ಬೆಳಗಾವಿ: ಬಾಣಂತಿಯರ ಸಾವಿನ ವಿಚಾರವನ್ನ ಮುಂದಿಟ್ಟುಕೊಂಡು ಬಿಜೆಪಿ ಆರೋಗ್ಯ ಇಲಾಖೆಯ ಬಗ್ಗೆ ಸುಳ್ಳುಗಳನ್ನು ಹೇಳುವುದು ಸರಿಯಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂದು ವಿಧಾನ ಸಭೆ ಕಲಾಪದಲ್ಲಿ ಬಾಣಂತಿಯರ ಸಾವುಗಳ ಕುರಿತು ನೈಜ ವಿಚಾರಗಳನ್ನು ಸದನದ ಮುಂದಿಟ್ಟ ಸಚಿವರು, ಇಲಾಖೆಯ ಕಾರ್ಯಪ್ರಗತಿ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ಬಾಣಂತಿಯರ ಸಾವಿನ ಪ್ರಕರಣ ವಿಚಾರದಲ್ಲಿ ನ್ಯಾಯಾಂಗ ತನಿಖೆಗೆ ವಹಿಸಲು ಸಿಎಂ ಜೊತೆ ಮಾತನಾಡುವುದಾಗಿ ಸದನಕ್ಕೆ ಸ್ಪಷ್ಟಪಡಿಸಿದ ಗುಂಡೂರಾವ್ ಈ ವಿಚಾರದಲ್ಲಿ ನಾವು ಯಾವುದನ್ನು ಮುಚ್ಚಿಡುವ ಉದ್ದೇಶ ಹೊಂದಿಲ್ಲ ಎಂದರು.
ಹಿಂದಿನ ಸರ್ಕಾರದ ಅವಧಿಯಲ್ಲಿ 108 ಅಂಬ್ಯುಲೆನ್ಸ್ ಗಳಲ್ಲಿ ಜಿಪಿಎಸ್ ಇರಲಿಲ್ಲ. ನಾವು ಅಧಿಕಾರಕ್ಕೆ ಬಂದ ಬಳಿಕ ಅಂಬ್ಯುಲೆನ್ಸ್ ಗಳಿಗೆ ಜಿ.ಪಿ.ಎಸ್ ತಂತ್ರಜ್ಞಾನ ಅಳವಡಿಸಲಾಗಿದೆ. 2021- 22 ರಲ್ಲಿ NHM ನಲ್ಲಿ ಶೇ 61 ರಷ್ಟು ಖರ್ಚಾಗಿತ್ತು. 22-23 ರಲ್ಲಿ ಶೇ 73 ರಷ್ಟು ಹಾಗೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಳೆದ ಸಾಲಿನಲ್ಲಿ ಶೇ 84.57 ರಷ್ಟು ಅನುದಾನ ಖರ್ಚು ಮಾಡಲಾಗಿದೆ. ಆರೋಗ್ಯ ಇಲಾಖೆಗೆ ಬರುವ ಅನುದಾನದಲ್ಲಿ ಕಳೆದ ಸಾಲಿನಲ್ಲಿ ಶೇ 97.91 ರಷ್ಟು ಪ್ರಗತಿ ಸಾಧಿಸಿದ್ದು, ಪ್ರಸಕ್ತ ಸಾಲಿನಲ್ಲಿ ಶೇ 60 ರಷ್ಟು ಪ್ರಗತಿ ಸಾಧಿಸಲಾಗಿದೆ. ಹಿಂದನ ಸರ್ಕಾರದ ಅವಧಿಯಲ್ಲಿ ಔಷಧಿ ಸರಬರಾಜು ನಿಗಮದಿಂದ ಆಸ್ಪತ್ರೆಗಳಿಗೆ ಕೇವಲ ಶೇ 35 ರಷ್ಟು ಔಷಧಿಗಳು ಮಾತ್ರ ಆಸ್ಪತ್ರೆಗಳಿಗೆ ಪೂರೈಸಲಾಗಿತ್ತು. ನಾವು ಅಧಿಕಾರಕ್ಕೆ ಬಂದ ಬಳಿಕ KSMCL ನಿಂದ ಶೇ 85 ರಷ್ಟು ಔಷಧಿಗಳನ್ನು ಆಸ್ಪತ್ರೆಗಳಿಗೆ ಪೂರೈಸಲಾಗಿದೆ ಎಂದರು.
