ಬೆಳಗಾವಿ : ಗೃಹಲಕ್ಷ್ಮೀ ಯೋಜನೆಯ ಆಯ್ದ ಫಲಾನುಭವಿಗಳೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸುವರ್ಣ ವಿಧಾನಸೌಧಕ್ಕೆ ಆಗಮಿಸಿ ಗಮನ ಸೆಳೆದರು. ಕುವೆಂಪು ನಗರದಲ್ಲಿರುವ ತಮ್ಮ ನಿವಾಸದಿಂದ ಸುವರ್ಣ ವಿಧಾನಸೌಧಕ್ಕೆ ವಿಶೇಷ ವಾಹನದಲ್ಲಿ ಫಲಾನುಭವಿಗಳೊಂದಿಗೆ ಸಚಿವರು ಬಂದದ್ದು ವಿಶೇಷವಾಗಿತ್ತು.
ಗೃಹ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೆ, ಎಲ್ಲರಿಗೂ ಯೋಜನೆಗಳನ್ನು ತಲುಪಿಸುವುದೇ ನಮ್ಮ ಉದ್ದೇಶ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪವಂತಾಗಬೇಕು. ಗೃಹಲಕ್ಷ್ಮೀ ಯೋಜನೆ ಮೂಲಕ ಪ್ರತಿ ತಿಂಗಳು ಸಿಗುವ 2 ಸಾವಿರ ರೂಪಾಯಿ ಲಕ್ಷಾಂತರ ಹೆಣ್ಣುಮಕ್ಕಳಿಗೆ ಸಹಾಯವಾಗಿದೆ. ಒಬ್ಬರು ಗೃಹಲಕ್ಷ್ಮಿ ಯೋಜನೆಯ ಹಣದಿಂದ ಗ್ರಂಥಾಲಯ ತೆರೆದರೆ, ಗದಗ ಗಜೇಂದ್ರದಢದ ಅತ್ತೆ-ಸೊಸೆ ಸೇರಿ ತಮ್ಮ ಜಮೀನಿನಲ್ಲಿ ಬೋರ್ವೆಲ್ ಕೊರೆಸಿದ್ದಾರೆ. ಕಣ್ಣಿನ ಶಸ್ತ್ರಚಿಕಿತ್ಸೆ, ವೈದ್ಯಕೀಯ ಖರ್ಚು ವೆಚ್ಚಗಳು, ಮಕ್ಕಳಿಗೆ ಶಾಲಾ ಫೀಜು, ಮಕ್ಕಳಿಗೆ ಬೈಕ್ ಕೊಡಿಸಿರುವುದು.. ಹೀಗೆ ಅನೇಕ ರೂಪದಲ್ಲಿ ಗೃಹಲಕ್ಷ್ಮೀ ಯೋಜನೆಯ ಹಣ ಬಡ ಮಹಿಳೆಯರಿಗೆ ಸಹಾಯವಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಗೃಹಲಕ್ಷ್ಮೀಯರ ಜೊತೆಗೆ ತೃತೀಯ ಲಿಂಗಿಯರಿಗೂ ಗೃಹಲಕ್ಷ್ಮೀ ಯೋಜನೆಯ ಹಣ ತಲುಪಿಸಲಾಗುತ್ತಿದೆ. ಯೋಜನೆಯಿಂದ ಆದ ಲಾಭದ ಬಗ್ಗೆ ಫಲಾನುಭವಿಗಳು ಹೇಳಿಕೊಳ್ಳುವಾಗ ಯೋಜನೆ ಜಾರಿಗೆ ತಂದಿದ್ದಕ್ಕೂ ಸಾರ್ಥಕ ಎನಿಸುತ್ತದೆ. ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ತಲುಪಬೇಕು ಎಂಬುದೇ ನಮ್ಮ ಆಸೆ ಎಂದು ಸಚಿವರು ಹೇಳಿದರು.
ಸಚಿವರಿಗೆ ದೃಷ್ಟಿ ತೆಗೆದ ಮಂಗಳಮುಖಿಯರು:
ಮಂಗಳಮುಖಿಯರು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ದೃಷ್ಟಿ ತೆಗೆದು ಶುಭ ಹಾರೈಸಿದರು. ನಿಮ್ಮಿಂದ ನಮಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಸಿಗುತ್ತಿದೆ. ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಸಚಿವರಿಗೆ ಕೈಮುಗಿದ ಧನ್ಯವಾದ ಅರ್ಪಿಸಿದರು.
ಇದೇ ಸಂದರ್ಭದಲ್ಲಿ ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದ ಬಾಗವ್ವ ಸಣ್ಣಕ್ಕಿ ,ಗೃಹಲಕ್ಷ್ಮಿಯ ಹಣ ಕೂಡಿಟ್ಟು ಮಗನಿಗೆ ಬೈಕ್ ಕೊಡಿಸಿದ್ದರು. ಇಂದು ಸಚಿವರಿಗೆ ಹೊಸ ಬೈಕ್ ತೋರಿಸಿ, ಖುಷಿ ಹಂಚಿಕೊಂಡರು.