ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ದಾಖಲಾಗಿದ್ದ ಹಿಂದೂ ಧರ್ಮದ ಕುರಿತ ಅವಹೇಳನಕಾರಿ ಹೇಳಿಕೆ ಆರೋಪ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಹಿಂದೂ ಧರ್ಮವನ್ನು ನಿಂದಿಸುವ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಕೀಲ ಕೆ.ದಿಲೀಪ್ ಕುಮಾರ್ ಅವರು ದಾಖಲಿಸಿದ್ದ ಖಾಸಗಿ ದೂರನ್ನು ಇಂದು ಹೈಕೋರ್ಟ್ ರದ್ದುಪಡಿಸಿದೆ.
2022ರ ನವೆಂಬರ್ನಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಆಯೋಜಿಸಲಾಗಿದ್ದ ಮಾನವ ಬಂಧುತ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಸಚಿವ ಸತೀಶ್ ಜಾರಕಿಹೊಳಿ, ಹಿಂದೂ ಎಂಬ ಪದ ಎಲ್ಲಿಂದ ಬಂದಿದೆ? ಇದು ನಮ್ಮ ಪದವಲ್ಲ ಪರ್ಷಿಯನ್ ಭಾಷೆಯಿಂದ ಬಂದಿದೆ. ಭಾರತಕ್ಕೂ ಪರ್ಷಿಯನ್ಗೂ ಏನು ಸಂಬಂಧ? ಎಂದು ಪ್ರಶ್ನಿಸಿದ್ದರು. ಹಿಂದೂ ಎನ್ನುವುದು ಭಾರತೀಯ ಪದವೇ ಅಲ್ಲ, ಅದು ಪರ್ಷಿಯನ್ ಪದ. ವಾಸ್ತವ ಸಂಗತಿ ಹೀಗಿರುವಾಗ ಹಿಂದೂ ನಮ್ಮದು ಹೇಗೆ ಆಯಿತು ಎನ್ನುವುದನ್ನು ಕುರಿತು ಚರ್ಚೆ ಆಗಬೇಕಿದೆ. ಹಿಂದೂ ಪದದ ಅರ್ಥ ಬಹಳ ಅಶ್ಲೀಲವಾಗಿದೆ. ಅದು ನಿಮಗೆ ತಿಳಿದರೆ ನಾಚಿಕೆ ಆಗುತ್ತದೆ. ಎಲ್ಲಿಂದಲೋ ಬಂದಿರುವ ಧರ್ಮವನ್ನು ತಂದು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಇವರ ಹೇಳಿಕೆಯನ್ನು ಖಂಡಿಸಿ 2022ರಲ್ಲಿ ದಿಲೀಪ್ ಕುಮಾರ್ ಖಾಸಗಿ ದೂರು ದಾಖಲಿಸಿದ್ದರು. ದೂರು ಪರಿಗಣಿಸಿದ್ದ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯದ ನ್ಯಾ. ಕೆ.ಎನ್.ಶಿವಕುಮಾರ್ ಅವರಿದ್ದ ಪೀಠ ವಿಚಾರಣೆಗೆ ಹಾಜರಾಗುವಂತೆ ಸತೀಶ್ ಜಾರಕಿಹೊಳಿಗೆ ಸಮನ್ಸ್ ಜಾರಿ ಮಾಡಿತ್ತು. ಬಳಿಕ ಈ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸತೀಶ್ ಜಾರಕಿಹೊಳಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ಸತೀಶ್ ಜಾರಕಿಹೊಳಿಯವರ ಅರ್ಜಿಯನ್ನು ಪುರಸ್ಕರಿಸಿ ಪ್ರಕರಣವನ್ನು ರದ್ದುಗೊಳಿಸಿದೆ.