ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ಮೊದಲನೇ ಆರೋಪಿ ಪವಿತ್ರಾ ಗೌಡ ಮಂಗಳವಾರ ಬೆಳಿಗ್ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ಪ್ರಕರಣದಲ್ಲಿ ಅವರು 179 ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು.
ಶುಕ್ರವಾರ ಹೈಕೋರ್ಟ್ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಮಂದಿಗೆ ಜಾಮೀನು ಮಂಜೂರು ಮಾಡಿತ್ತು. ಶನಿವಾರ ರಜೆ ಇದ್ದ ಕಾರಣ ಸೋಮವಾರ ಬೆಂಗಳೂರು ನಗರದ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ದಾಖಲೆ ಪತ್ರಗಳಿಗೆ ಸಹಿ ಹಾಕಿ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿದ್ದರು.
ಪವಿತ್ರಾ ಮಂಗಳವಾರ ಬೆಳಿಗ್ಗೆ ಬಿಡುಗಡೆಯಾಗುತ್ತಿದ್ದಂತೆ ಜೈಲಿನ ಸಮೀಪ ಇರುವ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರ ತಾಯಿ ಮತ್ತು ಸಹೋದರ ಜತೆಗಿದ್ದರು. ನಗುನಗುತ್ತಲೇ ಜೈಲಿನಿಂದ ಹೊರಬಂದದ್ದು ವಿಶೇಷವಾಗಿತ್ತು.
ಪವಿತ್ರಾ ಗೌಡ ನೇರವಗಿ ರಾಜರಾಜೇಶ್ವರಿ ನಗರದ ತಮ್ಮ ಮನೆಗೆ ಆಗಮಿಸಲಿದ್ದಾರೆ. ಇದಕ್ಕಾಗಿ ಅವರ ಮನೆಯ ಮುಂದೆ ರಂಗೋಲಿ ಹಾಕಿ ಸ್ವಾಗತ ಕೋರಲಾಗಿದೆ. ಇಂದು ಮನೆಯಲ್ಲೇ ಇರುವ ಪವಿತ್ರಾ ಮಗಳ ಸಂಭ್ರಮ ಹೇಳತೀರದು. ಬೆಂಗಳೂರು ಬಿಟ್ಟು ತೆರಳದಂತೆ ಹೈಕೋರ್ಟ್ ಜಾಮೀನು ಷರತ್ತು ವಿಧಿಸಿರುವುದರಿಂದ ಅವರು ಹೊರಹೋಗುವಂತಿಲ್ಲ.
ಅತ್ತ ಜೈಲಿನಿಂದ ಬಿಡುಗಡೆಯಾಗಿರುವ ನಟ ದರ್ಶನ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪವಿತ್ರಾ ಗೌಡ ಅವರು ಜಾಮೀನಿಗೆ ತಲಾ 1 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿ ನೀಡಿದ್ದಾರೆ. ಕೋರ್ಟ್ ವಿಚಾರಣೆಗೆ ತಪ್ಪದೇ ಹಾಜರಾಗಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಇಂತಹುದ್ದೇ ಬೇರೆ ಕೃತ್ಯಗಳಲ್ಲಿ ಭಾಗಿಯಾಗಬಾರದು. ಕೋರ್ಟ್ ಅನುಮತಿಯಿಲ್ಲದೆ ಸೆಷನ್ಸ್ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳಬಾರದು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
ರೇಣುಕಾಸ್ವಾಮಿ ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಸಂದೇಶಗಳನ್ನು ಕಳುಹಿಸುತ್ತಿದ್ದ. ಇದರಿಂದ ಕೆರಳಿದ ಪವಿತ್ರಾ ಗೌಡ ಆಪ್ತರಾಗಿರುವ ದರ್ಶನ್ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಣ ಮಾಡಿ ಬೆಂಗಳೂರಿಗೆ ಕರೆತಂದು, ಪಟ್ಟಣಗೆರೆ ಶೆಡ್ನಲ್ಲಿ ಹಲ್ಲೆಮಾಡಿ ಹತ್ಯೆ ಮಾಡಲಾಗಿದೆಯೆಂಬ ಆರೋಪ ಈ ಆರೋಪಿಗಳ ಮೇಲಿದೆ.