ಬೆಳಗಾವಿ: ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣ ಪೂರೈಸಿದ್ದ ಪಶ್ಚಿಮ ಬಂಗಾ ಕಂಪನಿಯನ್ನು ಈಗಾಗಲೇ ಕಪ್ಪುಪಟ್ಟಿ ಗೆ ಸೇರಿಸಲಾಗಿದ್ದು, ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೂ ಐವಿ ದ್ರಾವಣ ಉತ್ಪಾದನೆ ಮಾಡದಂತೆ ಕಂಪನಿಯ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಇಂದು ವಿಧಾನ ಪರಿಷತ್ ನಲ್ಲಿ ಬಾಣಂತಿಯರ ಸಾವುಗಳ ಕುರಿತು ಮಾಹಿತಿ ನೀಡಿದ ಸಚಿವ ದಿನೇಶ್ ಗುಂಡೂರಾವ್, ದೇಶದಲ್ಲಿ ಔಷಧ ನಿಯಂತ್ರಣ ವ್ಯವಸ್ಥೆಯಲ್ಲಿ ಇರುವ ಲೋಪ ದೋಷಗಳು ಈ ರೀತಿಯ ಪ್ರಕರಣಗಳಿಗೆ ಕಾರಣವಾಗಿದೆ ಎಂದರು.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವಿನ ಪ್ರಕರಣ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದ ತಜ್ಞ ವೈದ್ಯರ ತಂಡವನ್ನ ರಚಿಸಿ ಪರಿಶೀಲಿಸಲಾಗಿತ್ತು. ತಜ್ಞರ ತಂಡ ಐವಿ ರಿಂಗರ್ ಲ್ಯಾಕ್ಟೇಟ್ ಬಗ್ಗೆ ಸಂಶಯ ವ್ಯಕ್ತಪಡಿಸಿತು. ವರದಿಯ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಪಶ್ಚಿಮ ಬಂಗಾ ಕಂಪನಿ ಪೂರೈಸಿದ್ದ ಎಲ್ಲ ಬ್ಯಾಚ್ ಗಳ ದ್ರಾವಣವನ್ನ ತಡೆಹಿಡಿದು, ಟೆಸ್ಟಿಂಗ್ ಮಾಡಿಸಲಾಗಿದೆ. ಅಲ್ಲದೇ ಉತ್ತಮ ಗುಣಮಟ್ಟ ಹೊಂದಿರದ 9 ಬ್ಯಾಚ್ ಗಳ ಹಿನ್ನೆಲೆಯಲ್ಲಿ ಕಂಪನಿಯವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಪಶ್ಚಿಮ ಬಂಗಾ ಕಂಪನಿಯ ಪೂರೈಸಿದ್ದ 22 ಬ್ಯಾಚ್ ಗಳು ಗುಣಮಟ್ಟ ಹೊಂದಿಲ್ಲ ಎಂದು ರಾಜ್ಯದ ಡ್ರಗ್ ಕಂಟ್ರೋಲರ್ ವರದಿ ನೀಡಿದ್ದರೂ, ಇದರಲ್ಲಿ ನಾಲ್ಕು ಬ್ಯಾಚ್ ಗಳಿಗೆ ಸೆಂಟ್ರಲ್ ಡ್ರಗ್ ಲ್ಯಾಬ್ ಗುಣಮಟ್ಟ ಹೊಂದಿದೆ ಎಂದು ವರದಿ ನೀಡಿತ್ತು. ಈ ಬಗ್ಗೆ ಕೇಂದ್ರ ಡ್ರಗ್ ಕಂಟ್ರೋಲರ್ ಗೆ ಪತ್ರ ಬರೆದು, ಬಾಣಂತಿಯರ ಸಾವಿನ ಪ್ರಕರಣ ಉಲ್ಲೇಖಿಸಿ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಲಾಗಿತ್ತು. ಕೇಂದ್ರ ಡ್ರಗ್ ಕಂಟ್ರೋಲರ್ ಸೇರಿದಂತೆ ರಾಜ್ಯ ಹಾಗೂ ಪಶ್ಚಿಮ ಬಂಗಾಳದ ಡ್ರಗ್ ಕಂಟ್ರೋಲರ್ ಗಳು ಕಂಪನಿಯ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಉತ್ಪಾದನೆಯಲ್ಲಿ ಗಣಮಟ್ಟದ ವ್ಯವಸ್ಥೆ ಹೊಂದಿಲ್ಲ ಎಂದು ವರದಿ ನೀಡಿದ್ದಾರೆ. ಅಲ್ಲದೇ ಐವಿ ದ್ರಾವಣ ಉತ್ಪಾದನೆ ಮಾಡದಂತೆ ಪಶ್ಚಿಮ ಬಂಗಾ ಕಂಪನಿ ಮೇಲೆ ನಿರ್ಬಂಧ ಕೂಡ ಹೇರಲಾಗಿದೆ. ಇದು ಒಂದು ಉತ್ತಮ ಬೆಳವಣಿಗೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಸಾವಿಗೀಡಾದ ಬಾಣಂತಿಯರಿಗೆ ತಲಾ ಐದು ಲಕ್ಷ ಪರಿಹಾರವನ್ನ ಘೋಷಿಸಲಾಗಿದ್ದು, ಪಶ್ಚಿಮ ಬಂಗಾ ಕಂಪನಿಯಿಂದ ಹೆಚ್ಚಿನ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಡ್ರಗ್ ವ್ಯವಸ್ಥೆಯಲ್ಲಿ ಲೋಪ ದೋಷಗಳಿರುವುದು ನಿಜ. ಇಡೀ ದೇಶದಲ್ಲಿ ಡ್ರಗ್ ಲಾಬಿ ಜೋರಾಗಿದೆ. ಇದನ್ನು ನಿಯಂತ್ರಣ ಮಾಡಲು ನಮ್ಮ ಕೇಂದ್ರದ ಕಾಯ್ದೆಗಳು ಸಡಿಲವಾಗಿವೆ. ರಾಜ್ಯ ಸರ್ಕಾರ ತನ್ನ ಹಂತದಲ್ಲಿ ವ್ಯವಸ್ಥೆ ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವುದಾಗಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಈ ನಿಟ್ಟಿನಲ್ಲಿ ರಾಜ್ಯದ ಔಷಧಿ ನಿಯಂತ್ರಣ ಇಲಾಖೆ ಹಾಗೂ ಆಹಾರ ಸುರಕ್ಷತಾ ಇಲಾಖೆಯನ್ನು ವಿಲೀನಗೊಳಿಸಲಾಗಿದೆ. ಇದರಿಂದ ಔಷಧ ನಿಯಂತ್ರಣ ಇಲಾಖೆ ಐಎಎಸ್ ಮಟ್ಟದ ಅಧಿಕಾರಿ ಮೇಲ್ವಿಚಾರಣೆಗೆ ಒಳಪಟ್ಟಿದೆ ಎಂದರು.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಾವಿಗೀಡಾದ ಬಾಣಂತಿಯರ ಪ್ರಕರಣ ಅಷ್ಟೇ ಅಲ್ಲ.. ರಾಜ್ಯದಲ್ಲಿ ನಡೆದ ಪ್ರತಿಯೊಂದು ತಾಯಿ ಮಗುವಿನ ಸಾವುಗಳ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದೇನೆ. ಎಷ್ಟೋ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ. ಯಾವುದನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಎಲ್ಲ ಪ್ರಕರಣಗಳನ್ನು ಪರಿಶೀಲನೆ ನಡೆಸಿ ವರದಿ ನೀಡುವಂತೆ ಹೇಳಿದ್ದೇನೆ. ಸಾವಿಗೀಡಾದ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವುದು ನಮ್ಮ ಜವಾಬ್ದಾರಿ. ಲೋಪ ದೋಷಗಳನ್ನ ಸರಿಪಡಿಸಿಕೊಂಡು ನಾವು ಮುಂದೆ ಸಾಗಬೇಕಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.