ರಿಯಲ್‌ ಎಸ್ಟೇಟ್‌ ಉದ್ಯಮಿ ಮನೆಯಲ್ಲಿ 50 ಲಕ್ಷ ರೂ ಚಿನ್ನಾಭರಣ ಕಳವು

Most read

ಬೆಂಗಳೂರು: ಬೆಂಗಳೂರಿನ ತಿಲಕ್‌ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿರುವ ರಿಯಲ್‌ ಎಸ್ಟೇಟ್‌ ಉದ್ಯಮಿ ನಾಗರಾಜ್‌ ಅವರ ನಿವಾಸದಲ್ಲಿ ದುಷ್ಕರ್ಮಿಗಳು ಸುಮಾರು 50 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣಗಳನ್ನು ದೋಚಿದ್ದಾರೆ. ಇವರು ಎರಡು ವರ್ಷಗಳಿಂದ ಜಯನಗರ 4ನೇ ಬ್ಲಾಕ್‌ನ 13ನೇ ಮುಖ್ಯರಸ್ತೆಯ ಅಪಾರ್ಟ್‌ ಮೆಂಟ್‌ನಲ್ಲಿ ತಮ್ಮ ಕುಟುಂಬದವರೊಂದಿಗೆ ವಾಸಿಸುತ್ತಿದ್ದರು. ಐದು ಅಂತಸ್ತಿನ ಅಪಾರ್ಟ್‌ಮೆಂಟ್‌ನಲ್ಲಿ ಐದು ಫ್ಲ್ಯಾಟ್‌ಗಳು ಮಾತ್ರ ಇದ್ದು, ಒಂದನೇ ಅಂತಸ್ತಿನ ಫ್ಲ್ಯಾಟ್ ನಲ್ಲಿ ನಾಗರಾಜ್‌ ನೆಲೆಸಿದ್ದರು. ಇವರು ತಮ್ಮ ಕುಟುಂಬದವರೊಂದಿಗೆ ಡಿ.13ರಂದು ರಾತ್ರಿ ಮನೆಗೆ ಬೀಗ
ಹಾಕಿಕೊಂಡು ಮಂತ್ರಾಲಯಕ್ಕೆ ತೆರಳಿ ಭಾನುವಾರ ರಾತ್ರಿ ಮರಳಿದ್ದರು. ಮನೆಗೆ ಬಂದಾಗ ಕಳ್ಳತನ ನಡೆದಿರುವುದು ತಿಳಿದು ಬಂದಿದೆ. ಬೀರುವಿನಲ್ಲಿ ಇಟ್ಟಿದ್ದ 500 ಗ್ರಾಂ ಚಿನ್ನಾಭರಣ, ಬೆಳ್ಳಿ ಸಾಮಗ್ರಿ ಮತ್ತು ರೂ. 3 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ ಎಂದು ನಾಗರಾಜ್‌ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಮನೆ ಪ್ರವೇಶಿಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಅಪಾರ್ಟ್‌ ಮೆಂಟ್ ನ ಭದ್ರತಾ ಸಿಬ್ಬಂದಿ
ಆರು ತಿಂಗಳ ಹಿಂದೆಯೇ ಕೆಲಸ ಬಿಟ್ಟಿದ್ದ. ನಂತರ ಹೊಸ ಸೆಕ್ಯೂರಿಟಿ ಗಾರ್ಡ್‌ ನೇಮಕ ಆಗಿರಲಿಲ್ಲ. ಬಹುಶಃ ನಾಗರಾಜ್‌ ಅವರ ವ್ಯವಹಾರ ಮತ್ತು ಕುಟುಂಬದ ಮಾಹಿತಿ ಇರುವವರೇ ಕಳ್ಳತನ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಪಾರ್ಟ್‌ ಮೆಂಟ್ ನ ಅಕ್ಕಪಕ್ಕದ ಮನೆಗಳ ಸಿಸಿಟಿವಿಗಳಲ್ಲೂ ಕಳ್ಳರ ಚಲನವಲನ ಪತ್ತೆಯಾಗಿದ್ದು ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.




More articles

Latest article