟುಂಬ ಕಾರು ಖರೀದಿ ಮಾಡಿತ್ತು. ಇಂದು ವಾರಂತ್ಯದ ಪ್ರವಾಸಕ್ಕೆ ಹೊರಟಿದ್ದರು.
ಕಂಟೇನರ್ ಕಾರಿನ ಮೇಲೆ ಬಿದ್ದಿದ್ದು, ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿತ್ತು. ಕಾರು ಹೊರತೆಗೆಯಲು ಪೊಲೀಸರು ಹರಸಾಹಸಪಡಬೇಕಾಯಿತು. ಕಂಟೇನರ್ ಭಾರಿ ವಾಹನವಾಗಿದ್ದು ಮೇಲೆತ್ತಲು ಕಷ್ಟಪಡಬೇಕಾಯಿತು. ಲಾರಿ ಬೆಲ್ಟ್, ಚೈನ್ಗಳನ್ನು ತರಿಸಿ ಮೂರು ಕ್ರೇನ್ಗಳ ಸಹಾಯದಿಂದ ಕಂಟೇನರ್ ಮೇಲೆತ್ತಿ ಕಾರನ್ನು ಹೊರತೆಗೆಯಲಾಯಿತು.
ನೆಲಮಂಗಲ ಪೊಲೀಸರು ಹಾಗೂ ಎಸ್ ಪಿ ಸಿ.ಕೆ ಬಾಬಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕಾರಿನಲ್ಲಿದ್ದವರ ಮಾಹಿತಿ ಕಲೆಹಾಕುತ್ತಿದ್ದಾರೆ.