ಬೆಳ್ಳಂಬೆಳಗ್ಗೆ ಗುಂಡಿನ ಸದ್ದು; ರೌಡಿಶೀಟರ್ ಕಾಲಿಗೆ ಗುಂಡು ಹೊಡೆದು ಬಂಧಿಸಿದ ಆನೇಕಲ್‌ ಪೊಲೀಸರು

Most read

ಆನೇಕಲ್: ಪೊಲೀಸರ ಕೈಗೆ ಸಿಕ್ಕಿ ಬೀಳದೆ ತಲೆ ಮರೆಸಿಕೊಂಡಿದ್ದ ರೌಡಿಶೀಟರ್ ಬೆಸ್ತಮಾನಹಳ್ಳಿ ಲೋಕೇಶ್ ಅಲಿಯಾಸ್ ಲೋಕಿ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ. ಈತನನ್ನು ಬಂಧಿಸಲು ಪೊಲೀಸರ ತಂಡ ತೆರಳಿದಾಗ ಈತ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾನೆ. ಆಗ ಜಿಗಣಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಮಂಜುನಾಥ್ ಅವರು ಆತ್ಮರಕ್ಷಣೆಗಾಗಿ ಈತನ ಕಾಲಿಗೆ ಗುಂಡು ಹಾರಿಸಲಾಗಿದೆ. ಇಂದು ಬೆಳಗಿನ ಜಾವ ಈ ಘಟನೆ ನಡೆದಿದೆ. ಹಲವಾರು ಪ್ರಕರಣಗಳಲ್ಲಿ ಲೋಕಿ ಪೊಲೀಸರಿಗೆ ಬೇಕಾಗಿದ್ದ. ಗಾಯಗೊಂಡಿರುವ ರೌಡಿಶೀಟರ್ ಲೋಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮೋಹನ್‌ಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿ ಲೋಕೇಶ್ ಅಲಿಯಾಸ್ ಲೋಕಿ ಮೂರು ಪ್ರಕರಣಗಳಲ್ಲಿ ಬೇಕಾಗಿದ್ದ.

ಪ್ರಕರಣ ಸಂಬಂಧ ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್‌ ಪಿ ನಾಗೇಶ್ ಕುಮಾರ್ ಮಾತನಾಡಿ, ಜಿಗಣಿ ಪೊಲೀಸ್ ಠಾಣೆಯಲ್ಲಿ ಆರೋಪಿ ಲೋಕಿ ವಿರುದ್ಧ ಯತ್ನ ಕೇಸ್ ದಾಖಲಾಗಿದೆ. ಆರೋಪಿಯನ್ನು ಬಂಧಿಸಲು ಪಿಎಸ್ಐ ಸಿದ್ದನಗೌಡ ನೇತೃತ್ವದ ತಂಡ ತೆರಳಿತ್ತು. ಈ ವೇಳೆ ಆರೋಪಿ ಲೋಕಿ ಪೊಲೀಸರ ಮೇಲೆ ಹಲ್ಲೆ ಮಾಡಿ, ಪರಾರಿಯಾಗಲು ಯತ್ನಿಸಿದ್ದ. ಆಗ ಆತನ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ ಎಂದು ತಿಳಿಸಿದರು.

ಆರೋಪಿ ಲೋಕಿ ಮೇಲೆ ಕೊಲೆ ಮತ್ತು ಕೊಲೆ ಯತ್ನ ನಡೆಸಿದ ಪ್ರಕರಣಗಳು ದಾಖಲಾಗಿವೆ. ರೌಡಿ ಶೀಟರ್ ಮನು ಹತ್ಯೆಗೆ ಯತ್ನಸಿದ್ದ ಪ್ರಕರಣದಲ್ಲಿ ಲೋಕಿ ಪ್ರಮುಖ ಆರೋಪಿಯಾಗಿದ್ದಾನೆ. ಲೋಕಿ ಸಹಚರರ ಪತ್ತೆಗಾಗಿ ನಾಲ್ಕು ತಂಡ ರಚನೆ ಮಾಡಲಾಗಿತ್ತು. ಬೆಂಗಳೂರು ಗ್ರಾಮಾಂತರ ವಿಭಾಗದಲ್ಲಿ ರೌಡಿಸಂ ಮಟ್ಟ ಹಾಕುತ್ತೇವೆ ಮತ್ತು ಶೀಘ್ರದಲ್ಲೇ ಉಳಿದ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಎಸ್‌ ಪಿ ಅವರು ತಿಳಿಸಿದ್ದಾರೆ.

More articles

Latest article