ಇವತ್ತು ನಾನು ಮತ್ತು ಡಾ.ಸುರೇಶ್ ಗೌತಮ್ ಅವರು ಅಂಬೇಡ್ಕರ್ ಭವನಕ್ಕೆ ಹೋಗಿ ನಾಡಿದ್ದು 25 ಕ್ಕೆ ಹಮ್ಮಿಕೊಳ್ಳಲಾಗಿರುವ ರಾಜ್ಯಮಟ್ಟದ ಅಂಬೇಡ್ಕರ್ವಾದಿ ಯುವ ಸಮ್ಮೇಳನಕ್ಕೆ ಹಾಲ್ ಬುಕ್ ಮಾಡಿ ಇಂಡಿಯನ್ ಎಕ್ಸ್ಪ್ರೆಸ್ ದಾಟಿ ವಿಧಾನಸೌಧದ ಮುಂದೆ ಸಾಗುವಾಗ ಈಕಡೆ ಯಾರೋ ಇಬ್ಬರೇ ಹುಡುಗರು ಕೊರಳಿಗೆ ಅಂಬೇಡ್ಕರ್ ಫೋಟೋ ನೇತಾಕಿಕೊಂಡು ನಿಂತದ್ದನ್ನು ಸುರೇಶ್ ಗೌತಮ್ ಅವರು ಗಮನಿಸಿ ಅಲ್ನೋಡಿ ಸರ್ ಯಾರೋ ಇಬ್ಬರು ಮೊನ್ನೆಯ ಅಮಿತ್ ಶಾ ಹೇಳಿಕೆಯ ವಿಷಯಕ್ಕೆ ಈ ರೀತಿಯಾದ ಪ್ರತಿರೋಧ ತೋರುತ್ತಿರುವ ಹಾಗೆ ಕಾಣಸ್ತಿದೆ ಅಂದ್ರು. ನಾನು ನೋಡ್ತಾ ನೋಡ್ತಾ ಮುಂದೆ ಪಾಸ್ ಆದೆ. ಮುಂದಿನ ಸಿಗ್ನಲ್ ನಲ್ಲಿ U-Turn ಬೇರೆ ಇಲ್ಲ ಮೊದಲೇ ನನ್ನ ಕಾರ್ ಮೇಲೆ 14 ಸಾವಿರ ಫೈನ್ ಬೇರೆ ಇದೆ ಎನ್ ಮಾಡ್ಲಿ ಅಂತ ಆ 15 ಸೆಕೆಂಡ್ ನಲ್ಲಿ ತಲೆ ಇನ್ನೂರೈವತ್ತು ಸ್ಪೀಡ್ ನಲ್ಲಿ ಯೋಚನೆ ಬೇರೆ ಮಾಡ್ತಿತ್ತು. ಅಂಬೇಡ್ಕರ್ವಾದಿ ಅಂತ ಹೇಳಿಕೊಳ್ಳುವ ನಾವೇ ಅವರನ್ನ ಮಾತಾಡಸ್ಲಿಲ್ಲ ಅಂದ್ರೆ ಇನ್ಯಾರು ಮಾತಾಡಸ್ತಾರೆ ಅನ್ಕೊಂಡು 14 ಸಾವಿರ ಇದ್ದದ್ದು 15 ಆಗ್ತದೆ ಅಷ್ಟೇ ಅಲ್ವಾ ಅಂತ ಸಿಗ್ನಲ್ ಬ್ರೇಕ್ ಮಾಡಿ ಯು ಟರ್ನ್ ಹೊಡೆದುಬಿಟ್ಟೆ..
ಖುಶಿ ಆಗಿದ್ದೆನಂದ್ರೆ ನಾವು ಕಾರಲ್ಲಿ ಪಾಸ್ ಆಗುವಾಗ ಅವರನ್ನು ನೋಡ್ತಾ ಹೋಗಿದ್ದನ್ನು ಅವರೂ ಗಮನಿಸಿದ್ದಾರೆ, ಇವರು ಬರ್ತಾರೆ ಅಂತ ಅನ್ಕೊಂಡಿದ್ರಂತೆ ಹಾಗೆಯೇ ನಾವು ಹೋಗುತ್ತಿದ್ದಂಗೆ ನಾವು ಹೇಳುವ ಮುಂಚೆ ಅವರೇ ಜೈಭೀಮ್ ಸರ್ ಅಂದ್ರು. ಯಾವೂರ್ ಬ್ರದರ್ ನಿಮ್ಮದು, ಎನ್ ವಿಷಯಕ್ಕೆ ಈ ಥರ ಪ್ರತಿಭಟನೆ ಅಂತ ಕೇಳಿದ್ವಿ. ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಹೇಳಿಕೆಯನ್ನು ಖಂಡಿಸಿ ನಾವು ಈ ಥರ ಬರೀ ಗಾಲಲ್ಲಿ ಉಪವಾಸ ನಿಂತು ಬಾಬಾ ಸಾಹೇಬರ ಫೋಟೋವನ್ನು ಕೊರಳಿಗೆ ಮತ್ತು ಬೆನ್ನಿಗೆ ಕಟ್ಟಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ ಸರ್ ಅಂದ್ರು. ನಮಗೆ ಆ ಕ್ಷಣಕ್ಕೆ ಹೃದಯ ಭಾರವಾಯ್ತು. ಅವರು ನಮ್ಮಗಳ ಹಾಗೆ ಡಬ್ಬಲ್ ತ್ರಿಬ್ಬಲ್ ಪದವೀ ಪಡೆದವರೂ ಅಲ್ಲ, ಅಥವಾ ನೂರಾರು ಎಕರೆ ಜಮೀನ್ದಾರರು ಅಲ್ಲ, ಹೋಗಲಿ ಸರ್ಕಾರಿ ನೌಕರಿ ಪಡೆದು ಸುಖವಾಗಿ ಇದ್ದವರೂ ಅಲ್ಲ, ಅಲ್ಪ ಸ್ವಲ್ಪ ಶಿಕ್ಷಣ ಪಡೆದು ಖಾಸಗೀ ಕ್ಷೇತ್ರದಲ್ಲಿ ಸಣ್ಣ ನೌಕರಿ ಮಾಡುತ್ತಾ ಕಷ್ಟದ ಜೀವನವನ್ನ ಸಾಗಿಸುತ್ತಿರುವವರು ಆದರೂ ಇವರು ಬಾಬಾ ಸಾಹೇಬರನ್ನು ಈ ಮಟ್ಟಕ್ಕೆ ಎದೆಗೆ ಇಳಿಸಿಕೊಂಡಿದ್ದಾರಾ ಅಂತ ಆಶ್ಚರ್ಯವಾಯಿತು.
ಬಾಬಾ ಸಾಹೇಬರು ನೀಡಿದ ಶಿಕ್ಷಣ, ಸ್ವಾತಂತ್ರ್ಯ, ಅಧಿಕಾರ, ಭೂಮಿ, ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲವನ್ನು ಪಡೆದ ಮತ್ತು ಅಧಿಕಾರದಿಂದ ಕೋಟ್ಯಾಂತರ ರೂಪಾಯಿ ಗಳಿಸಿದ, ಐಷಾರಾಮಿ ಜೀವನ ನಡೆಸುತ್ತಿರುವ, ದೊಡ್ಡ ದೊಡ್ಡ ಕಾರುಗಳಲ್ಲಿ ಅಡ್ಡಾಡುತ್ತಿರುವ ಅದೆಷ್ಟೋ ಜನರಿಗೆ ಅಮಿತ್ ಶಾ ಯಾರಿಗೆ ಏನು ಹೇಳಿದ್ದಾನೆ ಅನ್ನೋ ವಿಷಯವೂ ಗೊತ್ತಿಲ್ಲದೇ, ಅಥವಾ ಗೊತ್ತಾಗಿಯೂ ಅದೇನ್ ಬಿಡ್ರೀ ಅತ್ಲಾಗೆ ಅನ್ಕೊಂಡು ಉಡಾಫೆಯಾಗಿ ಮಾತಾಡುವ ಕೋಟ್ಯಾಂತರ ಜನರ ನಡುವೆ, ಸರ್ ನಾನೊಬ್ಬ ದೇವದಾಸಿಯ ಮಗ ಸರ್, ನಮ್ಮಮ್ಮ 15 ವರ್ಷಗಳ ಹಿಂದೆಯೇ ತೀರಿಕೊಂಡ್ಲು, ಬಾಬಾ ಸಾಹೇಬರು ಕೊಟ್ಟ ಸಂವಿಧಾನದಿಂದಲೇ ಅಲ್ವೇ ನನ್ನಂತ ಒಬ್ಬ ದೇವದಾಸಿಯ ಮಗ ಕೂಡ ಘನತೆಯಿಂದ ಬದುಕುವ ಅವಕಾಶವಿರುವುದು ಹಾಗಿದ್ದಾಗ ಆ ತಂದೆಯ ಬಗ್ಗೆ ಒಬ್ಬ ಅವಿವೇಕಿ ಅವಹೇಳನವಾಗಿ ಮಾತನಾಡಿದಾಗ ಅದನ್ನು ಖಂಡಿಸಬೇಕಾಗಿರುವುದು ನಮ್ಮ ಕರ್ತವ್ಯ ಸರ್ ಅಂತ ಅವರು ಹೇಳಿದಾಗ ನಿಜಕ್ಕೂ ಎದೆ ಮತ್ತಷ್ಟು ಭಾರವಾಯ್ತು. ಬಾಬಾ ಸಾಹೇಬರನ್ನು ಉಸಿರಾಗಿಸಿಕೊಂಡಿರುವ ಇಂಥವರನ್ನು ಕಂಡಾಗ ಭೇಟಿಯಾಗಿ ಜೈಭೀಮ್ ಹೇಳದೆ ಏನೋ ಬಿಡಿ ಅಂತ Ignore ಮಾಡಿ ಮುಂದೆ ಸಾಗಿದ್ದರೆ ನಾನು ಆತ್ಮವಂಚಕನಾಗುತ್ತಿದ್ದೆ ಎಂದು ಅನ್ನಿಸಿತು..
-ರುದ್ರು ಪುನೀತ್