ಬೆಳಗಾವಿ: ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯು ಬೆಂಗಳೂರಿಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುವ ಪ್ರಸ್ತಾವನೆ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಐಡೆಕ್ ಸಂಸ್ಥೆ ಸೂಚಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ ವಿಧಾನಪರಿಷತ್ತಿಗೆ ತಿಳಿಸಿದ್ದಾರೆ.
ಮಂಗಳವಾರ ಜೆಡಿಎಸ್ ಸದಸ್ಯ ಟಿಎನ್ ಜವರಾಯಿ ಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು, ಗುಡ್ಡಗಾಡು ಪ್ರದೇಶ, ಎತ್ತರದ ರಚನೆಗಳು, ಸಂಪರ್ಕ-ರಸ್ತೆ, ರೈಲು ಮತ್ತು ಮೆಟ್ರೋ ಸಂಪರ್ಕ, ಬಳಕೆದಾರರಿಗೆ ಉದ್ದೇಶಿತ ವಿಮಾನ ನಿಲ್ದಾಣವನ್ನು ತಲುಪುವ ದೂರ ಮತ್ತು ಸಮಯ, ವಿಸ್ತಾರವಾದ ಭೂಪ್ರದೇಶ, ಜಮೀನಿನ ಪ್ರಕಾರಗಳು, ಕಡಿಮೆ ಜನಸಾಂದ್ರತೆಯ ಪ್ರದೇಶ ಮತ್ತು ಜಲಸಂಪನ್ಮೂಲದ ಲಭ್ಯತೆ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಸಂಭಾವ್ಯ ಸ್ಥಳಗಳ ಅಧ್ಯಯನವನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ಸಂಬಂಧ ಯೋಜನಾ ವರದಿ ಅಥವಾ ಪ್ರಸ್ತಾವನೆಯನ್ನು ಸಿದ್ಧಪಡಿಸುವ ಕಾರ್ಯ ಪರಿಶೀಲನೆಯಲ್ಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು ಕೈಗಾರಿಕಾ ಪ್ರದೇಶಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯ ಉದ್ದೇಶಗಳಿಗೆಂದು ಮೀಸಲಿಟ್ಟಿರುವ ಸಿ.ಎ. ನಿವೇಶನಗಳನ್ನು ಪಾರದರ್ಶಕವಾಗಿ ಮತ್ತು ನಿಯಮಗಳಿಗೆ ಅನುಸಾರವಾಗಿ ಹಂಚಲಾಗುತ್ತಿದೆ. ಜೊತೆಗೆ ಇದರಲ್ಲಿ ಎಸ್ ಸಿ ಎಸ್ ಟಿ ಸಮುದಾಯಗಳ ಅರ್ಹರಿಗೂ ಅವಕಾಶ ಸಿಗಬೇಕೆಂದು ಮೀಸಲಾತಿಯನ್ನು ಕಡ್ಡಾಯಗೊಳಿಸಲಾಗಿದೆ. ಇದರಲ್ಲಿ ಸ್ವಜನ ಪಕ್ಷಪಾತವಾಗಲಿ, ಅಕ್ರಮವಾಗಲಿ ಏನೂ ನಡೆದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.