ಅಮರಾವತಿ: ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಆ ಮಹಿಳೆ ದೊಡ್ಡ ಪೆಟ್ಟಿಗೆಯಲ್ಲಿ ಪಾರ್ಸೆಲ್ ಬಂದಾಗ ಅದೆಷ್ಟು ಸಂತೋಷ ಪಟ್ಟಿದ್ದರೋ? ಮನೆ ನಿರ್ಮಾಣಕ್ಕೆ ನೆರವು ಕೇಳಿದ್ದ ಆಕೆಗೆ ಕಟ್ಟಡ ನಿರ್ಮಾಣಕ್ಕೆ ಬೇಕಾಗಿರುವ ವಸ್ತುಗಳು ಬಂದಿವೆ ಎಂದು ಊಹಿಸಿದ್ದರು. ಅದೇ ಕುತೂಹಲದಿಂದ ಪಾರ್ಸೆಲ್ ಬಾಕ್ಸ್ ತೆರೆದಾಗ ಅವರಿಗೆ ಆಘಾತ ಕಾದಿತ್ತು. ಪಾರ್ಸೆಲ್ ಒಳಗೆ ಅಪರಿಚಿತ ವ್ಯಕ್ತಿಯ ತುಂಡರಿಸಿದ ಶವ ಇಟ್ಟು ಕಳುಹಿಸಲಾಗಿತ್ತು.
ಪಶ್ಚಿಮ ಗೋದಾವರಿ ಜಿಲ್ಲೆಯ ಉಂಡಿ ಮಂಡಲದ ಯೆಂಡಗಂಡಿ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಮನೆ ಕಟ್ಟಲು ಆರ್ಥಿಕ ನೆರವು ನೀಡುವಂತೆ ಯೆಂಡಗಂಡಿ ಗ್ರಾಮದ ನಾಗ ತುಳಸಿ ಎಂಬ ಮಹಿಳೆ ಕ್ಷತ್ರಿಯ ಸೇವಾ ಸಮಿತಿಗೆ ಅರ್ಜಿ ಸಲ್ಲಿಸಿದ್ದರು. ಸಮಿತಿಯು ಈ ಮಹಿಳೆಗೆ ಹಿಂದೆ ಟೈಲ್ಸ್‌ಗಳನ್ನು ಕಳುಹಿಸಿತ್ತು. ಇನ್ನಷ್ಟು ನೆರವು ಒದಗಿಸುವಂತೆ ಅವರು ಕ್ಷತ್ರಿಯ ಸೇವಾ ಸಮಿತಿಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಸಮಿತಿಯು ವಿದ್ಯುತ್ ಉಪಕರಣಗಳನ್ನು ಒದಗಿಸುವುದಾಗಿ ಭರವಸೆ ನೀಡಿತ್ತು.
ಗುರುವಾರ ರಾತ್ರಿ ತುಳಸಿ ಅವರ ಮನೆಗೆ ಬಂದ ವ್ಯಕ್ತಿಯೊಬ್ಬ, ಮನೆ ಬಾಗಿಲಿನ ಮುಂದೆ ಪೆಟ್ಟಿಗೆಯೊಂದನ್ನು ಇರಿಸಿ, ಅದರಲ್ಲಿ ವಿದ್ಯುತ್ ಉಪಕರಣಗಳು ಇವೆ ಎಂದು ತಿಳಿಸಿ ಹೋಗಿದ್ದ. ತುಳಸಿ ಅವರು ಪೆಟ್ಟಿಗೆ ತೆರೆದು ನೋಡಿದಾಗ ಅದರ ಒಳಗೆ ವ್ಯಕ್ತಿಯೊಬ್ಬನ ಶವ ಇತ್ತು.ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಪಾರ್ಸೆಲ್ ಜತೆಗೆ ಒಂದು ಪತ್ರವಿದ್ದು, 1.30 ಕೋಟಿ ರೂ ಹಣ ನೀಡಬೇಕು. ಇಲ್ಲವಾದಲ್ಲಿ ಕುಟುಂಬ ಗಂಭೀರ ಪರಿಣಾಮ ಎದುರಿಸಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ಬಾಕ್ಸ್ ತಂದುಕೊಟ್ಟ ವ್ಯಕ್ತಿಯನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಮೃತ ವ್ಯಕ್ತಿಯ ದೇಹ ಅಂದಾಜು 45 ವರ್ಷದ ಪುರುಷನದ್ದು ಎಂದು ಊಹಿಸಿರುವ ಪೊಲೀಸರು 4-5 ದಿನಗಳ ಹಿಂದೆ ಆತ ಸತ್ತಿರಬಹುದು ಎಂದು ಶಂಕಿಸಿದ್ದಾರೆ. ಆತನನ್ನು ಕೊಲೆ ಮಾಡಲಾಗಿದೆಯೇ ಎಂಬುದನ್ನು ತಿಳಿಯಲು ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.