ಬಾಣಂತಿಯರ ಸಾವಿನ ವಿಚಾರದಲ್ಲಿ ನೋವಿದೆ. ಕಳೆಪೆ ಐವಿ ದ್ರಾವಣದಿಂದ ಆಗಿದ್ದರೂ, ಆರೋಗ್ಯ ಸಚಿವನಾಗಿ ನಾನು ಜವಾಬ್ದಾರಿಯಿಂದ ನುಣಿಚಿಕೊಳ್ಳಲು ಸಾಧ್ಯವಿಲ್ಲ. ಫಾರ್ಮಾ ಕಂಪನಿಗಳ ಲಾಬಿ ಇಂದು ದೇಶಾದ್ಯಂತ ಇದೆ. ಅವರಿಗೆ ಕಡಿವಾಣ ಹಾಕಲು ನಮ್ಮ ಕೇಂದ್ರ ಸರ್ಕಾರದ ಮಟ್ಟದಲ್ಲಿ ಕಠಿಣ ಕಾಯ್ದೆಗಳ ಅಗತ್ಯವಿದೆ. ಈ ರೀತಿಯ ಗುಣಮಟ್ಟ ಇಲ್ಲದ ಔಷಧಿಗಳ ಪೂರೈಸಿದ ಕಂಪನಿ ಮಾಲೀಕರ ವಿರುದ್ಧ ನ್ಯಾಯಾಲಯದಲ್ಲಿ ಹೆಚ್ಚೆಂದರೆ ನ್ಯಾಯಾಧೀಶರು ತಮ್ಮ ಕುರ್ಚಿಯಿಂದ ಎದ್ದು ಹೋಗುವ ವರೆಗೆ ಮಾತ್ರ ಶಿಕ್ಷೆ ವಿಧಿಸಲಾಗುತ್ತೆ. ಅಂದರೆ ಒಂದು ದಿನ ಮಾತ್ರ ಜೈಲು ಶಿಕ್ಷೆಯಿದೆ. ಯಾರಿಗೂ ಭಯವಿಲ್ಲದಂತಾಗಿದೆ ಎಂದು ಸಚಿವರು ಹೇಳಿದರು.
ಐವಿ ರಿಂಗರ್ ಲ್ಯಾಕ್ಟೇಟ್ ಅನ್ನ ಪೂರೈಸಿದ್ದ ಪಶ್ಚಿಮ ಬಂಗಾ ಕಂಪನಿಯನ್ನು ದೇಶದ ಯಾವ ರಾಜ್ಯದಲ್ಲೂ ಬ್ಲಾಕ್ ಲಿಸ್ಟ್ ಗೆ ಸೇರಿಸಿರಲಿಲ್ಲ. ನಾವೇ ಮೊದಲು ಬ್ಲಾಕ್ ಲಿಸ್ಟ್ ಗೆ ಸೇರಿಸಿದ್ಧೇವೆ. ಇಬ್ಬರು ಬಾಣಂತಿಯರು ಚೇತರಿಸಿಕೊಂಡಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದ ತಕ್ಷಣ ರಾಜೀವ್ ಗಾಂಧಿ ಆರೋಗ್ಯ ವಿ.ವಿ ತಜ್ಞ ವೈದ್ಯರ ತಂಡ ರಚಿಸಿ ವರದಿ ಪಡೆದಿಯಲಾಗಿದೆ. ವರದಿ ಪ್ರಕಾರ ವೈದ್ಯರ ಸೇವೆಯಲ್ಲಿ ಕುಂದುಕೊರತೆಗಳಾಗಿಲ್ಲ. ಆದರೆ ಐವಿ ದ್ರಾವಣ ಒಂದು ಕಾರಣವಾಗಿರಬಹುದು ಎಂದು ತಂಡ ಅನುಮಾನ ವ್ಯಕ್ತಪಡಿಸಿತ್ತು. ತಂಡದ ವರದಿ ಹಿನ್ನೆಲೆಯಲ್ಲಿ ಕಂಪನಿ ಪೈರೈಸಿದ್ದ 192 ಬ್ಯಾಚ್ ಗಳನ್ನ ಐವಿ ದ್ರಾವಣವನ್ನ ತಡೆಹಿಡಿಯಲಾಗಿದ್ದು, ಕಂಪನಿಯ 9 ಬ್ಯಾಚ್ ಗಳ ವಿಚಾರದಲ್ಲಿ ಕಂಪನಿಯ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಸಚಿವರು ಹೇಳಿದರು.
ಫಾರ್ಮಾ ಕಂಪನಿಗಳು ಇಂದು ನಮ್ಮ ದೇಶಕ್ಕೊಂದು ಉತ್ಪಾದನಾ ಘಟಕ ಹಾಗೂ ವಿದೇಶಕ್ಕೆ ಕಳಿಸುವ ಔಷಧಿಗಳಿಗೆ ಪ್ರತ್ಯೇಕ ಉತ್ಪಾದನಾ ಘಟಕಗಗಳನ್ನ ಹಾಕಿಕೊಂಡಿವೆ. ದೇಶಕ್ಕೆ ಒಂದು ರೀತಿ ವಿದೇಶಗಳಿಗೆ ಇನ್ನೊಂದು ರೀತಿಯ ಗುಣಮಟ್ಟದ ಔಷಧಿಗಳನ್ನ ಪೂರೈಸುತ್ತಿವೆ. ಈ ತಾರತಮ್ಯ ಇರಲೇ ಬಾರದು. ಬಾಣಂತಿಯರ ಸಾವನ್ನ ನಾವು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಬಳ್ಳಾರಿಯಲ್ಲಿ ಅಷ್ಟೇ ಅಲ್ಲ. ರಾಜ್ಯದ ಬೇರೆ ಕಡೆಯೂ ಐವಿ ದ್ರಾವಣದಿಂದ ಸಾವುಗಳಾಗಿರಬಹುದು. ಹೀಗಾಗಿ ಪ್ರತಿಯೊಂದು ತಾಯಿ ಮುಗುವಿನ ಸಾವುಗಳನ್ನ ಪರಿಶೀಲಿಸಲು ನಾನು ಸೂಚಿಸಿದ್ದೇನೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.